ಬೆಂಗಳೂರಿನ ಎಥರ್ ಗ್ರಾಹಕರೇ ಈಗ ಚಾರ್ಜಿಂಗ್ ಭಯವೇ ಬೇಡ... ಮನಬಂದಂತೆ ಓಡಾಡಿ
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯು ಜೋರಾಗಿದೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ನಮ್ಮ್ ಬೆಂಗಳೂರಿನಲ್ಲಿ ಇವಿ ಸ್ಕೂಟರ್‌ಗಳ ಖರೀದಿಯು ತಿಂಗಳಿನಿಂದ ತಿಂಗಳಿಗೆ ಏರಿಕೆಯಾಗುತ್ತಲೇ ಸಾಗಿದೆ. ಕಂಪನಿಗಳು ಕೂಡ ಬೆಂಗಳೂರಿನಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿದ್ದು, ಈಗ ಎಥರ್ ಎನರ್ಜಿ ಹೊಸ ಮೈಲಿಗಲ್ಲು ಸಾಧಿಸಿದೆ.
ಎಥರ್ ಎನರ್ಜಿ ಸದ್ಯ ಓಲಾಗೆ ತೀರ್ವ ಪೈಪೋಟಿ ನೀಡುತ್ತಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನವಾಗಿದೆ. ಪರ್ಫಾಮೆನ್ಸ್, ಫೀಚರ್ಸ್, ಅತ್ಯಾಧುನಿಕತೆ ಸೇರಿದಂತೆ ಹಲವು ವೈಶಿಷ್ಟ್ಯಗಳಿಂದಾಗಿ ತನ್ನದೇ ಆದ ಪ್ರತ್ಯೇಕ ಅಭಿಮಾನಿ ಗ್ರಾಹಕ ಬಳಗವನ್ನು ಹೊಂದಿದೆ. ಸದ್ಯ ಬೆಂಗಳೂರಿನಲ್ಲಿ ಗ್ರಾಹಕರು ಹೆಚ್ಚಾಗಿದ್ದು, ಸ್ಕೂಟರ್‌ಗಳು ಇನ್ನೂ ಹೆಚ್ಚಾಗಿ ಮಾರಾಟವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ ಎಂದು ಇತ್ತೀಚೆಗೆ ಎಥರ್ ಹೇಳಿಕೊಂಡಿದೆ.

ಅದರಂತೆ ತನ್ನ ಗ್ರಾಹಕರಿಗೆ ಮೂಲಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯಲ್ಲೂ ಸಹಕರಿಸುತ್ತಿದೆ. ಇದೀಗ ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ನೂರು ಫಾಸ್ಟ್ ಚಾರ್ಜಿಂಗ್‌ಗಳನ್ನು ಅಳವಡಿಸುವ ಮೂಲಕ ಗ್ರಾಹಕರಿಗೆ ಕಾಡುತ್ತಿದ್ದ ಚಾರ್ಜಿಂಗ್ ಸ್ಟೇಷನ್‌ಗಳ ಕೊರತೆಯನ್ನು ನೀಗಿಸಿದೆ. ಈ ಕುರಿತು ಎಥರ್ ತನ್ನ ಇನ್ಸ್ಟಾಗ್ರಾಂ ನಲ್ಲಿ ಸಣ್ಣ ವಿಡಿಯೋ ತುಣುಕನ್ನು ಸಹ ಹಂಚಿಕೊಂಡಿದೆ.
ಎಥರ್ ಎನರ್ಜಿ ಬೆಂಗಳೂರಿನಲ್ಲಿ ತನ್ನ 100 ನೇ ಎಥರ್ ಗ್ರಿಡ್ ಅನ್ನು ಬನಶಂಕರಿಯಲ್ಲಿರುವ ಥರ್ಡ್ ವೇವ್ ಕಾಫಿಯಲ್ಲಿ ಫಾಸ್ಟ್ ಚಾರ್ಜಿಂಗ್ ಸ್ಟೇಷನ್ ಅಳವಡಿಸಲಾಗಿದೆ. ಜೊತೆಗೆ ಎಥರ್ ಎನರ್ಜಿಯು ಥರ್ಡ್ ವೇವ್ ಕಾಫಿ ರೋಸ್ಟರ್ ಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಭಾರತದಲ್ಲಿನ ಅವರ ಔಟ್‌ಲೆಟ್‌ಗಳಲ್ಲಿ ಫಾಸ್ಟ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಸಜ್ಜಾಗಿದೆ.

ಕಂಪನಿಯು ಈವರೆಗೆ 85 ಕ್ಕೂ ಹೆಚ್ಚು ನಗರಗಳಲ್ಲಿ 1,300 ಕ್ಕೂ ಹೆಚ್ಚು ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಿದೆ. ಇದು ದ್ವಿಚಕ್ರ ವಾಹನಗಳಿಗೆ ಭಾರತದ ಅತಿದೊಡ್ಡ ವೇಗದ ಚಾರ್ಜಿಂಗ್ ನೆಟ್‌ವರ್ಕ್ ಆಗಿದೆ. ಎಥರ್ ಎನರ್ಜಿಯ ಮೊಟ್ಟಮೊದಲ ಗ್ರಿಡ್ ಅನ್ನು ಬೆಂಗಳೂರಿನಲ್ಲಿಯೇ ಸ್ಥಾಪಿಸಲಾಗಿತ್ತು. ಇದೀಗ ಬೆಂಗಳೂರಿನಲ್ಲಿ 100 ನೇ ಚಾರ್ಜಿಂಗ್ ಸ್ಟೇಷನ್ ಅನ್ನು ಸ್ಥಾಪಿಸಿ ಮೈಲಿಗಲ್ಲನ್ನು ಸಾಧಿಸಿದೆ.
ಎಥರ್ ಗ್ರಿಡ್ ಬೆಂಗಳೂರಿನಿಂದ ಆರಂಭವಾಗಿ ವಾರಾಂತ್ಯದ ಜನಪ್ರಿಯ ತಾಣವಾದ ನಂದಿ ಬೆಟ್ಟಕ್ಕೆ ಹೋಗುವ ಮಾರ್ಗದ ಉದ್ದಕ್ಕೂ ನಾಲ್ಕು ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಲಾಗಿದೆ. ಈ ಮೂಲಕ ಸಿಟಿಯಲ್ಲಿ 100 ಚಾರ್ಜಿಂಗ್ ಸ್ಟೇಷನ್ ಗಳನ್ನು ಯಶಸ್ವಿಯಾಗಿ ಅಳವಡಿಸಿರುವುದನ್ನು ಖಚಿತ ಪಡಿಸಿದೆ. ಈಗ ಚಾರ್ಜಿಂಗ್ ಭಯವಿಲ್ಲದ ಕಾರಣ ಎಥರ್ ಮುಂದಿನ ದಿನಗಳಲ್ಲಿ ಗ್ರಾಹಕರನ್ನು ಹೆಚ್ಚಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.
ಜೊತೆಗೆ ಎಥರ್ ಎನರ್ಜಿ ತನ್ನ ಬೆಳವಣಿಗೆ ವಿಸ್ತರಿಸಲು ಬೆಸ್ಕಾಮ್, ಸಂಗೀತಾ ಮೊಬೈಲ್ಸ್, ಡೆಕಾಥ್ಲಾನ್, ಮೆಟ್ರೋ ಕ್ಯಾಶ್ ಮತ್ತು ಕ್ಯಾರಿ, ಥರ್ಡ್ ವೇವ್ ಕಾಫಿ ರೋಸ್ಟರ್ಸ್, HPCL, ಚಾಯ್ ಪಾಯಿಂಟ್, ಮತ್ತು ಪ್ರೆಸ್ಟೀಜ್ ಗ್ರೂಪ್ - UB ಸಿಟಿ ಸೇರಿದಂತೆ ಹಲವಾರು ಬ್ರ್ಯಾಂಡ್ ಗಳೊಂದಿಗೆ ಸುಸ್ಥಿರ ಚಲನಶೀಲತೆಯನ್ನು ಉತ್ತೇಜಿಸಲು ಒಪ್ಪಂದ ಮಾಡಿಕೊಂಡಿದೆ.
ಎಥರ್ ಗ್ರಿಡ್ ಅನ್ನು ಭಾರತದಲ್ಲಿ ವಿನ್ಯಾಸಗೊಳಿಸಿ ನಿರ್ಮಿಸಲಾಗಿದೆ. ಇದು ದೇಶದಲ್ಲಿ ದ್ವಿಚಕ್ರ ವಾಹನಗಳ ಅತ್ಯಂತ ವ್ಯಾಪಕವಾದ ವೇಗದ ಚಾರ್ಜಿಂಗ್ ನೆಟ್‌ವರ್ಕ್ ಆಗಿರುವುದಾಗಿ ಕಂಪನಿ ಹೇಳಿಕೊಂಡಿದೆ. ಪ್ರಸ್ತುತ ಸ್ಥಾಪನೆಗಳಲ್ಲಿ ಶೇ 60 ರಷ್ಟು ಶ್ರೇಣಿ-II ಮತ್ತು ಶ್ರೇಣಿ-III ನಗರಗಳಲ್ಲಿದೆ. ಇವುಗಳ ಮೂಲಕ ಎಥರ್ 450X ಸ್ಕೂಟರ್ ಅನ್ನು ಕೇವಲ 50 ನಿಮಿಷಗಳಲ್ಲಿ ಶೇ 80 ರಷ್ಟು ಚಾರ್ಜ್ ಮಾಡಬಹುದು.


Click it and Unblock the Notifications








