Honda Activa e: ಕಮ್ಮಿ ಬೆಲೆ.. ಆದ್ರೂ ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಗ್ರಾಹಕರು ಕೊಳ್ಳುತ್ತಿಲ್ಲ, ಕಾರಣವೇನು?
ಬಹುನಿರೀಕ್ಷಿತ ಹೋಂಡಾ ಆಕ್ಟಿವಾ (Honda Activa) ಎಲೆಕ್ಟ್ರಿಕ್ ಸ್ಕೂಟರ್‌ನ್ನು ಇದೇ ಜನವರಿಯಲ್ಲಿ ಮುಕ್ತಾಯಗೊಂಡ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿತ್ತು. ಈ ಸ್ಕೂಟರ್ ದೊಡ್ಡ ಮಟ್ಟದಲ್ಲಿ ನೀರಿಕ್ಷೆಗಳನ್ನು ಹುಟ್ಟುಹಾಕಿತ್ತು. ಸ್ಟ್ಯಾಂಡರ್ಡ್ ಹಾಗೂ ರೋಡ್‌ಸಿಂಕ್ ಎಂಬ 2 ವಿಧದಲ್ಲಿ ಮಾರಾಟಕ್ಕೂ ಬಂದಿದ್ದು, ಕ್ರಮವಾಗಿ ರೂ.1.17 ಲಕ್ಷ ಹಾಗೂ ರೂ.1.52 ಲಕ್ಷ ಎಕ್ಸ್-ಶೋರೂಂ ದರವನ್ನು ಪಡೆದುಕೊಂಡಿದೆ. ಆದರೂ ನೂತನ 'ಆಕ್ಟಿವಾ ಇ' ಮಾರಾಟ ಸಂಖ್ಯೆ ತಿಂಗಳಿನಿಂದ ತಿಂಗಳಿಗೆ ಕುಸಿತವಾಗುತ್ತಿದೆ. ಏಪ್ರಿಲ್‌ನಲ್ಲಿ 32 ಯುನಿಟ್ ಮಾರಾಟವಾಗಿದ್ದರೆ, ಮೇನಲ್ಲಿ ಶೂನ್ಯ ಸಂಖ್ಯೆಯಲ್ಲಿ ಮಾರಾಟಗೊಂಡಿದೆ ಎಂದು ವರದಿಯಾಗಿದೆ. ಈ ಅಂಕಿಅಂಶವು ತೀವ್ರ ಕಳವಳನ್ನು ಉಂಟು ಮಾಡಿದೆ. ಮಾರಾಟ ಪ್ರಮಾಣ ಇಳಿಕೆಯಾಗುತ್ತಿರುವುದಕ್ಕೆ ಒಂದಷ್ಟು ಕಾರಣಗಳನ್ನು ಪಟ್ಟಿ ಮಾಡಿದ್ದೇವೆ.
ದೇಶದ 3 ನಗರಗಳಲ್ಲಿ ಮಾತ್ರ ಹೋಂಡಾ ಆಕ್ಟಿವಾ ಇ ಮಾರಾಟ:
ಈ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಸಂಖ್ಯೆ ಕುಸಿತವಾಗಲು ಇದು ಕೂಡ ಬಹುಮುಖ್ಯ ಕಾರಣವಾಗಿದೆ. ಹೋಂಡಾ ಆಕ್ಟಿವಾ ಇ-ಸ್ಕೂಟರ್‌ನ್ನು ಬೆಂಗಳೂರು, ನವದೆಹಲಿ ಹಾಗೂ ಮುಂಬೈನಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ. ಈ ನಗರಗಳು ಬಿಟ್ಟರೆ, ಬೇರೆ ಎಲ್ಲಿಯೂ ಆಕ್ಟಿವಾ ಇ ಗ್ರಾಹಕರ ಖರೀದಿಗೆ ಲಭ್ಯವಾಗುವುದಿಲ್ಲ. ಅದರ ಹೊರತಾಗಿ ಇದರ ಪ್ರತಿಸ್ಪರ್ಧಿ ಎಲೆಕ್ಟ್ರಿಕ್ ಸ್ಕೂಟರ್‌ಗಳಾದ ಎಥರ್ ರಿಜ್ಟಾ, ಓಲಾ ಎಸ್1 ಪ್ರೊ, ಟಿವಿಎಸ್ ಐಕ್ಯೂಬ್, ಬಜಾಜ್ ಚೇತಕ್ ಹಾಗೂ ಹೀರೋ ವಿಡಾ ವಿ2ಗಳು ದೇಶದ ಬಹುತೇಕ ಎಲ್ಲ ನಗರಗಳಲ್ಲಿಯೂ ಸಿಗುತ್ತವೆ.

ಬಾಸ್ ಪ್ಲ್ಯಾನ್‌ನಡಿ ಹೋಂಡಾ ಆಕ್ಟಿವಾ ಇ ಖರೀದಿ ಲಭ್ಯ, ಹೋಮ್ ಚಾರ್ಜರ್ ಇಲ್ಲ:
ನೂತನ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ-ಆಸ್-ಎ-ಸರ್ವಿಸ್ (ಬಾಸ್ - BaaS) ಪ್ಲ್ಯಾನ್‌ನಡಿ ಗ್ರಾಹಕರ ಖರೀದಿಗೆ ದೊರೆಯುತ್ತದೆ. ಸವಾರರು ಈ ಸ್ಕೂಟರ್‌ನಲ್ಲಿರುವ ಬ್ಯಾಟರಿ ಪ್ಯಾಕ್‌ನಲ್ಲಿ ಚಾರ್ಜ್ ಖಾಲಿಯಾದಾಗ, ಅದನ್ನು ಕಂಪನಿಯ ಇ:ಸ್ವಾಪ್ ಚಾರ್ಜಿಂಗ್ ಸ್ಟೇಷನ್‌ನಲ್ಲಿ ನಿಗದಿಪಡಿಸಿರುವ ಜಾಗದಲ್ಲಿಡಬೇಕು. ಆ ಬಳಿಕ ಮೊದಲೇ ಭರ್ತಿಯಾದ ಬ್ಯಾಟರಿ ಪ್ಯಾಕ್‌ನ್ನು ತೆಗೆದುಕೊಳ್ಳುವುದಾಗಿದೆ. ಅದಕ್ಕಾಗಿ ಇಂತಿಷ್ಟು ಶುಲ್ಕವನ್ನು ಪಾವತಿಸಬೇಕು.
ಇದರಿಂದಾಗಿ ಈ ಸ್ಕೂಟರ್‌ನ್ನು ಮನೆಯಲ್ಲಿ ಸುಲಭವಾಗಿ ಚಾರ್ಜ್ ಮಾಡಲು ಸಾಧ್ಯವಾಗುವಂತೆ ಯಾವುದೇ ಹೋಮ್ ಚಾರ್ಜರ್ನ್ನು ನೀಡಲಾಗುವುದಿಲ್ಲ. ಈ ಕಾರಣದಿಂದಾಗಿ ಸಹ ಹೋಂಡಾ ಆಕ್ಟಿವಾ ಮಾರಾಟ ಸಂಖ್ಯೆ ಇಳಿಮುಖವಾಗುತ್ತಿದೆ ಎನ್ನಲಾಗಿದೆ. ಬಹುತೇಕ ಎಲ್ಲ ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಕಂಪನಿಗಳು ಹೋಮ್ ಚಾರ್ಜರ್ನ್ನು ಒದಗಿಸುತ್ತಿವೆ.

ಕಾರ್ಯಕ್ಷಮತೆಯ ಕೊರತೆ:
ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್‌ಗೆ ಸ್ಪರ್ಧೆಯೊಡ್ಡುವ ಇತರೆ ಕಂಪನಿಗಳ ಇ-ಸ್ಕೂಟರ್‌ಗಳು ಸಂಪೂರ್ಣ ಚಾರ್ಜ್‌ನಲ್ಲಿ 150 ಕಿಲೋಮೀಟರ್‌ವರೆಗೂ ರೇಂಜ್ (ಮೈಲೇಜ್) ನೀಡುತ್ತವೆ. ಆದರೆ, ಆಕ್ಟಿವಾ ಇ ಪೂರ್ತಿ ಚಾರ್ಜ್‌ನಲ್ಲಿ 102 ಕಿಲೋಮೀಟರ್ ಓಡುತ್ತದೆ. ಹೀಗಾಗಿ ಆಕ್ಟಿವಾ ಇ-ಸ್ಕೂಟರ್‌ನ್ನು ಖರೀದಿ ಮಾಡಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗಿದೆ.
ಪ್ರಚಾರದ ಕೊರತೆ:
ಹೋಂಡಾ ಆಕ್ಟಿವಾ ಇ-ಸ್ಕೂಟರ್ ಬಗ್ಗೆ ಬೆಂಗಳೂರಿನಂತಹ ಬೃಹತ್ ಮಹಾನಗರದಲ್ಲಿ ಹಲವು ಗ್ರಾಹಕರಿಗೆ ತಿಳಿದಿಲ್ಲ. ಅದೇ ಚೇತಕ್, ರಿಜ್ಟಾ, ಎಸ್1 ಪ್ರೊ ಹಾಗೂ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಹೆಚ್ಚು ಜನಪ್ರಿಯವಾಗಿದ್ದು, ಅವುಗಳ ಕುರಿತಾಗಿ ಖರೀದಿದಾರರು ಕೂಡ ಮಾತನಾಡಿಕೊಳುತ್ತಿದ್ದಾರೆ. ಇಲ್ಲಿ ಪ್ರಚಾರದ ಕೊರತೆಯೂ ಎದ್ದು ಕಾಯುತ್ತಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.

ಹೋಂಡಾ ಆಕ್ಟಿವಾ ಇ ವಿಶೇಷತೆಗಳೇನು:
ಈ ಎಲೆಕ್ಟ್ರಿಕ್ ಸ್ಕೂಟರ್, 1.5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ 2 ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. 80 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಪರ್ಲ್ ಶಾಲೋ ಬ್ಲೂ, ಪರ್ಲ್ ಮಿಸ್ಟಿ ವೈಟ್, ಪರ್ಲ್ ಸೆರಿನಿಟಿ ಬ್ಲೂ & ಮ್ಯಾಟ್ ಫಾಗಿ ಸಿಲ್ವರ್ ಮೆಟಾಲಿಕ್ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ. 7.0-ಇಂಚಿರುವ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ.
ಒಟ್ಟಾರೆಯಾಗಿ, ಹೋಂಡಾ ಆಕ್ಟಿವಾ ಇ-ಸ್ಕೂಟರ್‌ನ್ನು ಬೇರೆ ಕಂಪನಿ ಎಲೆಕ್ಟ್ರಿಕ್ ಸ್ಕೂಟರ್‌ಗಳಂತೆ ಇತರೆ ನಗರಗಳಲ್ಲೂ ಮಾರಾಟ ಮಾಡಬೇಕು. ಕಾರ್ಯಕ್ಷಮತೆಯನ್ನು ಸುಧಾರಿಸಬೇಕು. ಜೊತೆಗೆ ಈ ಸ್ಕೂಟರ್ ಕುರಿತಂತೆ ಸಾಮಾಜಿಕ ಜಾಲತಾಣದಲ್ಲೂ ಹೆಚ್ಚಿನ ಪ್ರಚಾರ ಮಾಡುವುದರೊಂದಿಗೆ ಮಾರಾಟ ಪ್ರಮಾಣವನ್ನು ಅಧಿಕಗೊಳಿಸಲು ಸಾಧ್ಯವಾಗಲಿದೆ.


Click it and Unblock the Notifications