MotoGP: ಭದ್ರತಾ ಕ್ರಮ ಕೈಗೊಳ್ಳಲು ಸ್ಥಳ ಪರಿಶೀಲಿಸಿದ ಪೊಲೀಸರು
'ಮೋಟೋಜಿಪಿ (MotoGP) ವಿಶ್ವ ಚಾಂಪಿಯನ್‌ಶಿಪ್'ನ 14ನೇ ಸುತ್ತಿನ ಸ್ಪರ್ಧೆಗಳು ನೋಯ್ಡಾದ ಬುದ್ಧ ಅಂತರರಾಷ್ಟ್ರೀಯ ಸರ್ಕ್ಯೂಟ್ ನಲ್ಲಿ ಸೆಪ್ಟೆಂಬರ್ ತಿಂಗಳ 22 ರಿಂದ 24ರವರೆಗೆ ನಡೆಯಲಿದೆ. ಈಗಾಗಲೇ ಭರದಿಂದ ಸಿದ್ಧತೆಗಳು ಜರುಗುತ್ತಿವೆ. ಕಾರ್ಯಕ್ರಮವನ್ನು ಯಾವುದೇ ಅಡೆ-ತಡೆ ಇಲ್ಲದೇ ನಡೆಸಲು ಆಯೋಜಕರು ಶ್ರಮಿಸುತ್ತಿದ್ದಾರೆ.
ಇತ್ತೀಚೆಗೆ, ಗೌತಮ್ ಬುದ್ಧ ನಗರ ಪೊಲೀಸರು, ಮೋಟೋಜಿಪಿ ಆಯೋಜಕರು ಮತ್ತು ಬುದ್ಧ ಸರ್ಕ್ಯೂಟ್ ನಿರ್ವಹಿಸುವ ಜೇಪೀ ಗ್ರೂಪ್ ಅಧಿಕಾರಿಗಳು, ಸುರಕ್ಷತೆ ಹಾಗೂ ಭದ್ರತಾ ವ್ಯವಸ್ಥೆ ಬಗ್ಗೆ ಚರ್ಚಿಸಲು ಸಭೆ ನಡೆಸಿದ್ದಾರೆ. ಎಸಿಪಿ ಆನಂದ್ ಕುಲಕರ್ಣಿ, ಡಿಸಿಪಿ ಸಾದ್ ಮಿರ್ಜಾ ಖಾನ್, ಹೆಚ್ಚುವರಿ ಡಿಸಿಪಿ ಅಶೋಕ್ ಕುಮಾರ್, ಎಸಿಪಿ ಪವನ್ ಕುಮಾರ್ ಗೌತಮ್, ದಂಕೌರ್ ಠಾಣೆ ಇನ್ಸ್ ಪೆಕ್ಟರ್ ಸಂಜಯ್ ಕುಮಾರ್ ಸಿಂಗ್ ಭಾಗವಹಿಸಿದ್ದರು.

ಇವರೊಟ್ಟಿಗೆ ಜೇಪೀ ಗ್ರೂಪ್ ನ ಎಸ್ ಎಂ ಅಜ್ಮತ್, ಬ್ರಿಗೇಡಿಯರ್ ಸುಧೀರ್ ಲಂಬಾ, ಮತ್ತು ಮೇಜರ್ ನಿಶಾಂತ್ ಶ್ರೀವಾಸ್ತವ ಜೊತೆಗೆ ಫೇರ್‌ಸ್ಟ್ರೀಟ್ ಸ್ಪೋರ್ಟ್ಸ್‌ನ ಸದಸ್ಯರು ಹಾಜರಿದ್ದರು. ಸಭೆಯಲ್ಲಿ ರೇಸ್ ನಡೆಯುವ ದಿನ ಭದ್ರತೆ ಹಾಗೂ ಸುಗಮ ಸಂಚಾರದ ವ್ಯವಸ್ಥೆ, ವಿಐಪಿಗಳಿಗೆ ಹೆಲಿಪ್ಯಾಡ್ ಪ್ರವೇಶ ಲಭ್ಯವಿರುತ್ತದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಚರ್ಚಿಸಲಾಗಿದೆ.
ಸಭೆ, ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳು, ಬುದ್ಧ ಅಂತರರಾಷ್ಟ್ರೀಯ ಸರ್ಕ್ಯೂಟ್ ರೇಸ್ ಟ್ರ್ಯಾಕ್ ಪರಿಶೀಲಿಸಿ, ಹೇಗೆಲ್ಲ ಭದ್ರತೆಗೆ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂಬುದರ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇಷ್ಟು ಮಾತ್ರವಲ್ಲದೆ, ಸರ್ಕ್ಯೂಟ್‌ನ ಸುತ್ತಮುತ್ತಲಿನ ಟ್ರಾಫಿಕ್ ಅನ್ನು ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆ ಯೋಜನೆಯನ್ನು ರೂಪಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ಫೇರ್‌ಸ್ಟ್ರೀಟ್ ಸ್ಪೋರ್ಟ್ಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಷ್ಕರ್ ನಾಥ್ ಶ್ರೀವಾಸ್ತವ ಅವರು, 'ಸಭೆಯು ಯಶಸ್ವಿಯಾಗಿದೆ. ಸ್ಥಳೀಯ ಪೊಲೀಸರು, ಭಾರತದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸುತ್ತಿರುವ 'ಮೋಟೋಜಿಪಿ' ರೇಸ್ ಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ' ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ 'ಮೋಟೋಜಿಪಿ ವಿಶ್ವ ಚಾಂಪಿಯನ್‌ಶಿಪ್'ಗೆ ಅತಿಥಿಯಾಗಿ ಭಾಗವಹಿಸುವಂತೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರನ್ನು ಆಯೋಜಕರು ಆಹ್ವಾನಿಸಿದ್ದಾರೆ. ನೀವು ಕೂಡ ಬುಕ್ ಮೈ ಶೋ (BookMyShow)ನಲ್ಲಿ ಈ ರೇಸ್ ನೋಡಲು ಟಿಕೆಟ್ ಕೊಂಡುಕೊಳ್ಳಬಹುದು. ಬುದ್ಧ ಸರ್ಕ್ಯೂಟ್ ಆಸನಗಳ ಅನ್ವಯ ಟಿಕೆಟ್ ದರಗಳು ಕನಿಷ್ಠ ರೂ.800 ದಿಂದ ಗರಿಷ್ಠ ರೂ.40,000 ತನಕವಿದೆ.
ಒಂದೊಮ್ಮೆ ಅಲ್ಲಿಗೆ ಹೋಗಲು ಸಾಧ್ಯವಾಗದಿದ್ದರೆ, ಜಿಯೋ ಸಿನಿಮಾ ಅಥವಾ ಸ್ಪೋರ್ಟ್ಸ್18ನಲ್ಲಿ ಮೋಟೋಜಿಪಿ ರೇಸ್ ಅನ್ನು ಉಚಿತವಾಗಿ ವೀಕ್ಷಿಸಬಹುದು. ಮೂರು ವಿಭಾಗದಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ ಡುಕಾಟಿ, ಕೆಟಿಎಂ, ಅಪ್ರಿಲಿಯಾ, ಯಮಹಾ, ಹೋಂಡಾ, ಸೇರಿದಂತೆ ದೇಶ ವಿದೇಶದ ಪ್ರಖ್ಯಾತ ತಂಡಗಳು ಭಾಗವಹಿಸಲಿದ್ದು, ಪ್ರಶಸ್ತಿಗಾಗಿ ಸೆಣಸಲಿವೆ. ಅಂತೂ ರೇಸ್ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications