Hero ಪ್ರೀಮಿಯಂ ಎಲೆಕ್ಟ್ರಿಕ್ ಬೈಕ್‌ಗಳು ಬರಲಿವೆ: ಆ ಮೇಲೆ ಸೃಷ್ಟಿಯಾಗಲಿದೆ ಇತಿಹಾಸ..!
ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಈಗಾಗಲೇ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ತಯಾರಿಸುತ್ತಿವೆ. ಟಿವಿಎಸ್ ಮೋಟಾರ್ ಐಕ್ಯೂಬ್ ಹಾಗೂ ಹೀರೋ ಮೋಟೋಕಾರ್ಪ್ ವಿಡಾ ವಿ1 ಎಲೆಕ್ಟ್ರಿಕ್ ಸ್ಕೂಟರ್ ನ್ನು ಮಾರಟ ಮಾಡುತ್ತಿದೆ. ಆದರೆ, ಯಾವುದೇ ಕಂಪನಿಗಳು ಮೋಟಾರ್‌ಸೈಕಲ್‌ನ್ನು ತಯಾರಿಸಿಲ್ಲ. ಇದೀಗ, ಹೀರೋ ದೊಡ್ಡ ಹೆಜ್ಜೆ ಇಟ್ಟಿದೆ.
ಹೀರೋ ಮೋಟೋಕಾರ್ಪ್ ದೇಶ ಮಾತ್ರವಲ್ಲದೇ, ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿ ಎಂದು ಖ್ಯಾತಿಗಳಿಸಿದೆ. ಪ್ರತಿಯೊಬ್ಬರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಇಷ್ಟಪಡುತ್ತಿದ್ದು, ಬೇಡಿಕೆಯು ಹೆಚ್ಚಾಗಿದೆ. ಇದನ್ನು ಮನಗಂಡಿರುವ ಹೀರೋ, ಅಮೆರಿಕದ ಕ್ಯಾಲಿಫೋರ್ನಿಯಾ ಪ್ರಮುಖ ಎಲೆಕ್ಟ್ರಿಕ್ ವಾಹನ (ಇವಿ) ಹಾಗೂ ಪವರ್‌ಟ್ರೇನ್ ತಯಾರಕ ಕಂಪನಿ ಝೀರೋ ಮೋಟಾರ್‌ಸೈಕಲ್ ಜೊತೆ ಪ್ರೀಮಿಯಂ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ಸ್ ತಯಾರಿಸಲು ಒಪ್ಪಂದ ಮಾಡಿಕೊಂಡಿದೆ.

ಈ ಬಗ್ಗೆ ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿಯೇ ಹೀರೋ ಕಂಪನಿ ಘೋಷಣೆ ಮಾಡಿತ್ತು. ಅದರ ಮುಂದುವರಿದ ಭಾಗವಾಗಿ ಝೀರೋ ಮೋಟಾರ್‌ಸೈಕಲ್ ಕಂಪನಿಯಲ್ಲಿ 60 ಮಿಲಿಯನ್ ಡಾಲರ್ (ರೂ.495 ಕೋಟಿ)ವರೆಗಿನ ಹೂಡಿಕೆ ಮಾಡಲು ಹೀರೋ ಮೋಟೋಕಾರ್ಪ್ ಆಡಳಿತ ಮಂಡಳಿ ಅನುಮೋದಿಸಿದೆ. ಇದನ್ನು ಗಮನಿಸಿದರೆ ಮುಂಬರುವ ದಿನಗಳಲ್ಲಿ ಹೀರೋದಿಂದ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಅತ್ಯುನ್ನತ ಎಲೆಕ್ಟ್ರಿಕ್ ಬೈಕ್ ಗಳು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು.
ಈ ಬಗ್ಗೆ ಮಾತನಾಡಿರುವ ಹೀರೋ ಮೋಟೋಕಾರ್ಪ್ ಅಧ್ಯಕ್ಷ ಮತ್ತು ಸಿಇಒ ಡಾ.ಪವನ್ ಮುಂಜಾಲ್ 'ಝೀರೋ ಮೋಟಾರ್‌ಸೈಕಲ್‌ನೊಂದಿಗೆ ನಮ್ಮ ಪಾಲುದಾರಿಕೆಯು ದೊಡ್ಡ ಮೈಲಿಗಲ್ಲಾಗಲಿದೆ. ಈ ಮೂಲಕ ಭಾರತ ಹಾಗೂ ಜಾಗತಿಕ ವಾಹನ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಬೈಕ್ ಹಾಗೂ ಸ್ಕೂಟರ್ ಮಾರಾಟವನ್ನು ವೇಗಗೊಳಿಸಲು ಸಾಧ್ಯವಾಗಲಿದೆ' ಎಂದು ಹೇಳಿದ್ದಾರೆ. 'ಈ ಒಪ್ಪಂದದಿಂದ ಗ್ರಾಹಕರಿಗೆ ಒಳ್ಳೆಯ ವಾಹನ ಸಿಗುವ ನೀರಿಕ್ಷೆಯಿದೆ' ಎಂದು ಝೀರೋ ಮೋಟಾರ್‌ಸೈಕಲ್ಸ್‌ನ ಸಿಇಒ ಸ್ಯಾಮ್ ಪಾಸ್ಚೆ ತಿಳಿಸಿದ್ದಾರೆ.
ಇದೀಗ, ತನ್ನ ಗ್ರಾಹಕರ ಅನುಕೂಲಕ್ಕಾಗಿ ಹೀರೋ ವಿಡಾ ಬ್ರಾಂಡ್ ಅಡಿ, ಬೆಂಗಳೂರು, ದೆಹಲಿ ಮತ್ತು ಜೈಪುರದ 50 ವಿವಿಧ ಸ್ಥಳಗಳಲ್ಲಿ ಸುಮಾರು 300 ಚಾರ್ಜಿಂಗ್ ಪಾಯಿಂಟ್‌ಗಳನ್ನು ಆರಂಭಿಸಿದೆ. ಇಲ್ಲಿ ಡಿಸಿ ಮತ್ತು ಎಸಿ ಚಾರ್ಜಿಂಗ್ ಸಾಕೆಟ್‌ಗಳನ್ನು ಅಳವಡಿಸಲಾಗಿದೆ. ಇನ್ನು, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಹೀರೋ ವಿಡಾ ವಿ1 (Hero Vida V1) ರೂ.1.28 ಲಕ್ಷದಿಂದ ರೂ.1.39 ಬೆಲೆಯಲ್ಲಿ ಸಿಗಲಿದೆ. ಸಂಪೂರ್ಣ ಚಾರ್ಜಿನಲ್ಲಿ 165 km ರೇಂಜ್ ನೀಡಲಿದೆ.
ಹೀರೋ ವಿಡಾ ವಿ1 ಎರಡು ರೂಪಾಂತರಗಳನ್ನು ಹೊಂದಿದೆ. ಅವುಗಳೆಂದರೆ, ವಿ1 ಪ್ರೊ ಹಾಗೂ ವಿ1 ಪ್ಲಸ್. ಕ್ರಮವಾಗಿ 3.94kWh, 3.44kWh ಬ್ಯಾಟರಿ ಪ್ಯಾಕ್ ಪಡೆದಿವೆ. ಅಲ್ಲದೆ, 80 kmph ಟಾಪ್ ಸ್ವೀಡ್ ಹೊಂದಿವೆ. ವಿ1 ಪ್ರೊ ಕೇವಲ 3.2 ಸೆಕೆಂಡುಗಳಲ್ಲಿ 0-40 kmph ವೇಗವನ್ನು ಪಡೆದರೆ, ವಿ1 ಪ್ಲಸ್ 3.4 ಸೆಕೆಂಡುಗಳಲ್ಲಿ 0-40 kmph ವೇಗವನ್ನು ತಲುಪಲಿದೆ. ಈ ಸ್ಕೂಟರ್ ಗಳು 12 ಇಂಚಿನ ಅಲಾಯ್ ವೀಲ್ಸ್, TFT ಟಚ್‌ಸ್ಕ್ರೀನ್ ಡಿಸ್ಪ್ಲೇ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಕೆಲವೇ ದಿನಗಗಳ ಹಿಂದೆ, ಹೀರೋ ಫೆಬ್ರವರಿ ತಿಂಗಳ ಮಾರಾಟ ವರದಿ ಪ್ರಕಟ ಮಾಡಿತ್ತು. ಬರೋಬ್ಬರಿ 394,460 ಯುನಿಟ್ ವಾಹನಗಳನ್ನು ಮಾರಾಟ ಮಾಡಿ ದಾಖಲೆ ನಿರ್ಮಿಸಿದೆ. ಈ ವರ್ಷದಿಂದ ವರ್ಷಕ್ಕೆ 10% ಪ್ರಗತಿ ಸಾಧಿಸಿದೆ. 2022ರ ಫೆಬ್ರವರಿಯಲ್ಲಿ 358,254 ಯುನಿಟ್ ಸೇಲ್ ಮಾಡಿತ್ತು. ಆದರೆ, ವಿವಿಧ ಕಾರಣಗಳಿಗೆ ವಿದೇಶಗಗಳಿಗೆ ವಾಹನಗಳನ್ನು ರಫ್ತು ಮಾಡುವಲ್ಲಿ ಹೀರೋ ಒಳ್ಳೆಯ ಬೆಳವಣಿಗೆಯನ್ನು ಕಂಡಿಲ್ಲ ಎಂದು ಹೇಳಬಹುದು.
ಹೀರೋ ಮೋಟೋಕಾರ್ಪ್ ಭಾರತದ ದ್ವಿಚಕ್ರ ವಾಹನ ಮಾರಾಟದಲ್ಲಿ ಯಾವಾಗಲೂ ಮುಂದೆ ಇರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಬದಲಾಗುತ್ತಿರುವ ಜನರ ಅಭಿರುಚಿಗೆ ತಕ್ಕಂತೆ ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಯಲ್ಲಿ ಲಾಂಚ್ ಮಾಡಲು ಕ್ಯಾಲಿಫೋರ್ನಿಯಾದ ಝೀರೋ ಮೋಟಾರ್‌ಸೈಕಲ್ ಜೊತೆ ಪ್ರೀಮಿಯಂ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ಸ್ ತಯಾರಿಸಲು ಒಪ್ಪಂದ ಮಾಡಿಕೊಂಡಿದೆ. ಮುಂಬರುವ ದಿನಗಳಲ್ಲಿ ಈ ಬೈಕ್ ಗಳು ಬರಲಿದ್ದು, ಆ ಮೇಲೆ ಹೊಸ ಇತಿಹಾಸವನ್ನೇ ಸೃಷ್ಟಿಸಬಹುದು.


Click it and Unblock the Notifications








