ಭರ್ಜರಿ ಮೈಲೇಜ್ ನೀಡುವ ಹೋಂಡಾ SP125 ಸ್ಪೋರ್ಟ್ಸ್ ಆವೃತ್ತಿ ಬಿಡುಗಡೆ
ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಇಂದು SP125 ಸ್ಪೋರ್ಟ್ಸ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಹೊಸ SP125 ಸ್ಪೋರ್ಟ್ಸ್ ಆವೃತ್ತಿಯ ಬುಕ್ಕಿಂಗ್‌ಗಳನ್ನು ಈಗಲೇ ತೆರೆಯಲಾಗಿದೆ. ಇದು ಸೀಮಿತ ಅವಧಿಗೆ ದೇಶಾದ್ಯಂತ ಎಲ್ಲಾ ಹೋಂಡಾ ರೆಡ್ ವಿಂಗ್ ಡೀಲರ್‌ಶಿಪ್‌ಗಳಲ್ಲಿ ಲಭ್ಯವಿರುತ್ತದೆ ಎಂದು ಕಂಪನಿ ತಿಳಿಸಿದೆ.
ಹೊಸ ಹೋಂಡಾ SP125 ಸ್ಪೋರ್ಟ್ಸ್ ಆವೃತ್ತಿಯ ಬೆಲೆಯು ರೂ. 90,567 (ಎಕ್ಸ್ ಶೋ ರೂಂ, ದೆಹಲಿ) ಇದೆ. SP125 ಸ್ಪೋರ್ಟ್ಸ್ ಆವೃತ್ತಿಯು ಹಣಕ್ಕೆ ಉತ್ತಮ ಮೌಲ್ಯವನ್ನು ನೀಡುವುದರ ಜೊತೆಗೆ ವರ್ಗ-ಪ್ರಮುಖ ವೈಶಿಷ್ಟ್ಯಗಳೊಂದಿಗೆ ಸಜ್ಜಾಗಿದೆ. LED ಹೆಡ್‌ಲ್ಯಾಂಪ್, ಗೇರ್ ಇಂಡಿಕೇಟರ್ ಮತ್ತು ಇತರ ಮೈಲೇಜ್ ಮಾಹಿತಿಯನ್ನು ಹೊಂದಿರುವ ಸಂಪೂರ್ಣ ಡಿಜಿಟಲ್ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್ ಜೊತಗೆ ಬರುತ್ತದೆ.

ಇದರ ವಿನ್ಯಾಸದ ಕುರಿತು ಹೇಳುವುದಾದರೆ, ಇದರ ಆಕ್ರಮಣಕಾರಿ ಟ್ಯಾಂಕ್ ವಿನ್ಯಾಸ, ಮ್ಯಾಟ್ ಮಫ್ಲರ್ ಕವರ್ ಮತ್ತು ವರ್ಧಿತ ಗ್ರಾಫಿಕ್ಸ್ ಜೊತೆಗೆ ಬಾಡಿ ಪ್ಯಾನೆಲ್‌ಗಳು ಮತ್ತು ಅಲಾಯ್ ವೀಲ್‌ಗಳ ಮೇಲೆ ಹೊಸ ರೋಮಾಂಚಕ ಪಟ್ಟಿಗಳನ್ನು ಹೊಂದಿದೆ. ಇದು ಆಕರ್ಷಕ ಡೀಸೆಂಟ್ ಬ್ಲೂ ಮೆಟಾಲಿಕ್ ಮತ್ತು ಹೆವಿ ಗ್ರೇ ಮೆಟಾಲಿಕ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.
ಹೊಸ ಹೋಂಡಾ SP125 ಎಂಜಿನ್ ಕುರಿತು ಹೇಳುವುದಾದರೆ, 123.94cc, ಸಿಂಗಲ್-ಸಿಲಿಂಡರ್ BSVI OBD2 ಕಂಪ್ಲೈಂಟ್ PGM-FI ಎಂಜಿನ್‌ನೊಂದಿಗೆ ರೋಮಾಂಚಕ ಕಾರ್ಯಕ್ಷಮತೆಯನ್ನು ನೀಡುತ್ತದೆ. 8kW ಪವರ್ ಮತ್ತು 10.9 Nm ಟಾರ್ಕ್ ಅನ್ನು ಹೊರಹಾಕುತ್ತದೆ. 123.94cc ಎಂಜಿನ್‌ಗೆ ಈ ಮಟ್ಟದ ಪವರ್ ತುಂಬಾ ಆಸಕ್ತಿದಾಯಕವಾದದ್ದಾಗಿದ್ದು, ಮೈಲೇಜ್ ವಿಷಯದಲ್ಲಿ ಲೀಟರ್‌ಗೆ ಬರೋಬ್ಬರಿ 65 ಕಿ.ಮೀ ನೀಡುತ್ತದೆ ಎಂದು ಕಂಪನಿ ತಿಳಿಸಿದೆ.

ಸಾಮಾನ್ಯ ಹೋಂಡಾ SP125: ಇದು ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಡ್ರಮ್ ರೂಪಾಂತರ ರೂ.85,131 (ಎಕ್ಸ್ ಶೋರೂಂ) ಹಾಗೂ ಡಿಸ್ಕ್ ರೂಪಾಂತರದ ರೂ.89 ಸಾವಿರ ದರ ಹೊಂದಿದ್ದು, ಐದು ಬಣ್ಣಗಳ ಆಯ್ಕೆಯನ್ನು ಪಡೆದಿದೆ. ಎಂಜಿನ್ ಹಾಗೂ ಪವರ್‌ನಲ್ಲಿ ಸ್ಪೋರ್ಟ್ ಆವೃತ್ತಿ ಹಾಗೂ ಸಾಮಾನ್ಯ ಆವೃತ್ತಿಗಳಲ್ಲಿ ಯಾವುದೇ ಬದಲಾವಣೆ ಇಲ್ಲ.
ಹೋಂಡಾ SP125 ನವೀಕರಿಸಿದ ಎಂಜಿನ್ ಆಯ್ಕೆಯಲ್ಲಿ ಬಿಡುಗಡೆಯಾಗಿರುವುದರಿಂದ ಬಜಾಜ್ ಪಲ್ಸರ್ 125ಗೆ ಭಾರೀ ಪೈಪೋಟಿ ನೀಡಲಿದೆ. ಬೆಲೆಯು ಕೂಡ ಗ್ರಾಹಕರ ಕೈಗೆಟುಕುವಂತ್ತಿದ್ದು, ಅದಕ್ಕೆ ತಕ್ಕಂತೆಯೇ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಮುಂಬರುವ ದಿನಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಈ ಬೈಕ್, ಹೇಗೆ ಕಮಾಲ್ ಮಾಡಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.
ಹೊಸ ಸ್ಪೋರ್ಟ್ ಆವೃತ್ತಿಯ ಕುರಿತು ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಅಧ್ಯಕ್ಷ ಮತ್ತು ಸಿಇಒ ಸುತ್ಸುಮು ಒಟಾನಿ ಮಾತನಾಡಿ, "ಹೋಂಡಾ SP125 ತನ್ನ ಸುಧಾರಿತ ವೈಶಿಷ್ಟ್ಯಗಳು, ಸೊಗಸಾದ ವಿನ್ಯಾಸ ಮತ್ತು ರೋಮಾಂಚಕ ಕಾರ್ಯಕ್ಷಮತೆಯೊಂದಿಗೆ ಗ್ರಾಹಕರನ್ನು ಉತ್ಸುಕಗೊಳಿಸಲಿದೆ. 125cc ಪ್ರೀಮಿಯಂ ಪ್ರಯಾಣಿಕ ಮೋಟಾರ್‌ಸೈಕಲ್ ವಿಭಾಗದಲ್ಲಿ ಇದು ಉತ್ತಮ ಪರ್ಫಾಮೆನ್ಸ್ ನೀಡುವ ಮೋಟಾರ್‌ಸೈಕಲ್ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಜೊತೆಗೆ ಹೊಸ SP125 ಸ್ಪೋರ್ಟ್ಸ್ ಆವೃತ್ತಿಯ ಬಿಡುಗಡೆಯು ನಮ್ಮ ಗ್ರಾಹಕರಿಗೆ, ವಿಶೇಷವಾಗಿ ಯುವ ಪೀಳಿಗೆಗೆ ಮತ್ತಷ್ಟು ಸಂತೋಷವನ್ನು ನೀಡುತ್ತದೆ ಎಂದು ನಮಗೆ ವಿಶ್ವಾಸವಿದೆ. ಬುಕಿಂಗ್‌ಗಳು ಈಗಾಗಲೇ ತೆರೆದಿದ್ದು, ಮುಂದಿನ ಒಂದೆರಡು ತಿಂಗಳುಗಳಲ್ಲಿ ನಮ್ಮ ಈ ಸ್ಪೋರ್ಟ್ಸ್ ಆವೃತ್ತಿಗೆ ಉತ್ತಮ ಬೇಡಿಕೆ ವ್ಯಕ್ತವಾಗುವ ನಿರೀಕ್ಷೆಯಲ್ಲಿದ್ದೇವೆ ಎಂದು ಅವರು ಹೇಳಿದರು.
ಹೋಂಡಾ SP125 ಸ್ಪೋರ್ಟ್ಸ್ ಆವೃತ್ತಿಯ ಬಿಡುಗಡೆಯ ಕುರಿತು ಪ್ರತಿಕ್ರಿಯಿಸಿದ ಹೋಂಡಾ ಮೋಟಾರ್‌ಸೈಕಲ್ ಮಾರುಕಟ್ಟೆಯ ನಿರ್ದೇಶಕ ಯೋಗೇಶ್ ಮಾಥುರ್, "ಹೊಂಡಾ SP125 ಸ್ಪೋರ್ಟ್ಸ್ ಆವೃತ್ತಿಯನ್ನು ಬಿಡುಗಡೆ ಮಾಡಲು ನಾವು ಸಂತೋಷಪಡುತ್ತೇವೆ. ಅದರ ಆಧುನಿಕ ಸಲಕರಣೆಗಳೊಂದಿಗೆ ನಿಮಗೆ ಸುಧಾರಿತ ಅನುಭವವನ್ನು ನೀಡಲಿದೆ. ಗ್ರಾಹಕರಲ್ಲಿ ಜನಪ್ರಿಯ ಆಯ್ಕೆಯಾಗಿ ಉಳಿಯುತ್ತದೆ ಎಂದು ನಾವು ನಂಬುತ್ತೇವೆ ಎಂದರು.


Click it and Unblock the Notifications