Bajaj CNG Bike: ಬಜಾಜ್ ಸಿಎನ್‌ಜಿ ಮೋಟರ್‌ಸೈಕಲ್ ಬರಲಿದೆ.. ಹೆಚ್ಚು ಕಾಸು ಬೇಕಿಲ್ಲ, ಈ ಬೈಕ್ ಇದ್ದವರೇ ಬಾಸು!
ದೇಶದಲ್ಲಿ ಪ್ರಮುಖ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿ ಬಜಾಜ್ (Bajaj) ಖ್ಯಾತಿಗಳಿಸಿದೆ. ಸದ್ಯ, ಕಂಪನಿಯು ಟ್ರಯಂಫ್ (Triumph) ಮತ್ತು ಕೆಟಿಎಂ (KTM) ಸಹಭಾಗಿತ್ವದಲ್ಲಿ ನೂತನ ಮೋಟಾರ್‌ಸೈಕಲ್‌ಗಳನ್ನು ಬಿಡುಗಡೆಗೊಳಿಸುವ ಮೂಲಕ ದೇಶೀಯ ಮಾರುಕಟ್ಟೆಯಲ್ಲಿ ತನ್ನ ಪೋರ್ಟ್‌ಫೋಲಿಯೊವನ್ನು ಬಲಪಡಿಸಿಕೊಳ್ಳುತ್ತಿದೆ. ಕೆಲ ವರ್ಷಗಳಿಂದ ಪಲ್ಸರ್ ಸರಣಿ ಬೈಕ್‌ಗಳು ಸಖತ್ ಡಿಮ್ಯಾಂಡ್ ಹೊಂದಿವೆ.
ಇತ್ತೀಚೆಗೆ, ಲಾಂಚ್ ಆಗಿದ್ದ ಟ್ರಯಂಫ್ ಸ್ಪೀಡ್ 400 (Triumph Speed 400) ಮೋಟರ್‌ಸೈಕಲ್‌ಗೆ ಭಾರತದ ಗ್ರಾಹಕರಿಂದ ಅದ್ದೂರಿ ಸ್ವಾಗತ ದೊರೆತ್ತಿತ್ತು. ವಾರಗಳ ಹಿಂದೆಯಷ್ಟೇ ಬಜಾಜ್ ಪಾಲುದಾರಿಕೆಯಲ್ಲಿ ಹೊಸ ತಲೆಮಾರಿನ ಕೆಟಿಎಂ 250 ಡ್ಯೂಕ್, 390 ಡ್ಯೂಕ್ ಅನ್ನು ಬಿಡುಗಡೆಗೊಳಿಸಲಾಗಿತ್ತು. ಸಂವಾದವೊಂದರಲ್ಲಿ ಬಜಾಜ್ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್ ಅವರು, ಕಂಪನಿ ಕಾರ್ಯವಿಧಾನದ ರೂಪುರೇಷೆಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದರು.

'ಮುಂಬರುವ ದಿನಗಳಲ್ಲಿ ಕಂಪನಿಯು ಅನೇಕ ಬೈಕ್‌ಗಳನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಿದ್ಧತೆ ನಡೆಸುತ್ತಿದೆ. ಪ್ರಮುಖವಾಗಿ, ಹೊಸ ಪಲ್ಸರ್ ಮೋಟರ್‌ಸೈಕಲ್ ಬರಲಿದೆ. ಅದು ಕೂಡ 400 ಸಿಸಿ ಎಂಜಿನ್‌ನಿಂದ ಚಾಲಿತವಾಗಲಿದ್ದು, ಸಾಕಷ್ಟು ನವೀಕರಣಗಳನ್ನು ಪಡೆದುಕೊಂಡಿರಲಿದೆ. ಜೊತೆಗೆ ಕಂಪನಿಯ ಮಾರುಕಟ್ಟೆ ಪಾಲನ್ನು ಹೆಚ್ಚಿಸಿಕೊಳ್ಳಲು ಸಹಾಯಕವಾಗಲಿದೆ' ಎಂದು ರಾಜೀವ್ ಬಜಾಜ್ ಅವರು ಹೇಳಿದ್ದಾರೆ.
ಮತ್ತೊಂದು ಪ್ರಮುಖ ಮಾಹಿತಿ ಎಂದರೆ, ಬಜಾಜ್ ಕಂಪನಿ, ಸಿಎನ್‌ಜಿ ಚಾಲಿತ ಹೊಚ್ಚ ಹೊಸ 100 ಸಿಸಿ ಮೋಟಾರ್‌ಸೈಕಲ್ ಅನ್ನು ಪರಿಚಯಿಸಲು ತೀರ್ಮಾನ ಮಾಡಿದೆ ಎಂದು ವರದಿಯಾಗಿದೆ. ಇದಕ್ಕಾಗಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಲ್ಲಿ ಸಿಎನ್‌ಜಿ ವಾಹನಗಳ ಮೇಲಿನ ವಿಧಿಸುವ ಜಿಎಸ್‌ಟಿಯನ್ನು ಶೇಕಡ 18% ಇಳಿಸಲು ಕಂಪನಿ ಕಡೆಯಿಂದ ಮನವಿ ಮಾಡಲಾಗಿದೆ.
ದೇಶೀಯ ದ್ವಿಚಕ್ರ ವಾಹನ ಮಾರುಕಟ್ಟೆಯ 125 ಸಿಸಿ - 200 ಸಿಸಿ ವಿಭಾಗದಲ್ಲಿ ಬಜಾಜ್ ಶೇಕಡ 30% ಪಾಲನ್ನು ಹೊಂದಿದ್ದು, ಇದು ದೊಡ್ಡ ಆದಾಯದ ಮೂಲವಾಗಿದೆ. ಕಂಪನಿಯು ನೂತನ ಸಿಎನ್‌ಜಿ ಚಾಲಿತ ಬೈಕ್ ತಯಾರಿಕೆಯ ಸಾಧ್ಯತೆ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿರುವುದು ಬಿಟ್ಟರೆ, ಖಚಿತವಾದ ಯಾವುದೇ ವಿವರಗಳಿಲ್ಲ. ಒಂದೊಮ್ಮೆ ಸಿಎನ್‌ಜಿ ಮೋಟರ್‌ಸೈಕಲ್ ಬಿಡುಗಡೆಯಾದರೆ, ಅದೇ ಹೆಚ್ಚಿನ ಜನರ ಆದ್ಯತೆಯಾಗಬಹುದು. ಪೆಟ್ರೋಲ್ ಗೆ ಹೋಲಿಸಿದರೆ, ಸಿಎನ್‌ಜಿ ದರ ಕಡಿಮೆಯಿದೆ.
ಜೊತೆಗೆ ಹೆಚ್ಚಿನ ಮೈಲೇಜ್ ಕೂಡ ನೀಡುತ್ತದೆ. ಇದಿಷ್ಟೇ ಅಲ್ಲದೆ, ಹಬ್ಬದ ಋತುವಿನ ವೇಳೆಗೆ ಬಜಾಜ್ ತನ್ನ ಏಕೈಕ ಎಲೆಕ್ಟ್ರಿಕ್ ಸ್ಕೂಟರ್ ಚೇತಕ್ (Chetak) ನೂತನ ರೂಪಾಂತರವನ್ನು ಪರಿಚಯಿಸಲು ಸಿದ್ದತೆ ನಡೆಸುತ್ತಿದೆ. ಬರೋಬ್ಬರಿ 10,000 ಯುನಿಟ್ ತಯಾರಿಕೆಗೆ ಮುಂದಾಗಿದೆ. ಈ ಹಣಕಾಸು ವರ್ಷದ ಅಂತ್ಯದೊಳಗೆ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ನ ಉತ್ಪಾದನೆಯನ್ನು 15,000 - 20,000 ಯುನಿಟ್ ಗೆ ಹೆಚ್ಚಿಸಲಿದೆ.
ಇನ್ನು, ಕಳೆದ ತಿಂಗಳು ಬಜಾಜ್ ಕಂಪನಿ, ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯನ್ನು ಇಳಿಕೆ ಮಾಡಿ, ತನ್ನ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿತ್ತು. ಈ ಸ್ಕೂಟರ್ ಬೆಲೆಯನ್ನು ಸುಮಾರು ರೂ.14,000 ಕಡಿಮೆ ಮಾಡಿತ್ತು. ಆ ಬಳಿಕ, ರೂ.1.30 ಲಕ್ಷ ಎಕ್ಸ್ ಶೋರೂಂ ದರವಿತ್ತು. ಚೇತಕ್ ಎಲೆಕ್ಟ್ರಿಕ್ ಸ್ಕೂಟರ್, ರೈಡಿಂಗ್ ಮೋಡ್ ಅನುಗುಣವಾಗಿ 90 km ವರೆಗೆ ರೇಂಜ್ ನೀಡುವ ಸಾಮರ್ಥ್ಯ ಹೊಂದಿದೆ.
ಈ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬಾಡಿಯನ್ನು ಸಂಪೂರ್ಣ ಉಕ್ಕಿನಿಂದ ಮಾಡಲಾಗಿದೆ. ವಿನ್ಯಾಸದ ದೃಷ್ಟಿಯಿಂದ ಸಹ ಆಕರ್ಷಕವಾಗಿದ್ದು, LED ಲೈಟಿಂಗ್, ಮುಂಭಾಗ ಶೂ ಆಕಾರದ ಡೇಟೈಮ್ ರನ್ನಿಂಗ್ ಲ್ಯಾಂಪ್ ಹೊಂದಿದೆ. ವೈಶಿಷ್ಟ್ಯದ ವಿಚಾರವಾಗಿ ಮಾತನಾಡುವುದಾದರೆ, LCD ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬಾಡಿ -ಕಲರ್ಡ್ ರೇರ್ ವ್ಯೂ ಮಿರರ್ಸ್, ಡ್ಯುಯಲ್ - ಟೋನ್ ಸೀಟ್ ಸೇರಿದಂತೆ ಹತ್ತಾರು ಫೀಚರ್ಸ್ ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








