ಪ್ರತಿ ಆರು ತಿಂಗಳಿಗೆ ಒಂದು ಹೊಸ ಇವಿ ಬೈಕ್ ಉತ್ಪನ್ನ ಪರಿಚಯಿಸಲಿದೆ ಬೆಂಗಳೂರಿನ ಒಬೆನ್ ಎಲೆಕ್ಟ್ರಿಕ್
ಹೊಸ ಮಾದರಿಯ ಇವಿ ವಾಹನ ಉತ್ಪನ್ನಗಳ ಉತ್ಪಾದನೆಯಲ್ಲಿ ನಮ್ಮ ಬೆಂಗಳೂರಿನ ಹಲವು ಸ್ಟಾರ್ಟ್ಅಪ್ ಕಂಪನಿಗಳು ಮುಂಚೂಣಿ ಸಾಧಿಸುತ್ತಿದ್ದು, ಒಬೆನ್ ಇವಿ ಕಂಪನಿಯು ಕೂಡಾ ಶೀಘ್ರದಲ್ಲಿಯೇ ತನ್ನ ಹೊಸ ಇವಿ ಬೈಕ್ ಬಿಡುಗಡೆಗೆ ಸಿದ್ದವಾಗುತ್ತಿದೆ.

ಮಾರುಕಟ್ಟೆಯಲ್ಲಿನ ಬೇಡಿಕೆ ಆಧರಿಸಿ ಎಲೆಕ್ಟ್ರಿಕ್ ಸ್ಟಾರ್ಟ್ಅಪ್ ವಾಹನ ಉತ್ಪಾದನಾ ಕಂಪನಿಗಳು ವಿವಿಧ ಮಾದರಿಯ ಇವಿ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದು, ಬೆಂಗಳೂರು ಮೂಲದ ಒಬೆನ್ ಇವಿ(OBEN EV) ಕಂಪನಿಯು ಕೂಡಾ ಆಕರ್ಷಕವಾದ ಇವಿ ಬೈಕ್ ಮಾದರಿಯೊಂದನ್ನು ಅಭಿವೃದ್ದಿಗೊಳಿಸಿ ಬಿಡುಗಡೆ ಮಾಡುತ್ತಿದೆ.

ಒಬೆನ್ ಇವಿ ಕಂಪನಿಯ ಸಹ ಸಂಸ್ಥಾಪಕ ದಿನಕರ್ ಅಗರ್‌ವಾಲ್ ಅವರು ಇವಿ ಬೈಕ್ ಉತ್ಪಾದನಾ ಹೊಸ ಯೋಜನೆ ಕುರಿತಂತೆ ಮಾಧ್ಯಮ ಸಂಸ್ಥೆಯೊಂದರ ಸಂದರ್ಶನದಲ್ಲಿ ಮಾತನಾಡಿದ್ದು, ಗ್ರಾಹಕರ ಬೇಡಿಕೆಯೆಂತೆ ಕಂಪನಿಯು ಪ್ರಮುಖ ನಾಲ್ಕು ಮಾದರಿಗಳನ್ನು ಸಿದ್ದಗೊಳಿಸಿದ್ದು, ಮುಂದಿನ ಎರಡು ವರ್ಷಗಳಲ್ಲಿ ಪ್ರತಿ ಆರು ತಿಂಗಳಿಗೆ ಒಂದರಂತೆ ಬಿಡುಗಡೆ ಮಾಡುವ ಯೋಜನೆ ಹೊಂದಿರುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

ಇವಿ ವಾಹನಗಳಿಗೆ ಉತ್ತಮ ಬೇಡಿಕೆ ಹರಿದುಬರುತ್ತಿರುವುದರಿಂದ ಒಬೆನ್ ಇವಿ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಹೊಸ ವೈಶಿಷ್ಟ್ಯತೆಯ ಹೈ ಸ್ಪೀಡ್ ಇವಿ ಬೈಕ್ ಮಾದರಿಯೊಂದರ ಮಾಹಿತಿಯನ್ನು ಈಗಾಗಲೇ ಹಂಚಿಕೊಂಡಿದ್ದು, ಕಂಪನಿಯ ಮೊದಲ ಇವಿ ಬೈಕ್ ಮಾದರಿಯು ಮುಂಬರುವ ಏಪ್ರಿಲ್ ಅಥವಾ ಮೇ ಒಳಗಾಗಿ ಮಾರುಕಟ್ಟೆ ಪ್ರವೇಶಿಸಲಿದೆ.

ಒಬೆನ್ ಇವಿ ಕಂಪನಿಯು ಹೊಸ ಇವಿ ಬೈಕ್ ಮಾದರಿಯು ಮಾರುಕಟ್ಟೆಯಲ್ಲಿರುವ ಇತರೆ ಇವಿ ದ್ವಿಚಕ್ರ ವಾಹನ ಮಾದರಿಗಳಿಂತಲೂ ಅತ್ಯುತ್ತಮ ತಾಂತ್ರಿಕ ಅಂಶಗಳೊಂದಿಗೆ ಹೈ ಸ್ಪೀಡ್ ಮತ್ತು ಅಧಿಕ ಮೈಲೇಜ್ ಖಾತ್ರಿಪಡಿಸಿದ್ದು, ಹೊಸ ಇವಿ ಬೈಕ್ ಉತ್ಪಾದನೆಗಾಗಿ ಮೊದಲ ಹಂತದಲ್ಲಿ ಸುಮಾರು ರೂ. 18 ಕೋಟಿ ಹೂಡಿಕೆಯೊಂದಿಗೆ ಉತ್ಪಾದನೆಗೆ ಚಾಲನೆ ನೀಡಿದೆ.

ಮಾಹಿತಿಗಳ ಪ್ರಕಾರ, ಹೊಸ ಒಬೆನ್ ಇವಿ ಬೈಕ್ ಮಾದರಿಯು ಪ್ರತಿ ಗಂಟೆಗೆ ಗರಿಷ್ಠ 100 ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದು, ಪ್ರತಿ ಚಾರ್ಜ್‌ಗೆ 200 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ. ಆದರೆ ಹೊಸ ಬೈಕ್ ಮಾದರಿಯ ಬ್ಯಾಟರಿ ಮಾಹಿತಿ ಲಭ್ಯವಾಗಿಲ್ಲವಾದರೂ ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯತೆಯೊಂದಿಗೆ ಕೇವಲ 2 ಗಂಟೆಗಳಲ್ಲಿ ಪೂರ್ತಿ ಚಾರ್ಜ್ ಆಗಲಿದೆ.

ವಿಶೇಷವೆಂದರೆ ಹೊಸ ಒಬೆನ್ ಇವಿ ಬೈಕ್ ಮಾದರಿಯು ನಮ್ಮ ಬೆಂಗಳೂರಿನಲ್ಲಿಯೇ ಸಿದ್ದವಾಗುತ್ತಿದ್ದು, ಬೆಂಗಳೂರಿನ ನಿವಾಸಿಗಳಾದ ದಿನಕರ್ ಮತ್ತು ಮಧುಮತಿ ಅಗರವಾಲ್ ಎನ್ನುವ ದಂಪತಿಯು ಈ ಹೊಸ ಇವಿ ಬೈಕ್ ಮಾದರಿಯನ್ನು ನಿರ್ಮಾಣ ಮಾಡಿದ್ದಾರೆ.

ಮೆಕ್ಯಾನಿಕಲ್ ಇಂಜಿನಿಯರಿಂಗ್ ವೃತ್ತಿ ಹಿನ್ನಲೆ ಹೊಂದಿರುವ ದಿನಕರ್ ಅಗರ್‌ವಾಲ್ ಮತ್ತು ಮಧುಮತಿ ಅಗರವಾಲ್ ದಂಪತಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆ ಆಧರಿಸಿ ಒಬೆನ್ ಇವಿ ಬೈಕ್ ಮಾದರಿಯನ್ನು ನಿರ್ಮಾಣ ಮಾಡಿದ್ದು, ಬೈಕ್ ಅನಾವರಣ ಹೊರತಾಗಿ ಯಾವುದೇ ಹೆಚ್ಚುವರಿ ತಾಂತ್ರಿಕ ಮಾಹಿತಿ ಹಂಚಿಕೊಂಡಿಲ್ಲ.

ಸದ್ಯ ಪೋಟೋಟೈಪ್ ಮಾದರಿಯೊಂದಿಗೆ ವಿವಿಧ ಹಂತದ ರೋಡ್ ಟೆಸ್ಟಿಂಗ್ ನಡೆಸಲಾಗುತ್ತಿದ್ದು, ಹೊಸ ಇವಿ ಬೈಕ್ ಮಾದರಿಯ ನಿರ್ಮಾಣಕ್ಕಾಗಿ ಸಂಪೂರ್ಣವಾಗಿ ಸ್ಥಳೀಯ ನಿರ್ಮಾಣದ ಬಿಡಿಭಾಗಗಳನ್ನೇ ಬಳಕೆ ಮಾಡಲಾಗಿದೆ.

ಜೊತೆಗೆ ಹೊಸ ಇವಿ ಬೈಕ್ ಮಾದರಿಯ ರೈಡಿಂಗ್ ಸುಲಭಗೊಳಿಸಲು ಕನೆಕ್ಟೆಡ್ ಫೀಚರ್ಸ್ ನೀಡಲಾಗಿದ್ದು, ಹೊಸ ಬೈಕಿನಲ್ಲಿ ಸ್ಮಾರ್ಟ್ ಕನೆಕ್ಟ್ ಮೂಲಕ ಹಲವಾರು ತಾಂತ್ರಿಕ ಅಂಶಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಸುಲಭವಾಗಿ ಪಡೆಯಬಹುದಾಗಿದೆ.

ಈ ಮೂಲಕ ಹೊಸ ಬೈಕ್ ಮಾದರಿಯು ಸಾಂಪ್ರಾದಾಯಿಕ ವಾಹನಗಳಿಂದ ಇವಿ ವಾಹನಗಳತ್ತ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಹೊಸ ಬೈಕ್ ಮಾದರಿಯು ಮುಂದಿನ ಕೆಲವು ದಿನಗಳಲ್ಲಿ ಮತ್ತಷ್ಟು ಹೊಸ ವೈಶಿಷ್ಟ್ಯತೆಗಳೊಂದಿಗೆ ಸುಧಾರಣೆಗೊಳ್ಳಲಿದೆ.

ಒಬೆನ್ ಇವಿ ಕಂಪನಿಯು ಹೊಸ ಬೈಕ್ ಮಾದರಿಯನ್ನು ಇನ್ನಷ್ಟು ಹೊಸ ವೈಶಿಷ್ಟ್ಯತೆಗಳೊಂದಿಗೆ ಉತ್ಪಾದನಾ ಮಾದರಿಯನ್ನು ಶೀಘ್ರದಲ್ಲೇ ಅನಾವರಣಗೊಳಿಸಲಿದ್ದು, ಹೊಸ ಇವಿ ಬೈಕ್ ಮಾದರಿಯು ಈ ವರ್ಷದ ಮಧ್ಯಂತರದಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

250 ಸಿಸಿ ಬೈಕ್ ಮಾದರಿಗಳ ಮಾದರಿಯ ಬಾಡಿ ಶೈಲಿ ಹೊಂದಿರುವ ಒಬೆನ್ ಇವಿ ಬೈಕ್ ಮಾದರಿಯು ಅತ್ಯುತ್ತಮ ಎಲೆಕ್ಟ್ರಿಕ್ ಮೋಟಾರ್ ಹೊಂದಿದ್ದು, ಕೇವಲ 3 ಸೆಕೆಂಡ್‌ಗಳಲ್ಲಿ ಸೊನ್ನೆಯಿಂದ 40 ಕಿ.ಮೀ ವೇಗಪಡೆದುಕೊಳ್ಳುವುದರ ಜೊತೆಗೆ ಕ್ವಿಕ್ ಆಕ್ಸೆರೇಷನ್ ಮೂಲಕ ಯುವ ಗ್ರಾಹಕರ ಹಾಟ್ ಫೇವರಿಟ್ ಆಗಲಿದೆ.

ಹೊಸ ಬೈಕ್ ಮಾದರಿಗಾಗಿ ಸದ್ಯ ಯಾವುದೇ ಸ್ವತಂತ್ರ ಉತ್ಪಾದನಾ ಸೌಲಭ್ಯ ಹೊಂದಿರದ ಒಬೆನ್ ಇವಿ ಕಂಪನಿಯು ಉತ್ಪಾದನಾ ಸೌಲಭ್ಯಕ್ಕಾಗಿ ಶೀಘ್ರದಲ್ಲೇ ಹೊಸ ಯೋಜನೆಯನ್ನು ಪ್ರಕಟಿಸಬಹುದಾಗಿದ್ದು, ಹೊಸ ಬೈಕ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 1.30 ಲಕ್ಷದಿಂದ ರೂ. 1.50 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದೆ.


Click it and Unblock the Notifications








