ಶೀಘ್ರದಲ್ಲೆ ಎಲೆಕ್ಟ್ರಿಕ್ ಸುಜುಕಿ ಆಕ್ಸಿಸ್ ಬಿಡುಗಡೆ: ಪ್ರತಿಸ್ಪರ್ಧಿಗಳಲ್ಲಿ ಆಗಲೇ ನಡುಕ ಶುರು
ಸುಜುಕಿ ತನ್ನ ಬಹುನಿರೀಕ್ಷಿತ ಮೊದಲ ಎಲೆಕ್ಟ್ರಿಕ್ ಸ್ಕೂಟರ್ - ಇ-ಆಕ್ಸೆಸ್ ಅನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಲು ಯೋಜಿಸುತ್ತಿದೆ. ಇದು ಬೆಳೆಯುತ್ತಿರುವ ಭಾರತೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಓಲಾ, ಎಥರ್, ವಿಡಾ, ಚೇತಕ್ ಇವಿ ನಂತಹ ಪ್ರಬಲ ವಾಹನಗಳಿಗೆ ಸರಿಯಾದ ಪ್ರತಿಸ್ಪರ್ಧಿಯಾಗಿ ರೂಪುಗೊಳ್ಳುತ್ತಿದೆ. ಇದು ಇನ್ನೂ ಭಾರತದಲ್ಲಿ ಬಿಡುಗಡೆಯಾಗದಿದ್ದರೂ, ಸುಜುಕಿ ತನ್ನ ಮುಂಬರುವ ಜನಪ್ರಿಯ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಸಾಕಷ್ಟು ವಿವರಗಳನ್ನು ಬಹಿರಂಗಪಡಿಸಿದೆ. ಈ ಸ್ಕೂಟರ್ ಬಿಡುಗಡೆಗೆ ಕಾಯುತ್ತಿರುವವರಲ್ಲಿ ನೀವು ಇದ್ದರೆ, ಈ ಸಂಪೂರ್ಣ ಮಾಹಿತಿ ನಿಮಗಾಗಿ.
ಸುಜುಕಿ ಇ ಆಕ್ಸೆಸ್ ಪರೀಕ್ಷೆಗಳು ಜೋರಾಗಿ ನಡೆಯುತ್ತಿವೆ. ಎಲ್ಲವು ಅಂದುಕೊಂಡಂತೆ ನಡೆದರೆ ಭಾರತದಲ್ಲಿ ಡಿಸೆಂಬರ್ 2025 ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ರೂ. 1,00,000 ರಿಂದ ರೂ. 1,20,000 ವರೆಗಿನ ನಿರೀಕ್ಷಿತ ಬೆಲೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇ ಆಕ್ಸೆಸ್ ಅನ್ನು ಹೋಲುವ ಸುಜುಕಿ ಬರ್ಗ್‌ಮನ್ ಸ್ಟ್ರೀಟ್ ಎಲೆಕ್ಟ್ರಿಕ್, ಫೆಬ್ರವರಿ 2026 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿವೆ.

ಮೂಲಗಳ ಪ್ರಕಾರ ಇ-ಆಕ್ಸೆಸ್ 4.1 ಕಿಲೋವ್ಯಾಟ್ ಪವರ್ ಮತ್ತು 15 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಇದನ್ನು ಒಮ್ಮೆ ಚಾರ್ಜ್ ಮಾಡಿದರೆ 100 ರಿಂದ 150 ಕಿ.ಮೀ ಓಡಿಸಬಹುದು. ಮೂರು ಡ್ರೈವ್ ಮೋಡ್‌ಗಳನ್ನು ಮತ್ತು ರೀಜೆನ್ ಬ್ರೇಕಿಂಗ್ ಸಹ ಇರಲಿದೆ. ಸ್ಕೂಟರ್ ಬೆಲ್ಟ್ ಡ್ರೈವ್ ನಲ್ಲಿ ಚಲಿಸುತ್ತದೆ. ಈ ಬೆಲ್ಟ್ ಏಳು ವರ್ಷಗಳು ಅಥವಾ 70,000 ಕಿ.ಮೀ ವರೆಗೆ ಬಾಳಿಕೆ ಬರುತ್ತದೆ ಎಂದು ಸುಜುಕಿ ಹೇಳಿಕೊಂಡಿದೆ, ಇದು ಸಾಮಾನ್ಯ ಬೆಲ್ಟ್ ಗಳಿಗಿಂತ ಮೂರು ಪಟ್ಟು ಹೆಚ್ಚು ಬಾಳಿಕೆ ಬರುತ್ತದೆ.
ಮನೆಯಲ್ಲಿ ಪೋರ್ಟಬಲ್ ಚಾರ್ಜರ್ ಅನ್ನು ಬಳಸಿ, ಪೂರ್ಣ ಚಾರ್ಜ್ ಸುಮಾರು 6.5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ, ಇದು ರಾತ್ರಿಯಿಡೀ ಚಾರ್ಜಿಂಗ್‌ಗೆ ಸೂಕ್ತವಾಗಿದೆ. ಹಾಗೆಯೇ ಫಾಸ್ಟ್ ಚಾರ್ಜರ್ ಮೂಲಕ ಇ-ಆಕ್ಸೆಸ್ ಅನ್ನು ಕೇವಲ 1 ಗಂಟೆ 12 ನಿಮಿಷಗಳಲ್ಲಿ ಶೇ80 ವರೆಗೆ ಚಾರ್ಜ್ ಮಾಡಬಹುದು. ಪೂರ್ಣ ಚಾರ್ಜ್ ಮಾಡಲು 2 ಗಂಟೆಗಳಿಗಿಂತ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ವರದಿಯಾಗಿದೆ.

160 ಎಂಎಂ ಗ್ರೌಂಡ್ ಕ್ಲಿಯರೆನ್ಸ್, 765 ಎಂಎಂ ಸೀಟ್ ಎತ್ತರ ಮತ್ತು 122 ಕೆ.ಜಿ ತೂಕವನ್ನು ಹೊಂದಿರಲಿದ್ದು, ಇದು ನಗರ ಸವಾರಿ ಮತ್ತು ದೈನಂದಿನ ಪ್ರಯಾಣಕ್ಕೆ ಸೂಕ್ತವಾಗಿದೆ. ಎಲ್ಇಡಿ ಲ್ಯಾಂಪ್‌ಗಳು ಮತ್ತು ಅಲಾಯ್ ವೀಲ್‌ಗಳು ಸ್ಪೋರ್ಟಿ ಲುಕ್ ನೀಡುತ್ತವೆ. ನೀರು, ಶಾಖ ಮತ್ತು ಆಘಾತದ ವಿರುದ್ಧ ಹೆಚ್ಚುವರಿ ರಕ್ಷಣೆಗಾಗಿ ಸುಜುಕಿ ಫ್ರೇಮ್‌ನಲ್ಲಿ ಸುರಕ್ಷಿತ ಬ್ಯಾಟರಿ ಬಾಕ್ಸ್ ಅನ್ನು ನಿರ್ಮಿಸಿದೆ.
ಇ-ಆಕ್ಸೆಸ್ ಸಾಮಾನ್ಯ ಎನ್‌ಎಂಸಿ (ನಿಕ್ಕಲ್ ಮ್ಯಾಂಗನೀಸ್ ಕೋಬಾಲ್ಟ್) ಬ್ಯಾಟರಿಗಳ ಬದಲಿಗೆ ಎಲ್‌ಎಫ್‌ಪಿ (ಲಿಥಿಯಂ ಐರನ್ ಫಾಸ್ಫೇಟ್) ಬ್ಯಾಟರಿಗಳನ್ನು ಹೊಂದಿದೆ. ಎಲ್‌ಎಫ್‌ಪಿ ಬ್ಯಾಟರಿಗಳು ಸುರಕ್ಷಿತ ಹಾಗೂ ಹೆಚ್ಚು ಕಾಲ ಬಾಳಿಕೆ ಬರುತ್ತವೆ. ಒರಟು ಪರಿಸ್ಥಿತಿಗಳನ್ನು ಉತ್ತಮವಾಗಿ ನಿಭಾಯಿಸಬಲ್ಲವು. ವಾಸ್ತವವಾಗಿ, ಅವುಗಳ ಬ್ಯಾಟರಿ ಲೈಫ್ 2-3 ಪಟ್ಟು ಹೆಚ್ಚಾಗಿರುತ್ತದೆ.

ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್, ಟಿವಿಎಸ್ ಐಕ್ಯೂಬ್, ಓಲಾ ಎಲೆಕ್ಟ್ರಿಕ್ ಎಸ್1, ಎಥರ್ 450ಎಕ್ಸ್, ಬಜಾಜ್ ಚೇತಕ್ ಎಲೆಕ್ಟ್ರಿಕ್ ಮತ್ತು ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಪೈಪೋಟಿ ನೀಡಲಿದೆ. ಬೆಲೆಗೆ ಸಂಬಂಧಿಸಿದಂತೆ, ಆಕ್ಸೆಸ್ ಎಲೆಕ್ಟ್ರಿಕ್ ಬೆಲೆ 1 ಲಕ್ಷದಿಂದ 1.5 ಲಕ್ಷ ರೂ.ಗಳವರೆಗೆ (ಎಕ್ಸ್ ಶೋ ರೂಂ) ಇರಲಿದೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ತನ್ನ ಇಂಧನ ಚಾಲಿತ ಪ್ರತಿರೂಪಕ್ಕಿಂತ ಹೆಚ್ಚು ಸ್ಟೈಲಿಷ್ ಲುಕ್ ಪಡೆಯಲಿದೆ. LED ಹೆಡ್‌ಲ್ಯಾಂಪ್, ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಸಂಪರ್ಕಿತ ತಂತ್ರಜ್ಞಾನದೊಂದಿಗೆ ಬರಬಹುದು. ಜೊತೆಗೆ ಅದರ ಪ್ರತಿಸ್ಪರ್ಧಿಗಳ ನಡುವೆ ಎದ್ದು ಕಾಣುವಂತೆ ಮಾಡಲು ಕೆಲವು ರೆಟ್ರೊ ಸ್ಟೈಲಿಂಗ್ ಅಂಶಗಳನ್ನು ಪಡೆದು ಬರಲಿದೆ.


Click it and Unblock the Notifications








