2023 Hornet 2.0: ಆಕರ್ಷಕ ಬೆಲೆ, ಸ್ಪೋರ್ಟಿ ಲುಕ್‌ನಲ್ಲಿ ಹೊಸ ಹಾರ್ನೆಟ್ 2.0 ಬಿಡುಗಡೆ
ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಇಂದು OBD2 ಕಂಪ್ಲೈಂಟ್ ಆಗಿರುವ 2023ರ ಹೊಸ ಹಾರ್ನೆಟ್ 2.0 ಬೈಕನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ನವೀಕರಿಸಿದ ಈ ಹೊಸ ಹಾರ್ನೆಟ್ 2.0 ಬೆಲೆಯು ರೂ. 1,39,000 (ಎಕ್ಸ್ ಶೋ ರೂಂ, ದೆಹಲಿ) ಇದೆ.
ಹೊಸ 2023 ಹಾರ್ನೆಟ್ 2.0 ಅತ್ಯಾಧುನಿಕ ಗ್ರಾಫಿಕ್ಸ್‌ನೊಂದಿಗೆ ಆಕ್ರಮಣಕಾರಿ ವಿನ್ಯಾಸವನ್ನು ಹೊಂದಿದೆ. ಇದರ ಮುಂದಕ್ಕೆ ವಾಲಿರುವ ಏರೋಡೈನಾಮಿಕ್ ಸ್ಟೈಲಿಂಗ್ ಮತ್ತು ಬೃಹತ್ ಇಂಧನ ಟ್ಯಾಂಕ್ ಮಸ್ಕುಲರ್ ಲುಕ್‌ನೊಂದಿಗೆ ಸ್ಪೋರ್ಟಿಯಾಗಿ ಕಾಣುತ್ತಿದೆ. ಹಾಗೆಯೇ ಇದರ-LED ಸೆಟಪ್ (LED ಹೆಡ್‌ಲ್ಯಾಂಪ್, LED ವಿಂಕರ್‌ಗಳು ಮತ್ತು X-ಆಕಾರದ LED ಟೈಲ್ ಲ್ಯಾಂಪ್) ಸ್ಟೈಲಿಂಗ್ ಅನ್ನು ಇನ್ನಷ್ಟು ಹೆಚ್ಚಿಸಿದೆ.

ಪರ್ಫಾರ್ಮೆನ್ಸ್: 2023 ಹಾರ್ನೆಟ್ 2.0 ರೋಮಾಂಚಕ ಕಾರ್ಯಕ್ಷಮತೆಯ ಅನುಭವವನ್ನು ನೀಡಲಿದ್ದು, ಇದರ ಹೊಸ 184.40cc, 4 ಸ್ಟ್ರೋಕ್, ಸಿಂಗಲ್-ಸಿಲಿಂಡರ್ BSVI OBD2 ಕಂಪ್ಲೈಂಟ್ PGM-FI ಎಂಜಿನ್ 12.70 kW ಪವರ್ ಮತ್ತು 15.9 Nm ಪೀಕ್ ಟಾರ್ಕ್ ಅನ್ನು ಹೊರಹಾಕುತ್ತದೆ. ಉತ್ಕೃಷ್ಟ ಇಂಧನ ದಕ್ಷತೆಯೊಂದಿಗೆ ಆಕರ್ಷಕ ಅನುಭವವನ್ನು ನೀಡಲು ವಿಶೇಷವಾಗಿ ನಿರ್ಮಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ಡಿಸೈನ್: ಹಾರ್ನೆಟ್ 2.0 ರ ಪ್ರೀಮಿಯಂ ಮತ್ತು ಸ್ಪೋರ್ಟಿ ಲುಕ್ ಶಾರ್ಟ್ ಮಫ್ಲರ್ ಮತ್ತು ಟೆನ್-ಸ್ಪೋಕ್ ಅಲಾಯ್ ವೀಲ್ ವಿನ್ಯಾಸದೊಂದಿಗೆ ಮತ್ತಷ್ಟು ಎದ್ದು ಕಾಣುತ್ತದೆ. ಇದರ ಅಲ್ಯೂಮಿನಿಯಂ ಫಿನಿಶ್ ಫುಟ್ ಪೆಗ್‌ಗಳು ಒಟ್ಟಾರೆ ಡಿಸೈನ್‌ಗೆ ವಿಭಿನ್ನವಾಗಿ ಕಾಣುತ್ತವೆ. ಇದರ ವಾಯುಬಲವೈಜ್ಞಾನಿಕ (ಏರೋಡೈನಮಿಕ್) ವಿನ್ಯಾಸವು ಸುಗಮ ನಿರ್ವಹಣೆ ಮತ್ತು ಹೆಚ್ಚಿನ ವೇಗದ ಸ್ಥಿರತೆಯನ್ನು ಸಾಧಿಸಲು ಸಹಾಯ ಮಾಡುವುದಾಗಿ ಹೋಂಡಾ ತಿಳಿಸಿದೆ.
ಸಬ್-200cc ಮೋಟಾರ್‌ಸೈಕಲ್ ವಿಭಾಗದಲ್ಲಿ ಹಾರ್ನೆಟ್ 2.0 ಗೋಲ್ಡನ್ ಅಪ್-ಸೈಡ್ ಡೌನ್ (USD) ಫ್ರಂಟ್ ಫೋರ್ಕ್ ಅನ್ನು ಹೊಂದಿರುವ ಮೊದಲನೆಯ ಬೈಕ್ ಆಗಿದೆ. ಇದರ ಡಿಜಿಟಲ್ ಲಿಕ್ವಿಡ್ ಕ್ರಿಸ್ಟಲ್ ಇನ್‌ಸ್ಟ್ರುಮೆಂಟ್ ಪ್ಯಾನೆಲ್ ಸ್ಪೀಡೋಮೀಟರ್, ಓಡೋಮೀಟರ್, ಟ್ಯಾಕೋಮೀಟರ್, ಬ್ಯಾಟರಿ ವೋಲ್ಟ್‌ಮೀಟರ್, ಟ್ವಿನ್ ಟ್ರಿಪ್ ಮೀಟರ್, ಗೇರ್ ಪೊಸಿಷನ್ ಇಂಡಿಕೇಟರ್, ಸರ್ವಿಸ್ ಡ್ಯೂ ಇಂಡಿಕೇಟರ್ ಮತ್ತು ಗಡಿಯಾರದಂತಹ ಮಾಹಿತಿಯನ್ನು ಪ್ರದರ್ಶಿಸುತ್ತದೆ.
ಹೊಸ ಹಾರ್ನೆಟ್ 2.0 ಸಿಂಗಲ್-ಚಾನಲ್ ಎಬಿಎಸ್‌ನೊಂದಿಗೆ ಡ್ಯುಯಲ್ ಡಿಸ್ಕ್, ಪೆಟಲ್ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ. ಮೊನೊ ಶಾಕ್ ಹಿಂಬದಿಯ ಸಸ್ಪೆನ್ಶನ್ ಗುರುತ್ವಾಕರ್ಷಣೆಯ ಕೇಂದ್ರವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹೀಗಾಗಿ ಮೂಲೆಗೆ (ಕಾರ್ನರಿಂಗ್) ಹೋಗುವಾಗ ಅತ್ಯುನ್ನತ ಸ್ಥಿರತೆ ಮತ್ತು ಅತ್ಯುತ್ತಮ ಸವಾರಿ ಅನುಭವವನ್ನು ಒದಗಿಸುತ್ತದೆ.
ಹಾರ್ನೆಟ್ 2.0 ನ ಅಗಲವಾದ ಟ್ಯೂಬ್‌ಲೆಸ್ ಟೈರ್‌ಗಳು (110 ಎಂಎಂ ಮುಂಭಾಗ ಮತ್ತು 140 ಎಂಎಂ ಹಿಂಭಾಗ) ಸವಾರರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಇವಿಷ್ಟೇ ಅಲ್ಲದೇ ಎಂಜಿನ್-ಸ್ಟಾಪ್ ಸ್ವಿಚ್, ಹಜಾರ್ಡ್ ಲೈಟ್‌ಗಳು, ಸೈಡ್ ಸ್ಟ್ಯಾಂಡ್ ಇಂಡಿಕೇಟರ್ ಮತ್ತು ಸೀಲ್ಡ್ ಚೈನ್ ಅನುಕೂಲಕರ ಅಂಶವನ್ನು ಹೆಚ್ಚಿಸುತ್ತದೆ.
ಬಣ್ಣಗಳು: ಪರ್ಲ್ ಇಗ್ನಿಯಸ್ ಬ್ಲಾಕ್, ಮ್ಯಾಟ್ ಸಾಂಗ್ರಿಯಾ ರೆಡ್ ಮೆಟಾಲಿಕ್, ಮ್ಯಾಟ್ ಮಾರ್ವೆಲ್ ಬ್ಲೂ ಮೆಟಾಲಿಕ್ ಮತ್ತು ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಬಣ್ಣಗಳಲ್ಲಿ ಲಭ್ಯವಿದೆ. ಮೇಲೆ ತಿಳಿಸಿದಂತೆ ಹೊಸ 2023 ಹಾರ್ನೆಟ್ 2.0 ರೂ. 1,39,000 (ಎಕ್ಸ್ ಶೋ ರೂಂ, ದೆಹಲಿ) ಬೆಲೆಯಲ್ಲಿ ಲಭ್ಯವಿದ್ದು, ವಿಶೇಷ 10-ವರ್ಷದ ವಾರಂಟಿ ಪ್ಯಾಕೇಜ್ (3-ವರ್ಷದ ಪ್ರಮಾಣಿತ ಸೇರಿದಂತೆ 7-ವರ್ಷ-ಐಚ್ಛಿಕ) ಅನ್ನು ಸಹ ನೀಡುತ್ತಿದೆ.
ಬಿಡುಗಡೆ ಕುರಿತು ಹೋಂಡಾ ಮೋಟಾರ್‌ಸೈಕಲ್ ಇಂಡಿಯಾದ ಅಧ್ಯಕ್ಷ ತ್ಸುಟ್ಸುಮು ಒಟಾನಿ ಮಾತನಡಿ, "ಸರ್ಕಾರದ ನಿಯಮಗಳಿಗೆ ಅನುಗುಣವಾಗಿ ಕಂಪನಿಯು ಅಪ್‌ಗ್ರೇಡ್ ಮಾಡುವಲ್ಲಿ ಆಕ್ರಮಣಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇಂದು ನಾವು OBD2 ಕಂಪ್ಲೈಂಟ್ 2023 ಹಾರ್ನೆಟ್ 2.0 ಅನ್ನು ಪ್ರಾರಂಭಿಸಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದ್ದೇವೆ. 2020 ರಲ್ಲಿ ಪ್ರಾರಂಭವಾದಾಗಿನಿಂದ, ಹಾರ್ನೆಟ್ 2.0 ಅತ್ಯುತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಹೆಚ್ಚಿಸುವ ವಿಶ್ವಾಸವಿದೆ ಎಂದರು.
ಹೋಂಡಾ ಮೋಟಾರ್‌ಸೈಕಲ್ ಮಾರಾಟ ಮತ್ತು ಮಾರುಕಟ್ಟೆಯ ನಿರ್ದೇಶಕ ಯೋಗೇಶ್ ಮಾಥುರ್ ಮಾತನಾಡಿ, "ಹೊಸ ಹಾರ್ನೆಟ್ 2.0 ಅನ್ನು ಪರಿಚಯಿಸಲು ನಾವು ಸಂತೋಷಪಡುತ್ತೇವೆ. ಹೊಸ-ಯುಗದ ಗ್ರಾಹಕರ ಕನಸುಗಳು ಮತ್ತು ಮೋಟಾರ್‌ಸೈಕಲ್ ಸವಾರಿಯ ಮೇಲಿನ ಅವರ ಉತ್ಸಾಹದಿಂದ ಪ್ರೇರಿತವಾಗಿದೆ. ಸುಧಾರಿತ ವೈಶಿಷ್ಟ್ಯಗಳು ಮತ್ತು ರೋಮಾಂಚಕ ಕಾರ್ಯಕ್ಷಮತೆಯೊಂದಿಗೆ, ಹೊಸ ಹಾರ್ನೆಟ್ 2.0 ಸ್ಟ್ರೀಟ್ ಫೈಟರ್ ಯುವ ಮೋಟಾರ್‌ಸೈಕಲ್ ಉತ್ಸಾಹಿಗಳಿಗೆ ಅತ್ಯುತ್ತಮ ಆಯ್ಕೆಯಾಗಿದೆ ಎಂದರು.


Click it and Unblock the Notifications