ಕೈಗೆಟುವ ಬೆಲೆಯಲ್ಲಿ ಬರಲಿದೆ ಹೊಸ ಗೊಗೊರೊ ಎಲೆಕ್ಟ್ರಿಕ್ ಸ್ಕೂಟರ್!
ಭಾರತದಲ್ಲಿ ಇವಿ ಮಾರುಕಟ್ಟೆ ದಿನದಿಂದ ದಿನಕ್ಕೆ ಬೆಳವಣಿಗೆಯಾಗುತ್ತಿದೆ. ಹೊಸ ಎಲೆಕ್ಟ್ರಿಕ್ ವಾಹನಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ತೈವಾನ್‌ನ ಅತಿದೊಡ್ಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಮತ್ತು ಬ್ಯಾಟರಿ ಸ್ವಾಪಿಂಗ್ ಕಂಪನಿ ಗೊಗೊರೊ, ದೇಶೀಯ ಮಾರುಕಟ್ಟೆಯನ್ನು ಪ್ರವೇಶಿಸಲು ತಯಾರಿ ನಡೆಸುತ್ತಿದೆ. ಇದಕ್ಕಾಗಿ ಇವಿಗಳನ್ನು ರೆಡಿ ಮಾಡುತ್ತಿದೆ.
ಭಾರತದಲ್ಲಿ ವಿವಿಧ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ತಯಾರಿಸಲು ಬ್ಯಾಟರಿ ಸ್ವಾಪಿಂಗ್ ಕಂಪನಿ ಗೊಗೊರೊ, ಆಟೋಮೋಟಿವ್ ಕಾಂಪೊನೆಂಟ್ ತಯಾರಕ ಕಂಪನಿ ಮೆಟಲ್‌ಮ್ಯಾನ್ ಆಟೋ ಜೊತೆ ಒಪ್ಪಂದ ಮಾಡಿಕೊಂಡಿದೆ. ಮೆಟಲ್‌ಮ್ಯಾನ್ ಆಟೋ ಮಹಾರಾಷ್ಟ್ರದ ಔರಂಗಾಬಾದ್‌ನ ವಾಲುಜ್‌ನಲ್ಲಿರುವ ತನ್ನ ಉತ್ಪಾದನಾ ಘಟಕದಲ್ಲಿ ಜೂನ್ 2023ರಿಂದ ಗೊಗೊರೊಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳ ಉತ್ಪಾದನೆಯನ್ನು ಪ್ರಾರಂಭಿಸುತ್ತದೆ. ಕೇಂದ್ರ ಸರ್ಕಾರದ FAME 2 ಸಬ್ಸಿಡಿಯಿಂದ ಪ್ರಯೋಜನ ಪಡೆಯಲು ಹೈ ಸ್ವೀಡ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ತಯಾರಿಸಲಿದೆ.

ಗೊಗೊರೊ ಕಂಪನಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ದೇಶೀಯ ಮಾರುಕಟ್ಟೆಯಲ್ಲಿ ಈ ವರ್ಷದ ಮಧ್ಯಭಾಗದಲ್ಲಿ ಲಾಂಚ್ ಮಾಡಲಿದೆ. ಸಾಮಾನ್ಯ ಜನರಿಗಾಗಿ B2C (ಗ್ರಾಹಕರಿಗೆ ನೇರವಾಗಿ ಉತ್ಪನ್ನ ಮಾರಾಟ ಮಾಡುವುದು) ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುವುದು ಕಂಪನಿ ಮೊದಲ ಕಾರ್ಯಸೂಚಿಯಾಗಿದೆ. ವರದಿಗಳ ಪ್ರಕಾರ, ಕಂಪನಿಯು ಪ್ರಸ್ತುತ PUZ, CU ಮತ್ತು UX ಎಂಬ ಕೋಡ್ ನೇಮ್ ಹೊಂದಿರುವ ಮೂರು ಸ್ಕೂಟರ್ ರೆಡಿ ಮಾಡುತ್ತಿದೆ ಎಂದು ಹೇಳಲಾಗಿದೆ. ಜೊತೆಗೆ ಕಂಪನಿಯು ಇತರೆ ದೇಶಗಳಿಗೆ ನೂತನ ಇವಿಗಳನ್ನು ರಫ್ತು ಮಾಡಲು ಯೋಜಿಸುತ್ತಿದೆ.
ಭಾರತದಲ್ಲಿ ವಾರ್ಷಿಕವಾಗಿ 50,000 ರಿಂದ 1,00,000 ಯುನಿಟ್ ಸ್ಕೂಟರ್ ತಯಾರಿಸುವ ಗುರಿಯನ್ನು ಗೊಗೊರೊ ಕಂಪನಿ ಹೊಂದಿದೆ. ಮುಂದಿನ ಕೆಲವು ವರ್ಷಗಳಲ್ಲಿ ಅದರ ಒಟ್ಟು ಉತ್ಪಾದನೆಯ ಶೇಕಡ 10 - 20 ರಷ್ಟನ್ನು ವಿದೇಶಗಳಿಗೆ ರಫ್ತು ಮಾಡಲು ಯೋಜಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೊಗೊರೊದ ಸಹ-ಸಂಸ್ಥಾಪಕ, ಸಿಇಒ ಹೊರೇಸ್ ಲ್ಯೂಕ್, 'ಗೊಗೊರೊ ಹಲವಾರು ದೇಶಗಳಲ್ಲಿ ತನ್ನ ಹೆಜ್ಜೆಗುರುತನ್ನು ವಿಸ್ತರಿಸಲು ಪ್ರಯತ್ನಿಸುತ್ತಿದ್ದು, ಅದರ ಭಾಗವಾಗಿ ಸ್ಥಳೀಯ ಉತ್ಪಾದನಾ ಪಾಲುದಾರರನ್ನು ಹೊಂದಲಿದೆ' ಎಂದು ಹೇಳಿದ್ದಾರೆ.
ಗೊಗೊರೊ ಈಗಾಗಲೇ ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಹೀರೊ ಮೋಟೊಕಾರ್ಪ್ ಮತ್ತು ಫಾಕ್ಸ್‌ಕಾನ್‌ನೊಂದಿಗೆ ಬ್ಯಾಟರಿಗಳ ಅಭಿವೃದ್ಧಿ ಮತ್ತು ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿದೆ. ಇಷ್ಟೇ ಅಲ್ಲದೆ, ಜಾಗತಿಕವಾಗಿ, ಯಮಹಾ ಮತ್ತು ಸುಜುಕಿ ತೈವಾನ್ ಸೇರಿದಂತೆ 10 ವಿವಿಧ ವಾಹನ ತಯಾರಕ ಕಂಪನಿಗಳೊಂದಿಗೆ ಬ್ಯಾಟರಿ ಸಂಬಂಧ ಗೊಗೊರೊ ಒಡಂಬಡಿಕೆ ಮಾಡಿಕೊಂಡಿದೆ ಎಂದು ಹೇಳಬಹುದು. ಇದರಿಂದ ಕಂಪನಿ ತಯಾರಿಸುವ ಬ್ಯಾಟರಿಯು ಉತ್ತಮವಾಗಿರಲಿದೆ ಎಂಬುದು ಗೊತ್ತಾಗಲಿದೆ.
ಗೊಗೊರೊ ಕಂಪನಿ, ತನ್ನ ಎಸ್1 ಇ-ಸ್ಕೂಟರ್ ಅನ್ನು ಭಾರತದಲ್ಲಿ ಮೊದಲು ಬಿಡುಗಡೆ ಮಾಡುವ ಸಾಧ್ಯತೆಯಿದ್ದು, ಇದು ದೇಶದಲ್ಲಿ ಒಂದು ಅತ್ಯುತ್ತಮ ಇವಿಯಾಗಬಹುದು. ಗೊಗೊರೊ ಎಸ್1 ಇವಿ, 7.2 kW ಗರಿಷ್ಠ ಪವರ್ ಮತ್ತು 27 Nm ಪೀಕ್ ಟಾರ್ಕ್ ಉತ್ಪಾದಿಸುವ ಮಿಡ್-ಮೌಂಟೆಡ್ ಮೋಟಾರ್‌ನಿಂದ ಚಾಲಿತವಾಗಲಿದ್ದು, ಈ ಎಲೆಕ್ಟ್ರಿಕ್ ಸ್ಕೂಟರ್ ಬದಲಾಯಿಸಬಹುದಾದ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನೊಂದಿಗೆ ಖರೀದಿಗೆ ಲಭ್ಯವಾಗಬಹುದು. ಅದು ಗಂಟೆಗೆ 30 ಕಿ.ಮೀ ಟಾಪ್ ಸ್ವೀಡ್ ನಲ್ಲಿ 150 ಕಿ.ಮೀ ರೇಂಜ್ ನೀಡಬಹುದು.
ಈ ಗೊಗೊರೊ ಎಸ್1 ಇವಿಯನ್ನು ಚಾರ್ಜ್ ಖಾಲಿಯಾಗಿರುವ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿದ ಬ್ಯಾಟರಿಯೊಂದಿಗೆ ಬದಲಾಯಿಸಲು ನಿಮಿಷ ಸಾಕು ಎಂಬಂತೆ ವಿನ್ಯಾಸಗೊಳಿಸಲಾಗುತ್ತದೆ ಎಂದು ಹೇಳಲಾಗಿದೆ. ಎಲ್‌ಇಡಿ ಲೈಟಿಂಗ್, ಸ್ಮಾರ್ಟ್‌ಫೋನ್-ಕನೆಕ್ಟಬಲ್ ಎಲ್‌ಸಿಡಿ ಇನ್‌ಸ್ಟ್ರುಮೆಂಟ್ ಕನ್ಸೋಲ್, ಎರಡು ರೈಡಿಂಗ್ ಮೋಡ್‌ಗಳು, ರಿಜೆನೆರೇಟಿವ್ ಬ್ರೇಕಿಂಗ್ ಮತ್ತು ಕೀಲೆಸ್ ಇಗ್ನಿಷನ್ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಈ ಇವಿ ಹೊಂದಿರಲಿದ್ದು, ಇದರ ಬೆಲೆ ಅತ್ಯಂತ ಕೈಗೆಟುಕುವ ರೀತಿ ಇರಲಿದ್ದು, ಸಾಮಾನ್ಯರು ಖರೀದಿಸಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications