ಹೀರೋಗೆ ಸರಿ ಸಾಟಿಯೇ ಇಲ್ಲ: ಅದನ್ನು ಹಿಂದಿಡಲು ಆಗಲ್ಲ
ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿ ಹೀರೋ ಮೋಟೊಕಾರ್ಪ್ ವಾಹನಗಳನ್ನು ಪ್ರತಿಯೊಬ್ಬರು ಇಷ್ಟಪಟ್ಟು ಖರೀದಿಸುತ್ತಾರೆ. ಇದೀಗ ಫೆಬ್ರವರಿ ತಿಂಗಳ ಮಾರಾಟ ವರದಿ ಪ್ರಕಟಿಸಿದ್ದು, 394,460 ಯುನಿಟ್ ಮಾರಾಟ ಮಾಡಿ ದಾಖಲೆ ನಿರ್ಮಿಸಿದೆ. ವರ್ಷದಿಂದ ವರ್ಷಕ್ಕೆ 10% ಬೆಳವಣಿಗೆ ಸಾಧಿಸಿದೆ. 2022ರ ಫೆಬ್ರವರಿಯಲ್ಲಿ 358,254 ಯುನಿಟ್ ಸೇಲ್ ಮಾಡಿತ್ತು.
ಹೀರೋ ಮೋಟಾರ್ ಸೈಕಲ್ ಮಾರಾಟದಲ್ಲೂ ಉತ್ತಮ ಪ್ರಗತಿಯನ್ನು ದಾಖಲಿಸಿದ್ದು, ಕಳೆದ ವರ್ಷದ ಫೆಬ್ರವರಿ (338,454 ಯುನಿಟ್) ಮಾರಾಟ ಪ್ರಮಾಣಕ್ಕೆ ಹೋಲಿಸಿದರೆ, ಈ ವರ್ಷ 371,854 ಯುನಿಟ್ ಸೇಲ್ ಮಾಡಿ ದಾಖಲೆ ನಿರ್ಮಿಸಿದೆ. ಅಲ್ಲದೆ, ಸ್ಕೂಟರ್ ಮಾರಾಟದಲ್ಲೂ ಕೊಂಚ ಒಳ್ಳೆಯ ಬೆಳವಣಿಗೆ ಯನ್ನು ಸಾಧಿಸಿದ್ದು, ಫೆಬ್ರವರಿ 2022ಕ್ಕೆ (19,800 ಯುನಿಟ್) ಹೋಲಿಸಿದರೆ, ಕಳೆದ ತಿಂಗಳು 22,606 ಯುನಿಟ್ ಮಾರಾಟ ಮಾಡಿದೆ.

ವಿದೇಶಗಳಿಗೆ ವಾಹನಗಳನ್ನು ರಫ್ತು ಮಾಡುವುದರಲ್ಲಿ ಹೀರೋ ಮೋಟೊಕಾರ್ಪ್ ಅಷ್ಟೇನೋ ಒಳ್ಳೆಯ ಪ್ರಗತಿಯನ್ನು ದಾಖಲಿಸಿಲ್ಲ. 2022ರ ಫೆಬ್ರವರಿ ತಿಂಗಳಲ್ಲಿ ಭರ್ಜರಿಯಾಗಿ ತನ್ನ ದ್ವಿಚಕ್ರ ವಾಹನಗಳನ್ನು (26,792 ಯುನಿಟ್) ರಫ್ತು ಮಾಡಿತ್ತು. ಆದರೆ, ಈ ವರ್ಷ ಅದರ ಪ್ರಮಾಣ ಕೇವಲ 12,143 ಯುನಿಟ್ ಇದೆ. 'ಭಾರತದ ಮಾರುಕಟ್ಟೆಯಲ್ಲಿ ಫೆಬ್ರವರಿಯಲ್ಲಿಯೂ ನಮ್ಮ ಮಾರಾಟ ಪ್ರಮಾಣ ಸುಧಾರಿಸಿದ್ದು, ಹೊಸ ಗ್ರಾಹಕರು, ಮುಂಬರುವ ದಿನಗಳಲ್ಲಿ ಇದೇ ರೀತಿ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸವಿದೆ' ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ, ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿವೆ. ಅದಕ್ಕೆ ತಕ್ಕಂತೆ ಹೀರೋ ಕಂಪನಿಯು ವಿಡಾ ವಿ1 (Vida 1) ಎಲೆಕ್ಟ್ರಿಕ್ ಸ್ಕೂಟರ್ ಅನ್ನು ರೂ.1.28 - 1.39 ಲಕ್ಷ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಇದೀಗ, ವಿಡಾ ಬ್ರಾಂಡ್ ಅಡಿ, ಬೆಂಗಳೂರು, ದೆಹಲಿ ಮತ್ತು ಜೈಪುರದ 50 ವಿವಿಧ ಸ್ಥಳಗಳಲ್ಲಿ ಸುಮಾರು 300 ಚಾರ್ಜಿಂಗ್ ಪಾಯಿಂಟ್‌ಗಳನ್ನು ಶುರು ಮಾಡಿದೆ. ಇಲ್ಲಿ ಡಿಸಿ ಹಾಗೂ ಎಸಿ ಚಾರ್ಜಿಂಗ್ ಸಾಕೆಟ್‌ಗಳನ್ನು ಅಳವಡಿಸಲಾಗಿದೆ.
ಕಳೆದ ಜನವರಿಯಲ್ಲಿ ಹೀರೋ ಮೋಟೊಕಾರ್ಪ್, ಬಹುನೀರಿಕ್ಷಿತ ಕ್ಸೂಮ್ 110 (Hero Xoom 110) ಸ್ಕೂಟರ್ ಲಾಂಚ್ ಮಾಡಿತ್ತು. ಇದು ರೂ.68,599 (ಎಕ್ಸ್ ಶೋರೂಂ ದೆಹಲಿ) ಆರಂಭಿಕ ಬೆಲೆಯಲ್ಲಿ ಲಭ್ಯವಾಗಲಿದೆ. ಇವು LX, VX ಮತ್ತು ZX. ಎಂಬ ಮೂರು ರೂಪಾಂತರಗಳಲ್ಲಿ ಗ್ರಾಹಕರಿಗೆ ಸಿಗಲಿದೆ. ಈ ಸ್ಕೂಟರ್, 110 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 8.05 bhp ಗರಿಷ್ಠ ಪವರ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ.
ಈ ಕ್ಸೂಮ್ 110 ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು i3S ಐಡಲ್ ಸ್ಟಾರ್ಟ್-ಸ್ಟಾಪ್ ತಂತ್ರಜ್ಞಾನವನ್ನು ಹೊಂದಿದೆ. ಜೊತೆಗೆ 12 ಇಂಚಿನ ಅಲಾಯ್ ವೀಲ್ಸ್, ಬ್ಲೂಟೂತ್ ಸಂಪರ್ಕದೊಂದಿಗೆ ಡಿಜಿಟಲ್ ಇನ್ಸ್ರುಮೆಂಟಲ್ ಕ್ಲಸ್ಟರ್ ಅನ್ನು ಪಡೆದಿದ್ದು, ಇಲ್ಲಿ ಕಾಲರ್ ಐಡಿ, ಇನ್-ಕಮಿಂಗ್ ಕಾಲ್, ಮೆಸೇಜ್, ಮಿಸ್ಡ್ ಕಾಲ್ ಸೇರಿದಂತೆ ಹೆಚ್ಚಿನ ಮಾಹಿತಿ ಪಡೆಯಬಹುದು. ನೂತನ ಸ್ಕೂಟರ್, ಪೋಲೆಸ್ಟಾರ್ ಬ್ಲೂ, ಸ್ಪೋರ್ಟ್ಸ್ ರೆಡ್, ಮ್ಯಾಟ್ ಅಬ್ರಾಕ್ಸ್ ಆರೆಂಜ್, ಪರ್ಲ್ ಸಿಲ್ವರ್ ವೈಟ್ ಹಾಗೂ ಬ್ಲ್ಯಾಕ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ.
ಹೀರೋ ಕಂಪನಿ ಭಾರತದ ಮಾರುಕಟ್ಟೆಯಲ್ಲಿ ಸ್ಪ್ಲೆಂಡರ್ ಪ್ಲಸ್, HF ಡಿಲಕ್ಸ್, ಪ್ಯಾಶನ್ ಪ್ರೊ, ಸೂಪರ್ ಸ್ಪ್ಲೆಂಡರ್, ಎಕ್ಸ್‌ಪಲ್ಸ್ 200, ಗ್ಲಾಮರ್, ಹಾಗೂ ಎಕ್ಸ್‌ಟ್ರೀಮ್ 160ಆರ್ ಬೈಕುಗಳನ್ನು ಮಾರಾಟ ಮಾಡುತ್ತಿದೆ. ಇನ್ನು, ಸ್ಕೂಟರ್ ವಿಭಾಗದಲ್ಲಿ ಹೀರೋ ಪ್ಲೆಷರ್ ಪ್ಲಸ್, ಮೆಸ್ಟ್ರೋ ಎಡ್ಜ್, 125, ಡೆಸ್ಟಿನಿ 125 ಹಾಗೂ ಮೆಸ್ಟ್ರೋ ಎಡ್ಜ್ 110 ಅನ್ನು ಪ್ರಮುಖವಾಗಿ ಮಾರಾಟ ಮಾಡುತ್ತಿದೆ. ಇವು ಕೈಗೆಟುಕುವ ಬೆಲೆಯನ್ನು ಹೊಂದಿರುವುದರಿಂದ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಾರೆ ಎಂದು ಹೇಳಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications