ಅಗ್ಗದ ಬೆಲೆಗೆ 440cc ಬೈಕ್ ಬಿಡುಗಡೆ.. ಹಾರ್ಲೆ ಡೇವಿಡ್ಸನ್ ಜೊತೆಗೂಡಿ ಹೀರೋ ಮಾವ್ರಿಕ್ 440 ನಿರ್ಮಾಣ
ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ ಅತ್ಯಂತ ಶಕ್ತಿಶಾಲಿ ಬೈಕ್ ಮಾವ್ರಿಕ್ 440 ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಕಂಪನಿಯು ಮಾವ್ರಿಕ್ ಅನ್ನು ಮೂರು ವಿಭಿನ್ನ ಮಾದರಿಗಳಲ್ಲಿ ನೀಡುತ್ತಿದ್ದು, ಎಲ್ಲದರ ಬುಕಿಂಗ್ ಸಹ ಪ್ರಾರಂಭವಾಗಿದೆ. ಈ ಹೊಸ ಬೈಕ್ ಕುರಿತ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡೋಣ.
ಹೀರೋ ಮೋಟೊಕಾರ್ಪ್ ಕಂಪನಿಯು ಮಾವ್ರಿಕ್ 440 ಬೈಕ್ ಆರಂಭಿಕ ಬೆಲೆಯನ್ನು (ಎಕ್ಸ್ ಶೋರೂಂ) ರೂ.1.99 ಲಕ್ಷಕ್ಕೆ ನಿಗದಿಪಡಿಸಿದೆ. ಬ್ರಾಂಡ್‌ನ ಹೊಸ ಮೋಟಾರ್ ಸೈಕಲ್ ಭಾರತೀಯ ದ್ವಿಚಕ್ರ ವಾಹನ ವಿಭಾಗದಲ್ಲಿ ಹೊಸ ಅಲೆ ಎಬ್ಬಿಸಲಿದೆ ಎಂದು ಕಂಪನಿ ನಂಬಿದೆ. ಏಕೆಂದರೆ ಈ ಮೋಟಾರ್ ಸೈಕಲ್ 440 ಸಿಸಿನೊಂದಿಗೆ ಕಡಿಮೆ ಬೆಲೆಯಲ್ಲಿ ಪ್ರೀಮಿಯಂ ವಿಭಾಗಕ್ಕೆ ಪ್ರವೇಶವನ್ನು ಪಡೆದಿದೆ.

ಹೊಸ ಬೈಕ್ ಅನ್ನು ಬೇಸ್, ಮಿಡ್ ಮತ್ತು ಟಾಪ್ ಎಂಬ ಮೂರು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಮೂಲ ಬೆಲೆಯು ರೂ.1.99 ಲಕ್ಷಗಳಾದರೆ, ಮಿಡ್ ಮತ್ತು ಟಾಪ್ ಎಂಡ್ ವೇರಿಯೆಂಟ್‌ಗಳ ಬೆಲೆಗಳು ಕ್ರಮವಾಗಿ ರೂ. 2.14 ಲಕ್ಷ ಮತ್ತು ರೂ. 2.24 ಲಕ್ಷಗಳಾಗಿದೆ. (ಎಲ್ಲಾ ಬೆಲೆಗಳು ಎಕ್ಸ್ ಶೋರೂಂ). ಆಸಕ್ತ ಗ್ರಾಹಕರು ಆನ್‌ಲೈನ್ ಅಥವಾ ಹತ್ತಿರದ ಹೀರೋ ಡೀಲರ್‌ಶಿಪ್‌ಗೆ ಭೇಟಿ ನೀಡಿ ಬುಕ್ ಮಾಡಬಹುದು.
ಮಾರ್ಚ್ 15ರ ಮೊದಲು ಬೈಕ್ ಬುಕ್ ಮಾಡುವ ಗ್ರಾಹಕರಿಗೆ 'ವೆಲ್ಕಮ್ ಟು ಮಾವ್ರಿಕ್ ಕ್ಲಬ್ ಆಫರ್' ಅನ್ನು ಪ್ರಾರಂಭಿಸುವುದಾಗಿ ಕಂಪನಿ ಘೋಷಿಸಿದೆ. ಇದರಡಿ 10,000 ರೂ.ಗಳ ಮೌಲ್ಯದ ಬಿಡಿಭಾಗಗಳು ಮತ್ತು ಸರಕುಗಳ (accessories and goods) ಕಸ್ಟಮೈಸ್ ಮಾಡಿದ ಮಾವ್ರಿಕ್ ಕಿಟ್ ಅನ್ನು ಪಡೆಯಬಹುದು. ಹೊಸ ಹೀರೋ ಮಾವ್ರಿಕ್ 440 ಬೈಕಿನ ವಿತರಣೆಯು 2024ರ ಏಪ್ರಿಲ್ ನಿಂದ ಪ್ರಾರಂಭವಾಗಲಿದೆ.

ಹಾರ್ಲೆ ಡೇವಿಡ್ಸನ್ ಜೊತೆಗೂಡಿ ಅಭಿವೃದ್ಧಿ: ಹೊಸ ಹೀರೋ ಮಾವ್ರಿಕ್ 440 ಬೈಕ್ ಅನ್ನು ಹಾರ್ಲೆ ಡೇವಿಡ್ಸನ್ ಜೊತೆಗೂಡಿ ಅಭಿವೃದ್ಧಿಪಡಿಸಲಾಗಿದೆ. ಹೀರೋ ಮಾವ್ರಿಕ್ 440 ಮತ್ತು ಹಾರ್ಲೆ ಡೇವಿಡ್ಸನ್ X440 ಒಂದೇ ಪ್ಲಾಟ್ ಫಾರ್ಮ್ ಅನ್ನು ಹಂಚಿಕೊಂಡಿವೆ. ಆದರೆ ಹೀರೋ ಹೆಚ್ಚಿನ ವೈಶಿಷ್ಟ್ಯಗಳು ಮತ್ತು ಆಕರ್ಷಕ ವಿನ್ಯಾಸವನ್ನು ಹೊಸ ಮೋಟಾರ್ ಸೈಕಲ್‌ಗೆ ನೀಡಿದೆ.
ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಬೈಕ್ H-ಆಕಾರದ ಡಿಆರ್‌ಎಲ್ ಗಳೊಂದಿಗೆ ರೌಂಡ್ ಎಲ್ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಅನ್ನು ಹೊಂದಿದೆ. ಮಸ್ಕುಲರ್ ಇಂಧನ ಟ್ಯಾಂಕ್ ಮತ್ತು ವಿಸ್ತೃತ ಕವರ್‌ಗಳೊಂದಿಗೆ ಬರುತ್ತದೆ. ಹಿಂಭಾಗದಲ್ಲಿ ಎಲ್ಇಡಿ ಟೈಲ್ ಲೈಟ್‌ಗಳೊಂದಿಗೆ ದಪ್ಪ ಟೈಲ್ ವಿಭಾಗವನ್ನು ಪಡೆದಿದೆ. ಸಿಂಗಲ್-ಪೀಸ್ ಸೀಟ್ ಸೆಟಪ್ ಅನ್ನು ಹೊಂದಿದೆ. ಹಾಗಾಗಿ ಹೊಸ ಹೀರೋ ಮಾವ್ರಿಕ್ ಕ್ರೂಸರ್‌ಗಿಂತ ಹೆಚ್ಚಾಗಿ ರೋಡ್‌ಸ್ಟರ್‌ನಂತೆ ಕಾಣುತ್ತದೆ.

ಹೊಸ ಹೀರೋ ಮಾವ್ರಿಕ್ 440 ಬಣ್ಣಗಳು: ಹೀರೋ ಈ ಬೈಕ್ ಅನ್ನು ಆರ್ಕ್ಟಿಕ್ ವೈಟ್, ಫಿಯರ್‌ಲೆಸ್ ರೆಡ್, ಸೆಲೆಸ್ಟಿಯಲ್ ಬ್ಲೂ, ಫ್ಯಾಂಟಮ್ ಬ್ಲ್ಯಾಕ್ ಮತ್ತು ಎನಿಗ್ಮಾ ಬ್ಲ್ಯಾಕ್ ಎಂಬ ಐದು ವಿಭಿನ್ನ ಬಣ್ಣಗಳಲ್ಲಿ ಮಾರಾಟ ಮಾಡುತ್ತಿದೆ. ಕೊನೆಯ ಎರಡು ಬಣ್ಣಗಳು ಟಾಪ್ ಎಂಡ್ ವೇರಿಯೆಂಟ್‌ಗಳಿಗಾಗಿ ಮಾತ್ರ ವಿಶೇಷವಾಗಿ ನಿಗದಿಪಡಿಸಲಾಗಿದೆ.
ಎಂಜಿನ್ ವಿಶೇಷತೆಗಳು: ಹೊಸ ಹೀರೋ ಮಾವ್ರಿಕ್ ಬೈಕ್ 440 ಸಿಸಿ ಸಿಂಗಲ್ ಸಿಲಿಂಡರ್, ಏರ್/ಆಯಿಲ್ ಕೂಲ್ಡ್ ಎಂಜಿನ್ ಹೊಂದಿದ್ದು, 27 Bhp ಪವರ್ ಮತ್ತು 36 Nm ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‌ನೊಂದಿಗೆ 6 ಸ್ಪೀಡ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದ್ದು, ಈ ಎಂಜಿನ್ ಅನ್ನು ಟ್ರೆಲ್ಲಿಸ್ ಫ್ರೇನ್‌ನಲ್ಲಿ ಅಳವಡಿಸಲಾಗಿದೆ.
ಮಾವ್ರಿಕ್ 440 ಸಸ್ಪೆಂಷನ್ ಬಗ್ಗೆ ಹೇಳುವುದಾದ್ರೆ, ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಟ್ವಿನ್ ಶಾಕ್ ಅಬ್ಸಾರ್ಬರ್ ಗಳನ್ನು ಒಳಗೊಂಡಿದೆ. ಈ ಬೈಕಿನ ಮುಂಭಾಗದಲ್ಲಿ 320 ಎಂಎಂ ಮತ್ತು ಹಿಂಭಾಗದಲ್ಲಿ 240ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಮುಂಭಾಗದಲ್ಲಿ 110/70 ಮತ್ತು ಹಿಂಭಾಗದಲ್ಲಿ 150/60 ಟೈರ್‌ಗಳಿದ್ದು, 17 ಇಂಚಿನ ವೀಲ್‌ಗಳೊಂದಿಗೆ ಬರುತ್ತದೆ. ಬೇಸ್ ವೇರಿಯೆಂಟ್ ಸ್ಪೋಕ್ ವ್ಹೀಲ್ ಹಾಗೂ ಟಾಪ್ ಟ್ರಿಮ್‌ಗಳು ಅಲಾಯ್ ವ್ಹೀಲ್‌ಗಳನ್ನು ಪಡೆದಿವೆ.


Click it and Unblock the Notifications








