Honda Activa ಇ-ಸ್ಕೂಟರ್‌ನ್ನು ಕೇಳೋರಿಲ್ಲ: QC1 ಕೊಳ್ಳಲು ಗ್ರಾಹಕರಿಗೆ ಮನಸಿಲ್ಲ, ಸದ್ದಿಲ್ಲದೇ ಉತ್ಪಾದನೆ ನಿಲ್ಲಿಸಲಾಯ್ತು!
ಹೋಂಡಾ ಸ್ಕೂಟರ್ & ಮೋಟಾರ್‌ಸೈಕಲ್ ಇಂಡಿಯಾ (Honda Scooter & Motorcycle India), ಈ ಜನವರಿಯಲ್ಲಿ ನೂತನ ಆಕ್ಟಿವಾ ಇ (Activa e) ಹಾಗೂ ಕ್ಯೂಸಿ1(QC1) ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿತ್ತು. ಇವುಗಳು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿವೆ. ಆದರೂ ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರ್ಸ್ ಪ್ರಕಾರ, ಈ ಸ್ಕೂಟರ್‌ಗಳ ಉತ್ಪಾದನೆಯನ್ನು ಆಗಸ್ಟ್‌ನಿಂದಲೇ ಸ್ಥಗಿತಗೊಳಿಸಲಾಗಿದೆ.
ಇದೇ ವರ್ಷದ ಫೆಬ್ರವರಿಯಿಂದ ಜುಲೈ ಅವಧಿಯಲ್ಲಿ ಹೋಂಡಾ ಆಕ್ಟಿವಾ ಇ ಹಾಗೂ ಕ್ಯೂಸಿ1 ಎಲೆಕ್ಟ್ರಿಕ್ ಸ್ಕೂಟರ್‌ಗಳ 11,168 ಯುನಿಟ್‌ಗಳನ್ನು ಉತ್ಪಾದಿಸಲಾಗಿದೆ. ಕೇವಲ 5,201 ಯುನಿಟ್‌ಗಳನ್ನು (46.6%) ಮಾತ್ರ ಮಾರಾಟ ಮಾಡಲಾಗಿದೆ. ಬಹುತೇಕ ಸ್ಟಾಕ್ ಕಂಪನಿಯ ಗೋಡನ್‌ನಲ್ಲಿಯೇ ಉಳಿದಿದೆ. ಒಟ್ಟಾರೆ ಮಾರಾಟದಲ್ಲಿ 4,461 ಯುನಿಟ್ 'ಕ್ಯೂಸಿ1' ಮಾಡೆಲ್ ಇದ್ದು, 740 'ಆಕ್ಟಿವಾ ಇ' ಮಾಡೆಲ್‌ಗಳಿವೆ.

'ಆಕ್ಟಿವಾ ಇ' ಸ್ವೇಪ್ಏಬಲ್ ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಬೆಂಗಳೂರು, ನವದೆಹಲಿ ಮತ್ತು ಮುಂಬೈನಲ್ಲಿ ಮಾತ್ರ ಗ್ರಾಹಕರ ಖರೀದಿಗೆ ಲಭ್ಯವಿದೆ. ಹೀಗಾಗಿ, ಮಾರಾಟ ಸಂಖ್ಯೆಯೂ ಭಾರೀ ಪ್ರಮಾಣದಲ್ಲಿ ಇಳಿಮುಖವಾಗಿದೆ. 'ಕ್ಯೂಸಿ1' ಮಾರಾಟವು ಸ್ಪರ್ಧಾತ್ಮಕವಾಗಿದ್ದರೂ, ಎದುರಾಳಿ ಕಂಪನಿಗಳ ಸ್ಕೂಟರ್‌ಗಳಂತೆ ಸಾಕಷ್ಟು ಆಕರ್ಷಕವಾಗಿಲ್ಲ. ಇದರಿಂದಾಗಿ ಕೊಂಡುಕೊಳ್ಳಲು ಗ್ರಾಹಕರು ನಿರಾಸಕ್ತಿ ತೋರಿಸುತ್ತಿದ್ದಾರೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಹೋಂಡಾ ಆಕ್ಟಿವಾ ಇ (Honda Activa e) ವಿಶೇಷತೆಗಳೇನು:
ಇದು ರೂ.1.17 ಲಕ್ಷದಿಂದ ರೂ.1.52 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಅತ್ಯುತ್ತಮವಾದ ವಿನ್ಯಾಸವನ್ನು ಒಳಗೊಂಡಿದೆ. ಪರ್ಲ್ ಸೆರೆನಿಟಿ ಬ್ಲೂ, ಪರ್ಲ್ ಮಿಸ್ಟಿ ವೈಟ್, ಪರ್ಲ್ ಶಾಲೋ ಬ್ಲೂ, ಮ್ಯಾಟ್ ಫಾಗ್ಗಿ ಸಿಲ್ವರ್ ಮೆಟಾಲಿಕ್ ಮತ್ತು ಪರ್ಲ್ ಇಗ್ನಿಯಸ್ ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.

ನೂತನ 'ಆಕ್ಟಿವಾ ಇ' 1.5 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ 2 ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಭರ್ತಿ ಚಾರ್ಜ್‌ನಲ್ಲಿ 102 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತದೆ. 80 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. 7.3 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.
ಈ ಎಲೆಕ್ಟ್ರಿಕ್ ಸ್ಕೂಟರ್ 7 ಇಂಚಿನ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ & ಹೆಚ್-ಸ್ಮಾರ್ಟ್ ಕೀ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗ (ರೇರ್) ಡುಯಲ್ ಸ್ಪ್ರಿಂಗ್ ಸಸ್ಪೆನ್ಷನ್ ಸೆಟಪ್‌ನ್ನು ಹೊಂದಿದೆ. ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ.
ಹೋಂಡಾ ಕ್ಯೂಸಿ1 (Honda QC1) ಹೇಗಿದೆ:
ಇದು ರೂ.90,000 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಸರಳವಾದ ವಿನ್ಯಾಸವನ್ನು ಹೊಂದಿದೆ. ಹೆಡ್‌ಲೈಟ್, ಲಗೇಜ್ ಹುಕ್ ಹಾಗೂ ಯುಎಸ್‌ಬಿ-ಸಿ ಚಾರ್ಜಿಂಗ್ ಪಾಯಿಂಟ್‌ನ್ನು ಹೊಂದಿದೆ. ಇಗ್ನಿಯಸ್ ಬ್ಲ್ಯಾಕ್, ಪರ್ಲ್ ಮಿಸ್ಟಿ ವೈಟ್, ಪರ್ಲ್ ಸೆರೆನಿಟಿ ಬ್ಲೂ, ಪರ್ಲ್ ಶಾಲೋ ಬ್ಲೂ ಮತ್ತು ಮ್ಯಾಟ್ ಫಾಗ್ಗಿ ಸಿಲ್ವರ್ ಮೆಟಾಲಿಕ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.
ಹೊಸ 'ಕ್ಯೂಸಿ1' ಸ್ಕೂಟರ್ 1.5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 80 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. 50 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. 9.4 ಸೆಕೆಂಡುಗಳಲ್ಲಿ 0 ರಿಂದ 40 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ.
ಈ ಎಲೆಕ್ಟ್ರಿಕ್ ಸ್ಕೂಟರ್‌ನ ಬ್ಯಾಟರಿ ಪ್ಯಾಕ್, ಶೇಕಡ 0 ರಿಂದ 80% ಚಾರ್ಜ್ ಆಗುವುದಕ್ಕೆ 4 ಗಂಟೆ 30 ನಿಮಿಷ ತೆಗೆದುಕೊಳ್ಳುತ್ತಿದೆ. ಎಲ್‌ಸಿಡಿ ಡಿಸ್‌ಪ್ಲೇ ಹಾಗೂ ಅನಲಾಗ್ ಕೀ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸವಾರರ ರಕ್ಷಣೆಗಾಗಿ ಮುಂಭಾಗ (ಫ್ರಂಟ್) ಹಾಗೂ ಹಿಂಭಾಗ (ರೇರ್) ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ.


Click it and Unblock the Notifications








