Ather: ಬೆಂಗಳೂರಿನ ಎಥರ್ ಎಲೆಕ್ಟ್ರಿಕ್ ಸ್ಕೂಟರ್ ವಿದೇಶಿಕ್ಕೆ ಲಗ್ಗೆ.. ಭಾರೀ ಬೇಡಿಕೆ!
ಬೆಂಗಳೂರು (Bengaluru) ಮೂಲಕ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿ ಎಥರ್ ಎನರ್ಜಿ (Ather Energy) ತನ್ನ ವ್ಯಾಪಾರ ವಹಿವಾಟನ್ನು ವಿದೇಶಗಳಿಗೆ ವಿಸ್ತರಿಸಲು ತೀರ್ಮಾನ ಮಾಡಿದೆ. ಅದರ ಭಾಗವಾಗಿ 450ಎಕ್ಸ್ (450X) ಎಲೆಕ್ಟ್ರಿಕ್ ಸ್ಕೂಟರ್‌ನ್ನು ನೇಪಾಳ (Nepal) ಮಾರುಕಟ್ಟೆಗೆ ರಫ್ತು ಮಾಡಲಿದೆ.
ಎಥರ್ ಕಂಪನಿಯಿಂದ ಇದು ಮೊದಲ ಅಂತರರಾಷ್ಟ್ರೀಯ ಮಾರುಕಟ್ಟೆ ಪ್ರವೇಶವಾಗಿದೆ. ನೇಪಾಳದ ವೈದ್ಯ ಎನರ್ಜಿ (Vaidya Energy) ಸಹಭಾಗಿತ್ವದಲ್ಲಿ ಎಥರ್ ತನ್ನ ಕಾರ್ಯಾಚರಣೆಯನ್ನು ಆರಂಭಿಸಲಿದ್ದು, ಮುಂದಿನ ತಿಂಗಳು (ನವೆಂಬರ್) ಕಠ್ಮಂಡುವಿನಲ್ಲಿ ತನ್ನ ಮೊದಲ ಎಕ್ಸ್ಪೀರಿಯೆನ್ಸ್ ಸೆಂಟರ್ ಉದ್ಘಾಟಿಸಲಿದೆ. ನೇಪಾಳದಲ್ಲಿ ವೈದ್ಯ ಎನರ್ಜಿ, ಎಥರ್ ಸ್ಕೂಟರ್ ಮಾರಾಟ ಹಾಗೂ ಸರ್ವಿಸ್ ನಂತಹ ಸೇವೆಯನ್ನು ಒದಗಿಸಲಿದೆ.

ನೇಪಾಳದ ಗ್ರಾಹಕರಿಗಾಗಿ ಆ ದೇಶದ ವಿವಿಧ ಭಾಗದಲ್ಲಿ ಫಾಸ್ಟ್ ಚಾರ್ಜಿಂಗ್ ಸೆಂಟರ್ ಸ್ಥಾಪನೆ ಮಾಡಲು ಎಥರ್ ತೀರ್ಮಾನ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಂಪನಿಯ ಚೀಫ್ ಬ್ಯುಸಿನೆಸ್ ಆಫೀಸರ್ ರವನೀತ್ ಫೋಕೆಲಾ ಅವರು, 'ನಮ್ಮ ಸ್ಕೂಟರ್ ಗಳು ವಿವಿಧ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆಯನ್ನು ಹೊಂದಿವೆ. ನೇಪಾಳವು ನಮ್ಮ ಅಂತರರಾಷ್ಟ್ರೀಯ ಮಾರುಕಟ್ಟೆ ವಿಸ್ತರಣೆಯ ಮೊದಲ ಹೆಜ್ಜೆಯಾಗಿದೆ' ಎಂದು ಹೇಳಿದ್ದಾರೆ.
ಎಥರ್ ಕಂಪನಿ ನೇಪಾಳ ಮಾರುಕಟ್ಟೆಯಲ್ಲಿ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟಗೊಳಿಸಲು ನಿರ್ಧರಿಸಿದೆ. ಆದರೆ, ಬೆಲೆ ಕುರಿತು ಎಲ್ಲಿಯೂ ವಿವರಗಳನ್ನು ಬಹಿರಂಗಪಡಿಸಿಲ್ಲ. ಅಲ್ಲಿ ಈ ಸ್ಕೂಟರ್, ರೂ.4 ಲಕ್ಷ (ನೇಪಾಳ ರೂಪಾಯಿ) ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಹಬಹುದು ಎಂದು ಅಂದಾಜಿಸಲಾಗಿದೆ. ಶೀಘ್ರದಲ್ಲಿಯೇ ಎಲ್ಲದಕ್ಕೂ ಉತ್ತರ ದೊರೆಯಲಿದ್ದು, ಅಲ್ಲಿಯವರೆಗೆ ಕಾಯಬೇಕು.
ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಎಥರ್ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಹೇಳುವುದಾದರೆ, ಇದು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ. ಅವುಗಳೆಂದರೆ, 2.9 kWh ಮತ್ತು 3.7 kWh ಬ್ಯಾಟರಿ ಪ್ಯಾಕ್. ಕ್ರಮವಾಗಿ, ರೂ.1,38,000 ಹಾಗೂ ರೂ.1,44,921 ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ.
ಈ ಎಥರ್ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್, ಬ್ಯಾಟರಿ ಪ್ಯಾಕ್ ಅನುಗುಣವಾಗಿ ಸಂಪೂರ್ಣ ಚಾರ್ಜ್ ನಲ್ಲಿ 115 ಕಿಮೀ ರಿಂದ 145 ಕಿಮೀ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ವೈಶಿಷ್ಟ್ಯ ವಿಚಾರವಾಗಿ ಹೇಳುವುದಾದರೆ, 7-ಇಂಚಿನ TFT ಟಚ್‌ಸ್ಕ್ರೀನ್ ಕ್ಲಸ್ಟರ್ ಸೇರಿದಂತೆ ಹಲವು ಫೀಚರ್ಸ್ ಒಳಗೊಂಡಿದೆ. ಸ್ಮಾರ್ಟ್‌ಇಕೋ, ಇಕೋ, ರೈಡ್, ಸ್ಪೋರ್ಟ್ ಹಾಗೂ ವಾರ್ಪ್ ಎಂಬ ರೈಡಿಂಗ್ ಮೋಡ್ ಪಡೆದಿದೆ.
ಮತ್ತೊಂದು, ಎಥರ್ 450ಎಸ್ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಹೇಳುವುದಾದರೆ, ಇದು ರೂ.1,29,999 ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಆಕರ್ಷಕ 7 ಇಂಚಿನ ಡೀಪ್‌ವ್ಯೂ ಡಿಸ್‌ಪ್ಲೇಯನ್ನು ಪಡೆದಿದ್ದು, ಇದರಲ್ಲಿ 2.9 kWh ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದೆ. ಫುಲ್ ಚಾರ್ಜಿನಲ್ಲಿ 115 ಕಿಮೀ ರೇಂಜ್ ಕೊಡುತ್ತದೆ. ಕೇವಲ 3.9 ಸೆಕೆಂಡುಗಳಲ್ಲಿ 0-40 ವೇಗವನ್ನು ಪಡೆಯಲಿದ್ದು, 90 km/h ಟಾಪ್ ಸ್ವೀಡ್ ಒಳಗೊಂಡಿದೆ.
ಇನ್ನು, ಬೆಂಗಳೂರು ಮೂಲದ ಎಥರ್ ಕಂಪನಿ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮೂಲಕ ವಿದೇಶಿ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದೆ. ಇದು, ಅದರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಮುಂಬರುವ ದಿನಗಳಲ್ಲಿ ಪ್ರಮುಖ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಲಗ್ಗೆ ಇಟ್ಟು, ಮತ್ತಷ್ಟು ಹೊಸ ಗ್ರಾಹಕರನ್ನು ತಲುಪಲಿ ಎಂಬುದು ಎಥರ್ ಅಭಿಮಾನಿಗಳ ಆಶಯವಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








