ದೇಶದಲ್ಲಿ ಸೂಪರ್ ಟ್ರೆಂಡಿಂಗ್ನಲ್ಲಿರುವ ಬೈಕ್‌ಗಳು: ಹೀರೋದಿಂದ ಬಜಾಜ್‌ವರೆಗೆ..
ಭಾರತದ ಮಾರುಕಟ್ಟೆಯಲ್ಲಿ ಪ್ರತಿವರ್ಷ ಹಲವು ಬೈಕ್‌ಗಳು ಬಿಡುಗಡೆಯಾಗುತ್ತವೆ. ಆದರೆ, ಕೆಲವು ಮಾತ್ರ ಗ್ರಾಹಕರನ್ನು ತನ್ನತ್ತ ಸೆಳೆಯಲು ಯಶಸ್ವಿಯಾಗಿ ಉತ್ತಮವಾಗಿ ಮಾರಾಟವಾಗುತ್ತವೆ. ಇದಕ್ಕೆ ಬೆಲೆ, ವೈಶಿಷ್ಟ್ಯ ಹಾಗೂ ಕಾರ್ಯಕ್ಷಮತೆಯು ಪ್ರಮುಖ ಕಾರಣವಾಗುತ್ತದೆ. ಇಲ್ಲಿ ಟ್ರೆಂಡಿಂಗ್ನಲ್ಲಿರುವ ಟಾಪ್ 5 ಬೈಕ್‌ಗಳ ಬಗ್ಗೆ ಹೆಚ್ಚಿನ ವಿವರವನ್ನು ತಿಳಿಸಿಕೊಡಲಾಗಿದೆ.
ಬಜಾಜ್ ಪಲ್ಸರ್: ದೇಶೀಯ ಮಾರುಕಟ್ಟೆಯಲ್ಲಿ ಬಜಾಜ್ ಪಲ್ಸರ್ ಕಳೆದ ಎರಡು ದಶಕದಿಂದ ಯುವ ಜನರ ಹಾಟ್ ಫೆವರೇಟ್ ಆಗಿದೆ. ಇದರ ಕೈಗೆಟುಕುವ ಬೆಲೆ, ಕಾರ್ಯಕ್ಷಮತೆ ಹಾಗೂ ಆಕರ್ಷಕ ನೋಟವು ಹೆಚ್ಚಿನ ಖರೀದಿದಾರರನ್ನು ಸೆಳೆದಿದ್ದು, ಭಾರೀ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಕೆಲವೇ ತಿಂಗಳ ಹಿಂದೆ ಬಜಾಜ್ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಪಲ್ಸರ್ N160 ಹಾಗೂ ಪಲ್ಸರ್ P150 ಬೈಕ್‌ಗಳನ್ನು ಬಿಡುಗಡೆ ಮಾಡಿತ್ತು. ಇವುಗಳು ಗ್ರಾಹರನ್ನು ಆಕರ್ಷಿಸಿದವು ಎಂದು ಹೇಳಬಹುದು.

ಭಾರತದಲ್ಲಿ ಖರೀದಿಗೆ ಸಿಗುವ ಬಜಾಜ್ ಪಲ್ಸರ್ N160 ಸಿಂಗಲ್ ಚಾನೆಲ್ ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ವೇರಿಯಂಟ್ ರೂ.1,22,854 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದರೆ, ಡುಯೆಲ್ ಚಾನೆಲ್ ವೇರಿಯಂಟ್ ರೂ.1,29,645 ದರದಲ್ಲಿ ಖರೀದಿಗೆ ಸಿಗಲಿದೆ. ಇದು 164.8 ಸಿಸಿ, ಸಿಂಗಲ್ ಸಿಲಿಂಡರ್ ಏರ್ ಆಯಿಲ್ ಕೋಲ್ಡ್ ಎಂಜಿನ್ ಹೊಂದಿದ್ದು, 16 PS ಗರಿಷ್ಠ ಪವರ್ ಹಾಗೂ 14.65 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಬಜಾಜ್ ಪಲ್ಸರ್ P150 ರೂ.1.17 ದಿಂದ ರೂ.1.20 ಲಕ್ಷ ಆನ್-ರೋಡ್ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, ಭರಪೂರ ವೈಶಿಷ್ಟ್ಯಗಳನ್ನು ಹೊಂದಿದೆ.
ಟಿವಿಎಸ್ ಅಪಾಚೆ: ಈ ಬೈಕ್‌ಗಳು ಬಜಾಜ್ ಪಲ್ಸರ್ ಸರಣಿ ಬೈಕ್‌ಗಳಿಗೆ ಪ್ರತಿಸ್ಪರ್ದಿಯಾಗಿವೆ ಎಂದು ಹೇಳಬಹುದು. ದೇಶಾದ್ಯಂತ ಬಹುತೇಕ ಯುವಕರು ಅಪಾಚೆ ಬೈಕ್‌ಗಳನ್ನು ಇಷ್ಟಪಟ್ಟು ಖರೀದಿಸುತ್ತಾರೆ. ಅಷ್ಟರಮಟ್ಟಿಗೆ ಇವು ಭಾರೀ ಜನಪ್ರಿಯತೆಯನ್ನು ಗಳಿಸಿದೆ. ಟಿವಿಎಸ್ ಕಂಪನಿಯು ಅಪಾಚೆ ಸರಣಿಯ 5 ಬೈಕ್‌ಗಳನ್ನು ಭಾರತದಲ್ಲಿ ಮಾರಾಟ ಮಾಡುತ್ತಿದ್ದು, ಅವುಗಳು ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯವನ್ನು ಆಧರಿಸಿ, ಬೇರೆ-ಬೇರೆ ಬೆಲೆಯನ್ನು ಹೊಂದಿವೆ. ಟಿವಿಎಸ್ ಅಪಾಚೆ RTR 160 ರೂ.1,57,287, ಅಪಾಚೆ RTR 160 4V ರೂ.1,65,035 ಹಾಗೂ ಅಪಾಚೆ RTR 180 ರೂ.1,57,604 ಆನ್-ರೋಡ್ ಬೆಲೆಯನ್ನು ಪಡೆದಿದೆ.

ಟಿವಿಎಸ್ ರೈಡರ್ 125: ಈ ಬೈಕ್, ಅತ್ಯುತ್ತಮ ಇಂಧನ ದಕ್ಷತೆಯನ್ನು ಹೊಂದಿರುವುದರಿಂದ ಪ್ರತಿಯೊಬ್ಬ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಾರೆ. ಇದು ಬಹುತೇಕ ಅಪಾಚೆ ಬೈಕ್‌ಗೆ ಹೋಲಿಕೆಯಾಗುತ್ತದೆ. ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಈ ಟಿವಿಎಸ್ ರೈಡರ್ 125 ರೂ.1,15,545 ಆನ್-ರೋಡ್ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, ಟಾಪ್ ಎಂಡ್ ಮಾದರಿ ಬೆಲೆ ರೂ.1,44,300. ಇದೆ. ಮೂರು ರೂಪಾಂತರ ಹಾಗೂ ಆರು ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗಲಿದೆ.
ಈ ಬೈಕಿನ ಎಂಜಿನ್ ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯದ ಕುರಿತು ಹೇಳುವುದಾದರೆ, ಇದು 124.8 ಸಿಸಿ BS6 ಎಂಜಿನ್ ಹೊಂದಿದ್ದು, 11.2 bhp ಪವರ್ ಹಾಗೂ 11.2 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಫ್ರಂಟ್ ಡಿಸ್ಕ್, ರೇರ್ ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದ್ದು, 123 kg ತೂಕವಿರುವ ಈ ಬೈಕ್, 10 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಹೊಂದಿದೆ. TFT ಡಿಸ್ಪ್ಲೇ, ಬ್ಲೂಟೂತ್ ಕನೆಕ್ಟಿವಿಟಿ ಹಾಗೂ ವಾಯ್ಸ್ ಅಸಿಸ್ಟ್ ಸೇರಿದಂತೆ ಹತ್ತು ಹಲವು ನವೀನ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಯಮಹಾ FZ: ಅತ್ಯುತ್ತಮ ಇಂಧನ ದಕ್ಷತೆಯನ್ನು ಹೊಂದಿರುವುದರಿಂದ ಯಮಹಾ ಕಂಪನಿಯ FZ ಬೈಕ್‌ಗಳನ್ನು ಬಹುತೇಕ ಭಾರತೀಯ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಾರೆ. ಈ ಬೈಕ್, ರೂ.1,64,055 ಆನ್-ರೋಡ್ ಬೆಲೆಯಲ್ಲಿ ಖರೀದಿಗೆ ಸಿಗಲಿದ್ದು, 149 ಸಿಸಿ, ಸಿಂಗಲ್-ಸಿಲಿಂಡರ್ ಎಂಜಿನ್ ಹೊಂದಿದ್ದು, ಇದು 12.2 bhp ಪವರ್ ಹಾಗೂ 13.3 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. 5 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. 13 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಹೊಂದಿದ್ದು, 46 kmpl ಮೈಲೇಜ್ ನೀಡಲಿದೆ.
ಹೀರೋ Xtreme 160R: ಇದು ಹೀರೋ ಮೋಟೊಕಾರ್ಪ್ ನ ಅತ್ಯುನ್ನತ ಬೈಕ್ ಮಾದರಿ ಎಂದು ಕರೆಯಬಹುದು. ಇದರ ಮೈಲೇಜ್ ಹಾಗೂ ಕೈಗೆಟುಕುವ ಬೆಲೆ ಬಹುತೇಕ ಯುವ ಗ್ರಾಹಕರನ್ನು ಆಕರ್ಷಿಸಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಬೈಕ್, ರೂ.1.19 ಲಕ್ಷದಿಂದ ರೂ.1.30 ಲಕ್ಷ ಆನ್-ರೋಡ್ ಬೆಲೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಇದು 163 ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿದ್ದು, 15.2 PS ಗರಿಷ್ಠ ಪವರ್ ಹಾಗೂ 14 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 55.47 kmpl ಮೈಲೇಜ್ ನೀಡುತ್ತದೆ.


Click it and Unblock the Notifications