'ಹೋಂಡಾ ಆಕ್ಟಿವಾ 6G Smart' ವಿತರಣೆ ಪ್ರಾರಂಭ: ಗ್ರಾಹಕನಿಂದ ಮೈಲೇಜ್ ಟೆಸ್ಟ್.. ಅಚ್ಚರಿ ಫಲಿತಾಂಶ!
ಪ್ರಸಿದ್ಧ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡುರುವ ಹೋಂಡಾ, ಭಾರತದಲ್ಲಿ ಅತ್ಯಾಧುನಿಕ ವೈಶಿಷ್ಟ್ಯದೊಂದಿಗೆ ಕೆಲವು ದಿನಗಳ ಹಿಂದೆ 'ಆಕ್ಟಿವಾ 6G ಸ್ಮಾರ್ಟ್ ಸ್ಕೂಟರ್' ಬಿಡುಗಡೆ ಮಾಡಿತ್ತು. ಸದ್ಯ, ಈ ಸ್ಕೂಟರ್ ವಿತರಣೆ ಆರಂಭವಾಗಿದ್ದು, ಖರೀದಿದಾರನೊಬ್ಬ ಆಕ್ಟಿವಾ ಸ್ಮಾರ್ಟ್ ಆವೃತ್ತಿ ಎಷ್ಟು ಮೈಲೇಜ್ ನೀಡುತ್ತದೆ ಎಂಬುದನ್ನು ಪರೀಕ್ಷೆ ಮಾಡಿದ್ದಾನೆ.
ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI), ದೇಶೀಯ ಗ್ರಾಹಕರಿಗಾಗಿ ಹೋಂಡಾ 6Gಯ ನವೀಕರಿಸಿದ ಆವೃತ್ತಿಗಳನ್ನು ಪರಿಚಯಿಸಿತ್ತು. ಈ ಸ್ಕೂಟರ್ ಒಟ್ಟು ಮೂರು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಸ್ಟ್ಯಾಂಡರ್ಡ್, ಡಿಲಕ್ಸ್ ಮತ್ತು ಸ್ಮಾರ್ಟ್ ಕೀ ವಿತ್ ಅಲಾಯ್ ವೀಲ್ಸ್. ಎಕ್ಸ್ ಶೋರೂಂ ಪ್ರಕಾರ, ಇವುಗಳು ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಕ್ರಮವಾಗಿ ರೂ.74,536, ರೂ.77,036 ಮತ್ತು ರೂ.80,537 ದರವಿವೆ.

ಸದ್ಯ ಹೋಂಡಾ ಆಕ್ಟಿವಾ ಸ್ಮಾರ್ಟ್ ರೂಪಾಂತರವನ್ನು ವಿತರಣೆ ಪಡೆದ ಗ್ರಾಹಕನೊಬ್ಬ ಇದರ ಮೈಲೇಜ್ ಸಂಬಂಧಿಸಿದಂತೆ ನಡೆಸಿದ ಪರೀಕ್ಷೆಯ ವಿಡಿಯೋವನ್ನು Gear Update ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್‌ಲೋಡ್ ಮಾಡಿದ್ದಾನೆ. ಅದರ ಪ್ರಕಾರ, ಈ ಸ್ಕೂಟರ್ ಅರ್ಧ ಲೀಟರ್ ಪೆಟ್ರೋಲ್ ಬಳಕೆಯಲ್ಲಿ ಗರಿಷ್ಠ 26 ಕಿ.ಮೀ ಮೈಲೇಜ್ ನೀಡಿದ್ದು, ಒಂದು ಲೀಟರ್ ಪೆಟ್ರೋಲ್ ಹಾಕಿದರೆ, ಸುಮಾರು 52 ಕಿ.ಮೀ ಮೈಲೇಜ್ ಅನ್ನು ಈ ಸ್ಕೂಟರ್ ಕೊಡಬಹುದು. ಆದರೆ, ಮೊದಲ ಸರ್ವಿಸ್ ಬಳಿಕವಷ್ಟೇ, ನೂತನ ಹೋಂಡಾ ಆಕ್ಟಿವಾ ಸ್ಕೂಟರ್ ಎಷ್ಟು ಮೇಲೆ ನೀಡಲಿದೆ ಎಂಬುದು ತಿಳಿಯಲಿದೆ.
ಅಲ್ಲದೆ, ಇದರಲ್ಲಿ ಅಳವಡಿಕೆ ಮಾಡಲಾದ ವೈಶಿಷ್ಟ್ಯಗಳು ಕೂಡ ಅತ್ಯುನತವಾಗಿ ಕೆಲಸ ಮಾಡುತ್ತವೆ ಎಂದು ವರದಿಯಾಗಿದೆ. ಹೋಂಡಾ ಆಕ್ಟಿವಾ 6G ಸ್ಮಾರ್ಟ್ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು ಸ್ಮಾರ್ಟ್ ಅನ್‌ಲಾಕ್, ಸ್ಮಾರ್ಟ್ ಸ್ಟಾರ್ಟ್, ಸ್ಮಾರ್ಟ್ ಫೈಂಡ್ ಮತ್ತು ಸ್ಮಾರ್ಟ್ ಸೇಫ್ ಎಂಬ ಪ್ರಮುಖ ಫೀಚರ್ಸ್ ಗಳನ್ನು ಹೊಂದಿದೆ. ಸ್ಮಾರ್ಟ್ ಅನ್‌ಲಾಕ್ ವೈಶಿಷ್ಟ್ಯವು ಸವಾರರಿಗೆ ತುಂಬಾ ಉಪಯುಕ್ತವಾಗಿದೆ ಎಂದು ಹೇಳಬಹುದು. ಇದು ನಿಮ್ಮ ಹ್ಯಾಂಡಲ್‌ಬಾರ್‌ಗಳು, ಸ್ಟೋರೇಜ್ ಏರಿಯಾ ಹಾಗೂ ಫ್ಯುಯೆಲ್ ಫಿಲ್ಲರ್ ಕ್ಯಾಪ್ ಲಾಕ್/ಅನ್‌ಲಾಕ್ ನೆರವಾಗುತ್ತದೆ (ಸ್ಕೂಟರ್ ನಿಂದ 2 ಮೀಟರ್ ಒಳಗಿರಬೇಕು).

ಸ್ಮಾರ್ಟ್ ಫೈಂಡ್ ವೈಶಿಷ್ಟ್ಯವು ಸುಮಾರು 10 ಮೀಟರ್‌ಗಳಷ್ಟು ದೂರದಲ್ಲೇ ನಿಮ್ಮ ಆಕ್ಟಿವಾ ಸ್ಕೂಟರ್ ಹುಡುಕಲು ಸಹಾಯ ಮಾಡುತ್ತದೆ. ಸ್ಮಾರ್ಟ್ ಸೇಫ್ ವೈಶಿಷ್ಟ್ಯವೆಂಬುದು ಆಂಟಿ-ಥೆಫ್ಟ್ ಸಿಸ್ಟಮ್ ಆಗಿದೆ ಎಂಬುದು ಗಮನಿಸಬೇಕಾದ ಅಂಶವಾಗಿದೆ. ಈ ಆಕ್ಟಿವಾ ಸ್ಕೂಟರ್ ಬಣ್ಣಗಳ ಆಯ್ಕೆ ಕುರಿತು ಹೇಳುವುದಾದರೆ, ಇದು ಡಿಸೆಂಟ್ ಬ್ಲೂ, ರೆಬೆಲ್ ರೆಡ್ ಮೆಟಾಲಿಕ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್, ಬ್ಲಾಕ್, ಪರ್ಲ್ ಪ್ರೆಶಿಯಸ್ ವೈಟ್ ಮತ್ತು ಪಿಯರ್ ಸೈರನ್ ಬ್ಲೂ ಬಣ್ಣಗಳಲ್ಲಿ ಗ್ರಾಹಕರಿಗೆ ಖರೀದಿಗೆ ದೊರೆಯಲಿದೆ.
ನೂತನ ಹೋಂಡಾ ಆಕ್ಟಿವಾ 6G ಸ್ಮಾರ್ಟ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು ತನ್ನ ಹಿಂದಿನ ಮಾದರಿ ಹೋಂಡಾ ಆಕ್ಟಿವಾ 6Gಯಲ್ಲಿರುವ ಎಂಜಿನ್‌ನ್ನೇ ಇಲ್ಲಿಯೂ ಉಪಯೋಗ ಮಾಡಲಾಗಿದೆ. ಸದ್ಯ 109.51 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, ಇದು 7.73 bhp ಗರಿಷ್ಠ ಪವರ್ ಹಾಗೂ 8.9 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 5.3 ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಪಡೆದಿದೆ. ತೂಕದಲ್ಲಿ ಹಿಂದಿನ ಮಾದರಿಗಿಂತ 1 ಕೆಜಿ ಹಗುರವಾಗಿದೆ ಎಂದು ಹೇಳಬಹುದು.
ಈ ಹೋಂಡಾ ಆಕ್ಟಿವಾ ಸ್ಕೂಟರ್ ಗಳು ಮೈಲೇಜ್ ನಿಂದ ಸಾಕಷ್ಟು ಭಾರತೀಯ ಗ್ರಾಹಕರನ್ನು ಆಕರ್ಷಿಸುತ್ತವೆ. ಇದೀಗ ಗ್ರಾಹಕನೊಬ್ಬ ನಡೆಸಿರುವ ಪರೀಕ್ಷೆಯಲ್ಲಿ ಅತ್ಯುನ್ನತ ಫಲಿತಾಂಶ ಕಂಡುಬಂದಿದ್ದು, ಇದು ಆಕ್ಟಿವಾ ಸ್ಕೂಟರ್ ಖರೀದಿಸಲು ಹೆಚ್ಚಿನ ಸಂಖ್ಯೆಯ ಯುವ ಜನರನ್ನು ಆಕರ್ಷಿಸಬಹುದು. ಹೋಂಡಾ ಆಕ್ಟಿವಾಗೆ ಮಾರುಕಟ್ಟೆಯಲ್ಲಿ ಟಿವಿಎಸ್ ಜುಪಿಟರ್, ಸುಜುಕಿ ಆಕ್ಸೆಸ್, ಯಮಹಾ ZR ಮತ್ತು ಹೀರೋ ಮೆಸ್ಟ್ರೋ ಎಡ್ಜ್ ಪ್ರಬಲ ಪ್ರತಿಸ್ಪರ್ಧಿಯಾಗಿವೆ. ಆದರೆ, ಯಾವುದೇ ಕಂಪನಿಗಳಿಗೆ ಹೋಂಡಾ ಆಕ್ಟಿವಾದ ಜಾಗವನ್ನು ಆಕ್ರಮಿಸಿಕೊಳ್ಳಲು ಸಾಧ್ಯವಾಗಿಲ್ಲ.
ಹೋಂಡಾ ಕಂಪನಿಯು ಮುಂದಿನ ವರ್ಷ (2024) ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಆವೃತ್ತಿಯನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಈ ಸ್ಕೂಟರ್ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುವ ಸಾಧ್ಯತೆ ಇದ್ದು, ಗ್ರಾಹಕರನ್ನು ಆಕರ್ಷಿಸುವ ವೈಶಿಷ್ಟ್ಯಗಳನ್ನು ಹೊಂದಿರಲಿದ್ದು, ಸಂಪೂರ್ಣ ಚಾರ್ಜಿನಲ್ಲಿ ಗರಿಷ್ಠ ರೇಂಜ್ ನೀಡಲಿದೆ ಎಂದು ಹೇಳಲಾಗಿದ್ದು, 50 kmph ಟಾಪ್ ಸ್ವೀಡ್ ಹೊಂದಿರಲಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಕಂಪನಿಯು ಯಾವುದೇ ಮಾಹಿತಿಯನ್ನು ಈವರೆಗೆ ಬಹಿರಂಗಪಡಿಸಲ್ಲ. ಎಲ್ಲವೂ ಈ ಸ್ಕೂಟರ್ ಅನಾವರಣಗೊಂಡ ಮೇಲೆಯೇ ತಿಳಿಯಲಿದೆ.


Click it and Unblock the Notifications