ಭಾರೀ ವೇಗದಲ್ಲಿದೆ TVS iQube, ನಂಬರ್ 1 ಪಟ್ಟಕ್ಕೆ ಬರುತ್ತಾ?
ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ದಿನದಿಂದ ದಿನಕ್ಕೆ ಖ್ಯಾತಿ ಗಳಿಸುತ್ತಿವೆ. ಆಗಸ್ಟ್ ತಿಂಗಳ ಮಾರಾಟ ವರದಿ ಪ್ರಕಟಗೊಂಡಿದ್ದು, ಸೇಲ್ಸ್ ಬಹುತೇಕ ಸುಧಾರಿಸಿದೆ. ಎಂದಿನಂತೆ ಬೆಂಗಳೂರಿನ ಓಲಾ ಮೊದಲ ಹಾಗೂ ಟಿವಿಎಸ್ ಎರಡನೇ ಸ್ಥಾನದಲ್ಲಿದೆ. ಎಲೆಕ್ಟ್ರಿಕ್ ಟೂ ವೀಲರ್ ಮಾರಾಟದ ಬಗ್ಗೆ ಸಂಪೂರ್ಣ ವಿವರ ತಿಳಿಯೋಣ.
ಮೊದಲಿಗೆ ದೇಶದಲ್ಲಿ ಮಾರಾಟವಾದ ಒಟ್ಟು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬಗ್ಗೆ ಮಾತನಾಡೋಣ. ಹಬ್ಬದ ಸೀಸನ್ ಇಲ್ಲದಿದ್ದರೂ ಆಗಸ್ಟ್ ನಲ್ಲಿ ಎಲ್ಲ ಕಂಪನಿಗಳು ಯಶಸ್ವಿಯಾಗಿ ಟೂ ವೀಲರ್ ಮಾರಿವೆ. ಫೇಮ್ II ಸಬ್ಸಿಡಿ ಪರಿಷ್ಕರಿಸಿದ ಹಿನ್ನೆಲೆ, ಜೂನ್ ಹಾಗೂ ಜುಲೈ ತಿಂಗಳಲ್ಲಿ ಎಲೆಕ್ಟ್ರಿಕ್ ವೆಹಿಕಲ್ (ಸ್ಕೂಟರ್, ಬೈಕ್) ಮಾರಾಟ ತೀವ್ರವಾಗಿ ಕುಸಿತ ಕಂಡಿತ್ತು. ಅದು ಕಳೆದ ತಿಂಗಳು ಸುಧಾರಿಸಿದ್ದು, ಸುಮಾರು 60,000 ಯುನಿಟ್ ಮಾರಾಟವಾಗಿವೆ.

ಜೂನ್ (2023) ತಿಂಗಳಲ್ಲಿ 46,027 ಯುನಿಟ್ ಹಾಗೂ ಜುಲೈನಲ್ಲಿ 54,498 ಯುನಿಟ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಸೇಲ್ ಆಗಿದ್ದವು. ಆಗಸ್ಟ್ ನಲ್ಲಿ 59,313 ಯುನಿಟ್ ಮಾರಾಟವಾಗಿವೆ. 2022ರ ಇದೇ ಅವಧಿಗೆ ಹೋಲಿಸಿದರೆ (52,225 ಯುನಿಟ್) ವರ್ಷದಿಂದ ವರ್ಷಕ್ಕೆ 13% ಪ್ರಗತಿ ಸಾಧಿಸಲಾಗಿದೆ. ಇದನ್ನು ನೋಡಿದಾಗ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಭಾರತ ಉತ್ತಮ ಮಾರುಕಟ್ಟೆ ಇರುವುದು ಗೊತ್ತಾಗುತ್ತದೆ.
ಎಂದಿನಂತೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟದಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿದಿರುವ ಓಲಾ (ola)ದ ಸೇಲ್ಸ್ ಅಂಕಿಅಂಶಗಳನ್ನು ತಿಳಿಯೋಣ. ಕಂಪನಿಯು ತನ್ನ ಎಸ್1 (S1) ಸರಣಿ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಬರೋಬ್ಬರಿ 75,000ಕ್ಕೂ ಹೆಚ್ಚಿನ ಬುಕ್ಕಿಂಗ್ ಪಡೆಯುವ ಮೂಲಕ ಭರ್ಜರಿಯಾಗಿ ಮುಗುತ್ತಿದ್ದು, ಆಗಸ್ಟ್ ತಿಂಗಳಲ್ಲಿ 17,655 ಯುನಿಟ್ ಇ-ಸ್ಕೂಟರ್ ಮಾರಿದೆ. ಜುಲೈ ತಿಂಗಳಿಗೆ ಹೋಲಿಸಿದರೆ, ಕೊಂಚ ಹಿನ್ನೆಡೆಯಾಗಿದೆ.

ಓಲಾ ಕಂಪನಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಶೇಕಡ 29% ಪಾಲನ್ನು ಹೊಂದಿದ್ದು, ಈ ಸೆಪ್ಟೆಂಬರ್ ತಿಂಗಳಲ್ಲಿ 20,000 ಇವಿಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ. 2023ರ ಜನವರಿಯಿಂದ ಆಗಸ್ಟ್ ಅವಧಿಯಲ್ಲಿ 162,684 ಯುನಿಟ್ ಎಲೆಕ್ಟ್ರಿಕ್ ಸ್ಕೂಟರ್ ಸೇಲ್ ಮಾಡಿದೆ. ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಓಲಾ ಎಸ್1 ಸರಣಿ ಎಲೆಕ್ಟ್ರಿಕ್ ಸ್ಕೂಟರ್ ಗಳು ರೂ.80,000 ದಿಂದ ರೂ.1.47 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿವೆ.
ಟಿವಿಎಸ್ (TVS) ಆಗಸ್ಟ್ ತಿಂಗಳಲ್ಲಿ 14,584 ಯುನಿಟ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿ, ಜುಲೈ ತಿಂಗಳಿಗೆ (10,383 ಯುನಿಟ್) ಹೋಲಿಸಿದರೆ, ತಿಂಗಳಿಂದ ತಿಂಗಳಿಗೆ ಶೇಕಡ 40% ಬೆಳವಣಿಗೆ ಕಂಡಿದ್ದು, ದೇಶದ ಎಲೆಕ್ಟ್ರಿಕ್ ಟೂ ವೀಲರ್ ಮಾರುಕಟ್ಟೆಯಲ್ಲಿ ಶೇಕಡ 19% ಪಾಲನ್ನು ತನ್ನದಾಗಿಸಿಕೊಂಡಿದೆ. ಇತ್ತಿಚೆಗೆ ಕಂಪನಿ ಒಂದು ಲಕ್ಷ ಯುನಿಟ್ ಮಾರಾಟ ಮೈಲಿಗಲ್ಲನ್ನು ಸಾಧಿಸಿತ್ತು.
ಟಿವಿಎಸ್ ಕಂಪನಿ ಈ ಮಟ್ಟದಲ್ಲಿ ಯಶಸ್ಸು ಸಾಧಿಸಲು ಅದರ ಐಕ್ಯೂಬ್ (iQube) ಎಲೆಕ್ಟ್ರಿಕ್ ಸ್ಕೂಟರ್ ಕಾರಣವಾಗಿದೆ. ಇದರ ಮಾರಾಟ ಪ್ರಮಾಣ ಗಮನಿಸಿದಾಗ ಕೆಲವೇ ದಿನಗಳಲ್ಲಿ ಓಲಾವನ್ನು ಹಿಂದಿಕ್ಕಿದರೂ ಅಚ್ಚರಿಯಿಲ್ಲ. ಪ್ರಸ್ತುತ ಟಿವಿಎಸ್ ಎರಡು ರೂಪಾಂತರದಲ್ಲಿ ಸಿಗಲಿದ್ದು, ರೂ.1.20 ಲಕ್ಷ ಆರಂಭಿಕ ದರವನ್ನು ಪಡೆದಿದ್ದು, 100 km ರೇಂಜ್ ಕೊಡಲಿದೆ. ಇತ್ತೀಚೆಗೆ ಕಂಪನಿ ದುಬಾರಿ ಬೆಲೆಯ 'ಎಕ್ಸ್' ಹೆಸರಿನ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿತ್ತು.
ಬೆಂಗಳೂರಿನ 'ಎಥರ್ ಎನರ್ಜಿ' ತನ್ನ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಸ್ಥಿರತೆಯನ್ನು ಸಾಧಿಸಿದೆ. ಆಗಸ್ಟ್ ತಿಂಗಳಲ್ಲಿ 6,835 ಯುನಿಟ್ ಇವಿಗಳನ್ನು ಮಾರಾಟ ಮಾಡಿದ್ದು, ಜುಲೈ ತಿಂಗಳಿಗೆ ಹೋಲಿಸಿದರೆ (6,671 ಯುನಿಟ್) ಶೇಕಡ 2% ಪ್ರಗತಿ ಕಂಡಿದೆ. ಸದ್ಯ, ಎಥರ್ 450 ಎಸ್ ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ರೂ.1,29,999 ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ. 115 km ರೇಂಜ್ ನೀಡುತ್ತದೆ.
ಬಜಾಜ್ ಕಂಪನಿ, ತನ್ನ ಏಕೈಕ ಎಲೆಕ್ಟ್ರಿಕ್ ಸ್ಕೂಟರ್ 'ಚೇತಕ್' ಮಾರಾಟದಲ್ಲಿ ಭಾರೀ ಏರಿಕೆಯನ್ನು ಕಂಡಿದೆ. ಆಗಸ್ಟ್ ತಿಂಗಳಲ್ಲಿ 6,137 ಯುನಿಟ್ ಸೇಲ್ ಮಾಡಿ, ಜುಲೈಗೆ (4,116 ಯುನಿಟ್) ಹೋಲಿಸಿದರೆ, ಶೇಕಡ 50% ಬೆಳವಣಿಗೆ ಕಂಡಿದೆ. ಇನ್ನುಳಿದಂತೆ ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ, ಓಕಿನಾವಾ ಆಟೋಟೆಕ್ ಹಾಗೂ ಹೀರೋ ಕಂಪನಿಗಳು ಉತ್ತಮವಾದ ಪ್ರಗತಿಯನ್ನು ಸಾಧಿಸಿವೆ.


Click it and Unblock the Notifications