ಡಿಸೆಂಬರ್‌ನಲ್ಲಿ 3 ಪಟ್ಟು ಹೆಚ್ಚಾದ ಎಥರ್ ಸ್ಕೂಟರ್ ಮಾರಾಟ!
ಭಾರತದ ಮಾರುಕಟ್ಟೆಯಲ್ಲಿ ಸದ್ಯ ಎಲೆಕ್ಟ್ರಿಕ್ ವಾಹನ (EV)ಗಳ ಅಬ್ಬರ ಪ್ರಾರಂಭವಾಗಿದೆ. ಕಳೆದ ಡಿಸೆಂಬರ್‌ನಲ್ಲಿ ಎಥರ್ ಸ್ಕೂಟರ್ ಮಾರಾಟವು ಮೂರು ಪಟ್ಟು ಹೆಚ್ಚಾಗಿದೆ. ಆ ಒಂದೇ ತಿಂಗಳಲ್ಲಿ 9 ಸಾವಿರಕ್ಕೂ ಹೆಚ್ಚು ಸ್ಕೂಟರ್‌ಗಳು ಮಾರಾಟ ಮಾಡಿ, ದಾಖಲೆ ನಿರ್ಮಿಸಿದ್ದು, ಅದರ ಬಗ್ಗೆ ವಿವರವಾದ ಮಾಹಿತಿಯನ್ನು ತಿಳಿಯೋಣ .
ಎಥರ್ ಎನರ್ಜಿ ಬೆಂಗಳೂರು ಮೂಲದ ಕಂಪನಿಯಾಗಿದ್ದು, ಇದು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ತಯಾರಿಸುತ್ತದೆ ಮತ್ತು ಮಾರಾಟ ಮಾಡುತ್ತದೆ. ಈ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳು, ಸದ್ಯ ದೇಶದಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿದ್ದು, ಖರೀದಿದಾರರು ಹೆಚ್ಚು ಲೈಕ್ ಮಾಡುತ್ತಿದ್ದಾರೆ ಎಂದು ಹೇಳಬಹುದು. ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟದಲ್ಲಿ ಕಂಪನಿಯು ಮತ್ತೊಂದು ಪ್ರಮುಖ ಕಂಪನಿಯಾಗಿರುವ ಓಲಾಗೆ ಭಾರೀ ಪೈಪೋಟಿ ನೀಡುತ್ತಿದೆ. ಇದೀಗ ಎಥರ್ ಕಂಪನಿಯು ಕಳೆದ ಡಿಸೆಂಬರ್ ತಿಂಗಳ ಅಧಿಕೃತ ಮಾರಾಟ ವರದಿ ಬಿಡುಗಡೆ ಮಾಡಿದೆ.

ಕಳೆದ ಡಿಸೆಂಬರ್ (2022)ನಲ್ಲಿ ಎಥರ್ ಒಟ್ಟು 9187 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಇದು ಡಿಸೆಂಬರ್ 2021ರ ಮಾರಾಟಕ್ಕಿಂತ ಶೇಕಡ 389 ರಷ್ಟು ಹೆಚ್ಚಿದ್ದು, ಉತ್ತಮ ಪ್ರಗತಿಯನ್ನು ದಾಖಲು ಮಾಡಿದೆ. ಕಳೆದ ತಿಂಗಳು ಭಾರತದ ಮಾರುಕಟ್ಟೆಯಲ್ಲಿ ಹೊಸ ಗ್ರಾಹಕರನ್ನು ಆಕರ್ಷಿಸಲು ಎಥರ್, ಇಡೀ ತಿಂಗಳು ವಿವಿಧ ಕೊಡುಗೆಗಳು, ಹಣಕಾಸು ಆಯ್ಕೆಗಳು ಮತ್ತು ವಿನಿಮಯ ಕಾರ್ಯಕ್ರಮ ಆಯೋಜಿಸಿತ್ತು. ಇದರಿಂದ ಕಂಪನಿಯ ವಾಹನಗಳ ಮಾರಾಟ ಹೆಚ್ಚಿದೆ ಎಂದು ಮಾರುಕಟ್ಟೆ ಪರಿಣಿತರು ಅಂದಾಜಿಸಿದ್ದಾರೆ.
ಗ್ರಾಹಕರನ್ನು ಸೆಳೆಯಲು ಕಂಪನಿಯು 14 ನಗರಗಳಲ್ಲಿ ಎಕ್ಸ್ಪೀರಿಯೆನ್ಸ್ ಸೆಂಟರ್ ಅನ್ನು ತೆರೆದಿದೆ. ನೆಲ್ಲೂರು, ಕರೀಂ ನಗರ, ಉಡುಪಿ, ನೋಯ್ಡಾ, ಕೊಟ್ಟಾಯಂ, ಶಿವಮೊಗ್ಗದಲ್ಲಿ ತನ್ನ ಶೋರೂಂಗಳನ್ನು ಆರಂಭಿಸಿದೆ. ಪ್ರಸ್ತುತ ಎಥರ್ ತಿಂಗಳಿಗೆ 8000-9000 ಸ್ಕೂಟರ್‌ಗಳನ್ನು ತಯಾರಿಸುತ್ತಿದ್ದು, ಅದನ್ನು ಮಾರ್ಚ್ 2023ರ ಹೊತ್ತಿಗೆ ತಿಂಗಳಿಗೆ 20 ಸಾವಿರ ಸ್ಕೂಟರ್‌ಗಳಿಗೆ ಹೆಚ್ಚಿಸಲು ನಿರ್ಧರಿಸಿದೆ. ಎಥರ್ ಕಂಪನಿಯು ತನ್ನ ಹೊಸ ಉತ್ಪಾದನಾ ಘಟಕವನ್ನು ಅಕ್ಟೋಬರ್ 2022ರಲ್ಲಿ ತಮಿಳುನಾಡಿನ ಹೊಸೂರು ಜಿಲ್ಲೆಯಲ್ಲಿ ನಿರ್ಮಿಸಿದ್ದು, ಇದರಿಂದ ಉತ್ಪಾದನೆಯು ವೇಗ ಪಡೆದುಕೊಳ್ಳಲಿದೆ.
ಇಷ್ಟು ಮಾತ್ರವಲ್ಲದೆ, ಎಥರ್ ಎನರ್ಜಿ ತನ್ನ ವಿತರಣಾ ಜಾಲವನ್ನು ಹೆಚ್ಚಿಸಲು ತೀರ್ಮಾನ ಮಾಡಿದೆ. ಇದೀಗ ದೇಶದ ಪ್ರಮುಖ ನಗರಗಳ ನಂತರ ಎರಡನೇ ಹಂತದ ನಗರಗಳಲ್ಲಿ ತನ್ನ ಶೋರೂಂ ತೆರೆಯಲು ಸಜ್ಜಾಗಿದೆ ಎಂದು ವರದಿಯಾಗಿದೆ. ಆರಂಭದಲ್ಲಿ ಸ್ಕೂಟರ್‌ಗಳನ್ನು ಆನ್‌ಲೈನ್‌ನಲ್ಲಿ ಮತ್ತು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ ಕಂಪನಿ, ಈಗ ಶೋರೂಂಗಳನ್ನು ಓಪನ್ ಮಾಡಲು ಪ್ರಯತ್ನಿಸುತ್ತಿದೆ. ಇದು ಎಲೆಕ್ಟ್ರಿಕ್ ಸ್ಕೂಟರ್ ಹೊಸ ಖರೀದಿದಾರರಿಗೆ ಬೇಗ ದೊರೆಯುವಂತೆ ಆಗಲು ಸಹಕಾರಿಯಾಗಿದೆ.
ಎಥರ್ ಪ್ರಸ್ತುತ 450X ಎಂಬ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ದೇಶದಲ್ಲಿ ಮಾರಾಟ ಮಾಡುತ್ತಿದೆ. ಸ್ಕೂಟರ್ ಅನ್ನು ಸಂಪೂರ್ಣ ಚಾರ್ಜ್‌ನಲ್ಲಿ 146 ಕಿಮೀ ಮೈಲೇಜ್ ನೀಡಬಹುದು. ಈ ಸ್ಕೂಟರ್, ಗಂಟೆಗೆ 90 ಕಿ.ಮೀ ಗರಿಷ್ಠ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದ್ದು, ಕೇವಲ 3.3 ಸೆಕೆಂಡ್‌ಗಳಲ್ಲಿ 0-40 ಕಿಮೀ ಸ್ವೀಡ್ ಪಡೆಯಬಹುದು. ಅಲ್ಲದೆ, 6kW PMSM ಪ್ರೊಪಲ್ಷನ್ ಮೋಟಾರ್, 3.7kWh ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದೆ ಎಂದು ಹೇಳಬಹುದು.
ಈ ಸ್ಕೂಟರ್ ನಲ್ಲಿ ರೈಡಿಂಗ್ ಮೋಡ್ ಅನ್ನು ಸವಾರನ ಆದ್ಯತೆಗೆ ಅನುಗುಣವಾಗಿ ಆಯ್ಕೆ ಮಾಡಲು ನಾಲ್ಕು ರೈಡಿಂಗ್ ಮೋಡ್‌ಗಳಿವೆ. ಈ ವರ್ಷದ ನವೆಂಬರ್‌ನಲ್ಲಿ ಎಥರ್ ದೇಶದಲ್ಲಿ 9,737 ಯುನಿಟ್‌ಗಳ ಮಾರಾಟ ಮಾಡಿತ್ತು. ಎಥರ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಚಾರ್ಜ್ ಮಾಡಲು 3 ಆಯ್ಕೆಗಳಿವೆ. ಶಾಶ್ವತ ಹೋಮ್ ಚಾರ್ಜರ್, ಪೋರ್ಟಬಲ್ ಆನ್-ದಿ-ಗೋ ಚಾರ್ಜರ್, ಎಥರ್ ಗ್ರಿಡ್ ಚಾರ್ಜರ್. ಹೋಮ್ ಮತ್ತು ಪೋರ್ಟಬಲ್ ಚಾರ್ಜರ್‌ಗಳಲ್ಲಿ 4 ಗಂಟೆ 30 ನಿಮಿಷಗಳಲ್ಲಿ ಶೇಕಡ 0-80% ಚಾರ್ಜ್ ಆಗುವ ಸಾಮರ್ಥ್ಯ ಹೊಂದಿದ್ದು, ಈ ಸ್ಕೂಟರ್ ಬೆಲೆ 1.55 ಲಕ್ಷ ರೂ. ಇದೆ.
ಎಥರ್ ಎನರ್ಜಿ, ಜನವರಿ 7ರಂದು ಕಮ್ಯುನಿಟಿ ಡೇಯನ್ನು ಆಚರಿಸುತ್ತಿದ್ದು, ಆ ಕಾರ್ಯಕ್ರಮಕ್ಕೆ ಕಂಪನಿಯು ತನ್ನ ಗ್ರಾಹಕರಿಗೂ ಸಹ ಆಹ್ವಾನ ನೀಡಿದೆ. ಬ್ರ್ಯಾಂಡ್ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅಥವಾ ಸದ್ಯ ಮಾರುಕಟ್ಟೆಯಲ್ಲಿರುವ 450Xನ ಹೊಸ ಆವೃತ್ತಿಯನ್ನು ಅನಾವರಣಗೊಳಿಸಬಹುದು. ಈಗಾಗಲೇ ಅಸ್ತಿತ್ವದಲ್ಲಿರುವ ಎಲೆಕ್ಟ್ರಿಕ್ ಸ್ಕೂಟರ್‌ಗೆ ಹೆಚ್ಚಿನ ವೈಶಿಷ್ಟ್ಯಗಳನ್ನು ಸೇರಿಸುವ ನಿರೀಕ್ಷೆಯಿದೆ. ಮುಂಬರುವ ಹೊಸ ಸ್ಕೂಟರ್, ಟಿವಿಎಸ್ iCube, ಓಲಾ Ta1 ಮತ್ತು ಬಜಾಜ್ Chetakನಂತಹ ಇತರೆ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಭಾರೀ ಪೈಪೋಟಿ ನೀಡಲಿದೆ.


Click it and Unblock the Notifications








