Bajaj Pulsar NS400: ಬಿಡುಗಡೆ ಮುನ್ನವೇ ಬಜಾಜ್ ಪಲ್ಸರ್ NS400 ಚಿತ್ರಗಳು ಸೋರಿಕೆ!
ಬಹುನಿರೀಕ್ಷಿತ ಹೊಸ ಬಜಾಜ್ ಪಲ್ಸರ್ NS400 (Bajaj Pulsar NS400) ಬೈಕ್‌ನ ಚಿತ್ರಗಳು ಬಿಡುಗಡೆಗೂ ಮುನ್ನವೇ ಸೋರಿಕೆಯಾಗಿವೆ. ಈ ಚಿತ್ರಗಳ ಪ್ರಕಾರ ಹೊಸ ಬೈಕ್ ಥೇಟ್ ಬಜಾಜ್ ಪಲ್ಸರ್ NS200 ನಂತೆಯೇ ಇರುವುದನ್ನು ಖಚಿತಪಡಿಸಿದೆ. ಮತ್ತೊಂದು ವಿಶೇಷವೆಂದರೆ ಈ ಬೈಕ್ 'ಡೋಮಿನರ್' ಎಂಜಿನ್ ಪಡೆದಿದೆ.
ಬಜಾಜ್ ಪಲ್ಸರ್ (Bajaj Pulsar) ಶ್ರೇಣಿಯು' ಕಂಪನಿಯ ಚಿನ್ನದ ಮೊಟ್ಟೆಯಾಗಿದೆ. ಅದರಲ್ಲೂ NS ಸಿರೀಸ್‌ಗೆ ಪ್ರತ್ಯೇಕ ಅಭಿಮಾನಿ ಬಳಗವಿದೆ. ಇದನ್ನು ವಿಸ್ತರಿಸಲು ಹಾಗೂ ಇತ್ತೀಚಿನ ತೀವ್ರ ಪೈಪೋಟಿಯನ್ನು ಎದುರಿಸಲು ಕಂಪನಿಯು ದೊಡ್ಡ ಸಾಮರ್ಥ್ಯದ ಪಲ್ಸರ್ NS400 ಬೈಕ್ ಅನ್ನು ತರಲು ಭಾರೀ ಪ್ರಯತ್ನಗಳನ್ನು ಮಾಡುತ್ತಿದೆ. ಮೂಲಗಳ ಪ್ರಕಾರ ಈ ಬೈಕ್ ಅನ್ನು ಮೇ 3, 2024 ರಂದು ಬಿಡುಗಡೆ ಮಾಡಲಾಗುವುದು. ಆದರೆ ಬಿಡುಗಡೆಗೂ ಮುನ್ನವೇ ಬಜಾಜ್ ಪಲ್ಸರ್ NS400 ಬೈಕ್‌ನ ಕೆಲವು ಚಿತ್ರಗಳು ಸೋರಿಕೆಯಾಗಿದ್ದು, ಈ ಬೈಕ್ ಹೇಗಿರಲಿದೆ ಎಂಬುದರ ಕುರಿತ ಆಸಕ್ತಿಕರ ಮಾಹಿತಿ ಹೊರಬಿದ್ದಿದೆ.

ಸೊರಿಕೆಯಾದ ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮುಂಬರುವ ಪಲ್ಸರ್ NS400 ಸ್ಪ್ಲಿಟ್-ಸೀಟ್ ಸೆಟಪ್, ಟೈಲ್ ವಿಭಾಗ ಮತ್ತು ಸ್ಪ್ಲಿಟ್ ಗ್ರಾಬ್ ರೈಲ್, ಫ್ಯೂಲ್ ಟ್ಯಾಂಕ್ ವಿನ್ಯಾಸವು ಬಜಾಜ್ ಪಲ್ಸರ್ NS200 ನಂತೆಯೇ ಕಾಣುತ್ತದೆ. ಉಳಿದಂತೆ ಕೆಲವನ್ನು ಮಾತ್ರ ಬಹಳ ಸೂಕ್ಷ್ಮವಾಗಿ ತಿರುಚಲಾಗಿದೆ ಎಂಬುದು ಚಿತ್ರಗಳಲ್ಲಿ ಸ್ಪಷ್ಟವಾಗಿದೆ.
ಎಂಜಿನ್ ವಿಷಯಕ್ಕೆ ಬಂದರೆ, ಡೊಮಿನಾರ್ 400ನ 373.3 ಸಿಸಿ, ಸಿಂಗಲ್ ಸಿಲಿಂಡರ್, ಲಿಕ್ವಿಡ್ - ಕೂಲ್ಡ್ ಎಂಜಿನ್ ಅನ್ನು ಅಳವಡಿಸಿರುವುದು ಈ ಚಿತ್ರಗಳಲ್ಲಿ ಸ್ಪಷ್ಟವಾಗಿದೆ. ಈ ಎಂಜಿನ್ 40 ಪಿಎಸ್ ಪವರ್ ಮತ್ತು 35 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಉಳಿದಂತೆ ಪಲ್ಸರ್ NS400 ನಲ್ಲಿ ಗೇರಿಂಗ್ ವಿಭಿನ್ನವಾಗಿರಬಹುದು ಎಂದು ನಿರೀಕ್ಷಿಸಲಾಗಿದೆ.

ಹಾಗೆಯೇ ಗೋಲ್ಡ್ ಫಿನಿಶ್ಡ್ ಇನ್ವರ್ಟೆಡ್ ಫೋರ್ಕ್ ಮತ್ತು ಗ್ಯಾಸ್ ಚಾರ್ಜ್ಡ್ ಮೊನೊಶಾಕ್ ಸಸ್ಪೆಂಷನ್ ಸೆಟಪ್, ಅಂಡರ್‌ಬೆಲ್ಲಿ ಎಕ್ಸಾಸ್ಟ್ ಅನ್ನು ಒಳಗೊಂಡಿದೆ. ಇನ್ನು ಹೊಸ ಅಪ್‌ಡೇಟ್‌ಗಳ ಭಾಗವಾಗಿ ಬಜಾಜ್ ಪಲ್ಸರ್ N 250 ಬೈಕಿನಂತೆ ಎಬಿಎಸ್ ಮೋಡ್‌ಗಳು ಮತ್ತು ಟ್ರಾಕ್ಷನ್ ಕಂಟ್ರೋಲ್ ನೀಡುವ ನಿರೀಕ್ಷೆಯಿದೆ. ಎಲ್ಲಕ್ಕಿಂತ ಮುಖ್ಯವಾಗಿ ಬಜಾಜ್ ಪಲ್ಸರ್ NS400 ಬೈಕ್, ಡೊಮಿನಾರ್ 400 ನಲ್ಲಿರುವ ಅಲ್ಯೂಮಿನಿಯಂ ಘಟಕಕ್ಕೆ ವಿರುದ್ಧವಾಗಿ ಬಾಕ್ಸ್ - ಸೆಕ್ಷನ್ ಸ್ವಿಂಗ್ ಆರ್ಮ್ ಅನ್ನು ಪಡೆದಿದೆ. ಅಂದರೆ ಬೆಲೆಯನ್ನು ನಿಯಂತ್ರಣದಲ್ಲಿಡಲು ಕೆಲ ನಿರ್ಣಾಯಕ ಅಂಶಗಳನ್ನು NS200 ನಂತೆಯೇ ಬಿಡಲಾಗಿದೆ.
ಸದ್ಯ ಬಜಾಜ್ ಡೊಮಿನಾರ್ 400 ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ. 2,30,815 ಗಳಾಗಿದೆ. ಬಜಾಜ್ ಪಲ್ಸರ್ NS400 ಬೆಲೆಯು 2 ಲಕ್ಷದೊಳಗೆ ಇರಬಹುದು ಎಂದು ನಿರೀಕ್ಷಿಸಲಾಗಿದೆ. ಇದು ಕೆಟಿಎಂ ಡ್ಯೂಕ್ 390, ಟಿವಿಎಸ್ ಅಪಾಚೆ ಆರ್ ಟಿಆರ್ 310, ಟ್ರಯಂಫ್ ಸ್ಪೀಡ್ 400 ಮತ್ತು ಹಸ್ಕ್ ವರ್ನಾ ಸ್ವಾರ್ಟ್ ಪಿಲೆನ್ 401 ಬೈಕುಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಇತ್ತೀಚೆಗೆ ಬಜಾಜ್ ಆಟೋ ಅಧ್ಯಕ್ಷ ರಾಜೀವ್ ಬಜಾಜ್ ಅವರು, 2024 ರಲ್ಲಿ ಅತಿದೊಡ್ಡ ಪಲ್ಸರ್ ಬರಲಿದೆ ಎಂದು ಬಹಿರಂಗಪಡಿಸಿದ್ದರು. ಇವರ ಈ ಘೋಷಣೆಯು 400 ಸಿಸಿ ಪಲ್ಸರ್ ಬಗ್ಗೆ ನಿರೀಕ್ಷೆಗಳನ್ನು ಹೆಚ್ಚಿಸಿವೆ. ಯಾವುದೇ ಅಧಿಕೃತ ತಾಂತ್ರಿಕ ವಿಶೇಷಣಗಳನ್ನು ಬಹಿರಂಗಪಡಿಸದಿದ್ದರೂ, ಸಾಕಷ್ಟು ಊಹಾಪೋಹಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿವೆ. ಈ ಹೊಸ ಬೈಕ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








