Hero ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ದಿಢೀರನೇ ಇಳಿಕೆ: ನೀವು ಊಹಿಸಿದ್ದಕ್ಕಿಂತ ಸಖತ್ ಕಡಿಮೆ ಆಗಿಬಿಡ್ತು!
ದೇಶೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಮುನ್ನೆಲೆಗೆ ಬರುತ್ತಿವೆ. ಆದರೆ, ಇಂಧನ ಚಾಲಿತ ಮಾದರಿಗಳಿಗೆ ಹೋಲಿಸಿದರೆ ಇವುಗಳ ಬೆಲೆ ಹೆಚ್ಚಿರುವುದರಿಂದ ಗ್ರಾಹಕರು ಖರೀದಿಸಲು ಹಿಂದೇಟು ಹಾಕುತ್ತಾರೆ. ಸದ್ಯ, ಭಾರತದ ಅತಿದೊಡ್ಡ ಕಂಪನಿ 'ಹೀರೋ' ತನ್ನ ಎಲೆಕ್ಟ್ರಿಕ್ ಸ್ಕೂಟರ್ ದರವನ್ನು ದಿಢೀರನೇ ಇಳಿಕೆ ಮಾಡಿ, ಸಿಹಿಸುದ್ದಿ ನೀಡಿದೆ.
ಹೀರೋ ಕಂಪನಿ 'ವಿಡಾ' ಎಲೆಕ್ಟ್ರಿಕ್ ಸ್ಕೂಟರ್‌ನ್ನು ಎರಡು ರೂಪಾಂತರಗಳಲ್ಲಿ ಮಾರಾಟ ಮಾಡುತ್ತಿದ್ದು, ವಿ1 ಪ್ಲಸ್ ರೂಪಾಂತರದ ಬೆಲೆಯನ್ನು ರೂ.25 ಸಾವಿರ ಹಾಗೂ ವಿ1 ಪ್ರೊ ದರವನ್ನು ರೂ.20 ಸಾವಿರ ಇಳಿಸಿದೆ. ಈ ಮೂಲಕ ಹೀರೋ ವಿಡಾ ವಿ1 ಪ್ಲಸ್ ರೂ.1,19,900 ಮತ್ತು ವಿಡಾ ವಿ1 ಪ್ರೊ ಬೆಲೆ ರೂ.1,39,900 ಆಗಿದೆ. ಈ ಮೊದಲು ವಿ1 ಪ್ಲಸ್ ರೂ.1.45 ಲಕ್ಷ ಹಾಗೂ ವಿ1 ಪ್ರೊ ರೂ.1.59 ಲಕ್ಷ ದರವನ್ನು ಹೊಂದಿತ್ತು.

ನೂತನದ ದರಗಳು FAME II ಸಬ್ಸಿಡಿ ಮತ್ತು ಪೋರ್ಟಬಲ್ ಚಾರ್ಜರ್ ಅನ್ನು ಒಳಗೊಂಡಿವೆ. ಕಂಪನಿ ಹೇಳುವಂತೆ ಬೆಲೆ ಇಳಿಕೆಯು ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವನ್ನು ದ್ವಿಗುಣಗೊಳಿಸಲು ನೆರವಾಗುತ್ತದೆ. ಜೊತೆಗೆ ಹೆಚ್ಚಿನ ಗ್ರಾಹಕರನ್ನು ಸುಲಭವಾಗಿ ತಲುಪಲು ಸಾಧ್ಯವಾಗುತ್ತದೆ. ದೇಶದ ಕೆಲವೊಂದು ರಾಜ್ಯಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಪ್ರತೇಕ ಸಬ್ಸಿಡಿ ನೀಡಲಾಗುತ್ತಿದೆ. ಅದರನ್ವಯ ಗುಜರಾತಿನ ಅಹಮದಾಬಾದ್ ನಲ್ಲಿ ವಿ1 ಪ್ಲಸ್ ರೂ. 99,900 ಹಾಗೂ ವಿ1 ಪ್ರೊ 1,19,900 ದರವನ್ನು ಹೊಂದಿದೆ.
ಹೀರೋ ಮೋಟೋಕಾರ್ಪ್, ತನ್ನ ಎಲೆಕ್ಟ್ರಿಕ್ ಸ್ಕೂಟರ್ ಸೇಲ್ ಅನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದು, ಅದಕ್ಕಾಗಿ ಮಾರಾಟ ಜಾಲವನ್ನು ವಿಸ್ತರಿಸಲು ತೀರ್ಮಾನಿಸಿದೆ. ಈಗಾಗಲೇ ವಿಡಾ ಸ್ಕೂಟರ್, ಬೆಂಗಳೂರು, ದೆಹಲಿ ಮತ್ತು ಜೈಪುರದಲ್ಲಿ ಖರೀದಿಗೆ ಲಭ್ಯವಿದ್ದು, ಪುಣೆ, ಅಹಮದಾಬಾದ್, ನಾಗಪುರ ನಾಸಿಕ್, ಹೈದರಾಬಾದ್, ಚೆನ್ನೈ, ಕ್ಯಾಲಿಕಟ್ ಮತ್ತು ಕೊಚ್ಚಿಯಲ್ಲಿ ಶೋರೂಂ ತೆರೆಯಲು ಯೋಜಿಸಿದೆ. ಅಲ್ಲದೆ, ವರ್ಷಾಂತ್ಯದೊಳಗೆ 100 ನಗರಗಳಲ್ಲಿ ವಿಡಾ ಸ್ಕೂಟರ್ ದೊರೆಯಲಿದೆ.
ಹೀರೋ ವಿಡಾ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಒಂದಷ್ಟು ವಿಚಾರಗಳನ್ನು ಹೇಳುವುದಾದರೆ, ಇದರ ರೂಪಾಂತರಗಳಿಗೆ ಅನುಗುಣವಾಗಿ ಬ್ಯಾಟರಿ ಪ್ಯಾಕ್ ಪಡೆಡಿದ್ದು, ರೇಂಜ್ ಕೂಡ ಭಿನ್ನಾವಾಗಿದೆ. ಮೊದಲಿಗೆ ವಿಡಾ ವಿ1 ಪ್ಲಸ್ ರೂಪಾಂತರ 3.44 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಂಪೂರ್ಣ ಚಾರ್ಜಿನಲ್ಲಿ 143 km ರೇಂಜ್ ನೀಡಲಿದೆ. ವಿಡಾ ವಿ1 ಪ್ರೊ ರೂಪಾಂತರ 3.94 kWh ಬ್ಯಾಟರಿ ಪ್ಯಾಕ್ ಪಡೆದಿದ್ದು, 165 km ರೇಂಜ್ ಕೊಡಲಿದೆ.
ಹೀರೋ ವಿಡಾ ವಿ1 ಪ್ಲಸ್ ಹಾಗೂ ವಿ1 ಪ್ರೊ ರೂಪಾಂತರಗಳು 80 kmph ಟಾಪ್ ಸ್ವೀಡ್ ಹೊಂದಿದ್ದು, ಇಕೋ, ರೈಡ್, ಹಾಗೂ ಸ್ಪೋರ್ಟ್. ಎಂಬ ಮೂರು ರೈಡಿಂಗ್ ಮೋಡ್ ಆಯ್ಕೆಗಳನ್ನು ಹೊಂದಿವೆ. ವಿಡಾ ವಿ1 ಪ್ಲಸ್ ವೇರಿಯೆಂಟ್ 3.4 ಸೆಕೆಂಡು ಹಾಗೂ ವಿಡಾ ವಿ1 ಪ್ರೊ 3.2 ಸೆಕೆಂಡುಗಳಲ್ಲಿ 0 ಯಿಂದ 40 kmph ವೇಗವನ್ನು ಪಡೆಯಲಿವೆ.
ಈ ಸ್ಕೂಟರ್, ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ನೋಡುವುದಾದರೆ, TFT ಟಚ್‌ಸ್ಕ್ರೀನ್, ಕ್ರೂಸ್ ಕಂಟ್ರೋಲ್, ಕೀಲೆಸ್ ಕಂಟ್ರೋಲ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಜಿಯೋ-ಫೆನ್ಸಿಂಗ್, OTA, ರಿಜೆನೆರೇಟಿವ್ ಬ್ರೇಕಿಂಗ್, ರಿವರ್ಸ್ ಮೋಡ್, ಸಿಂಗಲ್ ಡಿಸ್ಕ್ ಬ್ರೇಕ್ ಸೆಟಪ್, 26 ಲೀಟರ್ ಸಾಮರ್ಥ್ಯದ ಸೀಟ್ ಸ್ಟೋರೇಜ್ ಪಡೆದಿದೆ. ಜೊತೆಗೆ ಮ್ಯಾಟ್ ವೈಟ್, ಮ್ಯಾಟ್ ಸ್ಪೋರ್ಟ್ಸ್ ರೆಡ್ ಸೇರಿದಂತೆ ಹತ್ತು ಹಲವು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಒಟ್ಟಾರೆ, ಎಥರ್ 450X Gen 3, ರೆವೊಲ್ಟ್ RV 400, ಟಿವಿಎಸ್ ಐಕ್ಯೂಬ್, ಬಜಾಜ್ ಚೇತಕ್, ಹಾಗೂ ಓಲಾ S1 ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಪ್ರತಿಸ್ಪರ್ಧಿಯಾಗಿರುವ ಹೀರೋ ವಿಡಾದ ಬೆಲೆ ದೊಡ್ಡ ಮಟ್ಟದಲ್ಲಿ ಕಡಿಮೆಯಾಗಿದೆ. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಈ ಸ್ಕೂಟರ್ ಅನ್ನು ಇಷ್ಟಪಟ್ಟು ಖರೀದಿಸಬಹುದು. ಮುಂಬರುವ ದಿನಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಹೇಗೆ ಕಮಲ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications








