Honda SP125 Launched: ಆಕರ್ಷಕ ವೈಶಿಷ್ಟ್ಯದೊಂದಿಗೆ ಹೋಂಡಾ SP125 ಬೈಕ್ ಬಿಡುಗಡೆ
ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI), ಭಾರತದ ಮಾರುಕಟ್ಟೆಯಲ್ಲಿ 2023ರ 'ಹೋಂಡಾ SP125' ಮೋಟಾರ್‌ಸೈಕಲ್ ಅನ್ನು ಬಿಡುಗಡೆಗೊಳಿಸಿದೆ. ಈ ಬೈಕ್ ಎಂಜಿನ್‌ನ್ನು ದೇಶಾದ್ಯಂತ ಜಾರಿಯಾಗಿರುವ BS6 ಹಂತ 2 ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ಮೇಲ್ದರ್ಜೆಗೇರಿಸಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಮೊದಲಿಗೆ ನೂತನ ಹೋಂಡಾ SP125 ಬೈಕ್‌ನ ಬೆಲೆ ಬಗ್ಗೆ ತಿಳಿಯೋಣ. ಇದು ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಡ್ರಮ್ ರೂಪಾಂತರ ರೂ.85,131 (ಎಕ್ಸ್ ಶೋರೂಂ) ಹಾಗೂ ಡಿಸ್ಕ್ ರೂಪಾಂತರದ ರೂ.89 ಸಾವಿರ ದರ ಹೊಂದಿದ್ದು, ಐದು ಬಣ್ಣಗಳ ಆಯ್ಕೆಯನ್ನು ಪಡೆದಿದೆ. ಅವುಗಳೆಂದರೆ, ಬ್ಲ್ಯಾಕ್, ಇಂಪೀರಿಯಲ್ ರೆಡ್ ಮೆಟಾಲಿಕ್, ಪರ್ಲ್ ಸೈರನ್ ಬ್ಲೂ, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಹಾಗೂ ಮ್ಯಾಟ್ ಮಾರ್ವೆಲ್ ಬ್ಲೂ ಮೆಟಾಲಿಕ್.

ಈ ಬೈಕ್‌ನ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು ಎಮಿಷನ್ ಮಾನದಂಡಗಳಿಗೆ ಪ್ರಕಾರ, ನವೀಕರಿಸಿರುವ ಪವರ್‌ಟ್ರೇನ್ ಹೊಂದಿದೆ. 125ಸಿಸಿ PGM-FI ಎಂಜಿನ್, 10.72 bhp ಗರಿಷ್ಠ ಪವರ್ ಹಾಗೂ 10.9 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 5 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದೆ.
ಹೋಂಡಾ SP125 ಬೈಕ್ ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ. ಅವುಗಳೆಂದರೆ, LED ಡಿಸಿ ಹೆಡ್‌ಲ್ಯಾಂಪ್, 5 ಸ್ಪೋಕ್ ಸ್ಪ್ಲಿಟ್ ಅಲಾಯ್ ವೀಲ್ಸ್ ಹಾಗೂ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಒಳಗೊಂಡಿದೆ. ಇದು ರಿಯಲ್ ಟೈಮ್ ಫ್ಯೂಯಲ್ ಎಕಾನಮಿ, ಆವರೇಜ್ ಫ್ಯೂಯಲ್ ಎಕಾನಮಿ ಕುರಿತಂತೆ ಮಾಹಿತಿಯನ್ನು ತೋರಿಸುತ್ತದೆ. ಜೊತೆಗೆ ಎಂಜಿನ್ ಸ್ಟಾರ್ಟ್/ಸ್ಟಾಪ್ ಸ್ವಿಚ್, ಇಕೋ ಇಂಡಿಕೇಟರ್ ಹಾಗೂ ಗೇರ್ ಪೊಜಿಷನ್ ಇಂಡಿಕೇಟರ್ ಅನ್ನು ಹೊಂದಿದೆ.

ಈ ಬೈಕ್‌ನ ಸಸ್ಪೆನ್ಷನ್ ಸೆಟಪ್ ಹಾಗೂ ಬ್ರೇಕಿಂಗ್ ಸಿಸ್ಟಮ್ ಆಯ್ಕೆ ಬಗ್ಗೆ ಹೇಳುವುದಾದರೆ, ಇದು ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್, ರೇರ್ ಡುಯಲ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಬ್ರೇಕಿಂಗ್ ಸಿಸ್ಟಮ್ ನೋಡುವುದಾದರೆ, ಫ್ರಂಟ್ ಮೌಂಟೆಡ್ ಡಿಸ್ಕ್ ಹಾಗೂ ರೇರ್ ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. ಜೊತೆಗೆ CBS (ಕಾಂಬಿ ಬ್ರೇಕ್ ಸಿಸ್ಟಮ್) ಅನ್ನು ಪಡೆದಿದೆ.
ಹೋಂಡಾ SP125 ಬೈಕ್ ಬಿಡುಗಡೆ ಬಗ್ಗೆ ಮಾತನಾಡಿರುವ HMSI ಸೇಲ್ಸ್ & ಮಾರ್ಕೆಟಿಂಗ್ ವಿಭಾಗದ ಆಪರೇಟಿಂಗ್ ಆಫೀಸರ್ ಯೋಗೇಶ್ ಮಾಥುರ್ ಅವರು, 'ನಾವು ಯಾವಾಗಲು ನಮ್ಮ ಗ್ರಾಹಕರ ನಿರೀಕ್ಷೆಗಳನ್ನು ತಲುಪಲು ಶ್ರಮಿಸುತ್ತವೆ. ಈ ಬೈಕ್ ಅನ್ನು ನೂತನ ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸಿದ್ದು, ಹೆಚ್ಚಿನ ಗ್ರಾಹಕರು ಖರೀದಿಸುತ್ತಾರೆ ಎಂಬ ನಂಬಿಕೆ ಹೊಂದಿದ್ದೇವೆ. ಇದು ನಮ್ಮ ಮಾರಾಟ ಪ್ರಮಾಣವನ್ನು ಮತ್ತಷ್ಟು ಸುಧಾರಿಸುತ್ತದೆ' ಎಂದು ಹೇಳಿದ್ದಾರೆ.

ಭಾರತದ ಮಾರುಕಟ್ಟೆಯಲ್ಲಿ ಹೋಂಡಾ, ಹಲವು ಸ್ಕೂಟರ್ ಹಾಗೂ ಬೈಕ್ ಗಳನ್ನು ಮಾರಾಟ ಮಾಡುತ್ತಿದೆ. ಪ್ರಮುಖವಾಗಿ ಹೋಂಡಾ ಆಕ್ಟಿವಾ 6ಜಿ ಸ್ಕೂಟರ್ ರೂ.76,476, ಹೋಂಡಾ ಶೈನ್ ಬೈಕ್ ರೂ.80,072, ಡಿಯೋ ಸ್ಕೂಟರ್ ರೂ.73,043 ಹಾಗೂ ಆಕ್ಟಿವಾ 125 ಸ್ಕೂಟರ್ ರೂ.81,748 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿವೆ. ಇವುಗಳಲ್ಲಿ ಆಕ್ಟಿವಾವಂತೋ ದೇಶೀಯ ಗ್ರಾಹಕರ ಹಾಟ್ ಫೆವರೇಟ್ ಆಗಿದ್ದು, ಬಹುತೇಕರು ಇಷ್ಟಪಟ್ಟು ಖರೀದಿಸುತ್ತಾರೆ.
ಇನ್ನು, ಹೋಂಡಾ SP125 ನವೀಕರಿಸಿದ ಎಂಜಿನ್ ಆಯ್ಕೆಯಲ್ಲಿ ಬಿಡುಗಡೆಯಾಗಿರುವುದರಿಂದ ಬಜಾಜ್ ಪಲ್ಸರ್ 125ಗೆ ಭಾರೀ ಪೈಪೋಟಿ ನೀಡಬಹುದು ಎಂದು ಅಂದಾಜಿಸಲಾಗಿದೆ. ಬೆಲೆಯು ಕೂಡ ಗ್ರಾಹಕರ ಕೈಗೆಟುಕುವಂತ್ತಿದ್ದು, ಅದಕ್ಕೆ ತಕ್ಕಂತೆಯೇ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಮುಂಬರುವ ದಿನಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಈ ಬೈಕ್, ಹೇಗೆ ಕಮಾಲ್ ಮಾಡಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.


Click it and Unblock the Notifications