Suzuki: ದಸರಾದಿಂದ ಶುಕ್ರದೆಸೆ.. ಸುಜುಕಿ ಟೂ-ವೀಲರ್‌ಗಳಿಗೆ ಫುಲ್ ಡಿಮ್ಯಾಂಡ್, ಜನ ಮುಗಿಬಿದ್ದು ಖರೀದಿ!
ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ (Suzuki Motorcycle India), ವಿಶ್ವಾಸಾರ್ಹ ದ್ವಿಚಕ್ರ ವಾಹನ (Two Wheeler) ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ದೇಶೀಯವಾಗಿ ವಿವಿಧ ಸ್ಕೂಟರ್ ಹಾಗೂ ಬೈಕ್‌ಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಈ ಸೆಪ್ಟೆಂಬರ್ ತಿಂಗಳಲ್ಲೂ ಕಂಪನಿಯ ದ್ವಿಚಕ್ರ ವಾಹನಗಳು ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿವೆ. ಬರೋಬ್ಬರಿ 1,23,550 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 99,185 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 25% ಪ್ರಗತಿಯಾಗಿದೆ.
ಸೆಪ್ಟೆಂಬರ್‌ನ ಒಟ್ಟು ಮಾರಾಟದಲ್ಲಿ ದೇಶೀಯವಾಗಿ 1,05,886 ಯುನಿಟ್ ಹಾಗೂ ವಿದೇಶಕ್ಕೆ 17,664 ಯುನಿಟ್‌ಗಳನ್ನು ರಫ್ತು ಮಾಡಲಾಗಿದೆ. ಸುಜುಕಿ ಕಂಪನಿಯು ಈ ಮಟ್ಟದಲ್ಲಿ ಬೆಳವಣಿಗೆ ಸಾಧಿಸಲು 'ಆಕ್ಸೆಸ್ 125' ಸ್ಕೂಟರ್ ಪ್ರಮುಖವಾದ ಕಾರಣವಾಗಿದೆ. ಇದರೊಂದಿಗೆ ಅವೆನಿಸ್, ಬರ್ಗ್‌ಮನ್ ಸ್ಟ್ರೀಟ್, ಬರ್ಗ್‌ಮನ್ ಸ್ಟ್ರೀಟ್ ಇಎಕ್ಸ್, ಜಿಕ್ಸರ್, ಜಿಕ್ಸರ್ 250, ಜಿಕ್ಸರ್ ಎಸ್‌ಎಫ್ 250 ಮತ್ತು ವಿ-ಸ್ಟ್ರೋಮ್ ಎಸ್‌ಎಕ್ಸ್ ದ್ವಿಚಕ್ರ ವಾಹನಗಳು ಸಹ ಉತ್ತಮವಾಗಿಯೇ ಮಾರಾಟಗೊಂಡಿವೆ.

ಈ ಕುರಿತಂತೆ 'ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ'ದ ಸೇಲ್ಸ್ & ಮಾರ್ಕೆಟಿಂಗ್ ವಿಭಾಗದ ಹಿರಿಯ ಅಧಿಕಾರಿ ದೀಪಕ್ ಮುಟ್ರೇಜಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. 'ಸೆಪ್ಟೆಂಬರ್ ತಿಂಗಳು ಹಬ್ಬಗಳಿಂದಾಗಿ ಕಂಪನಿಯ ದ್ವಿಚಕ್ರ ವಾಹನಗಳಿಗೆ ಉತ್ತಮವಾದ ಬೇಡಿಕೆ ಸೃಷ್ಟಿಯಾಗಿದೆ. ಇದರೊಂದಿಗೆ ಜಿಎಸ್‌ಟಿ ಪರಿಷ್ಕರಣೆಯೂ ಖರೀದಿದಾರರ ಕೊಳ್ಳುವ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿತು' ಎಂದು ಹೇಳಿದ್ದಾರೆ.
ಗ್ರಾಹಕರ ಆಲ್ ಟೈಮ್ ಫೇವರಿಟ್ ಸುಜುಕಿ ಆಕ್ಸೆಸ್ 125 (Suzuki Access 125) ಸ್ಕೂಟರ್:
ಇದು ಅತಿ ಕಡಿಮೆ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುತ್ತದೆ. ಕನಿಷ್ಠ ರೂ.80,572 ಹಾಗೂ ಗರಿಷ್ಠ ರೂ. 97,166 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಸ್ಟ್ಯಾಂಡರ್ಡ್ ಎಡಿಷನ್ ಡ್ರಮ್ ಬ್ರೇಕ್, ಸ್ಪೆಷನ್ ಎಡಿಷನ್ ಡಿಸ್ಕ್ ಬ್ರೇಕ್, ರೈಡ್ ಕನೆಕ್ಟ್ ಎಡಿಷನ್ ಡಿಸ್ಕ್ ಬ್ರೇಕ್ ಮತ್ತು ರೈಡ್ ಕನೆಕ್ಟ್ ಟಿಎಫ್‌ಟಿ ಎಡಿಷನ್ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ.
ಈ ಸ್ಕೂಟರ್ ತುಂಬಾ ಚೆನ್ನಾಗಿರುವ ಸರಳವಾದ ವಿನ್ಯಾಸವನ್ನು ಪಡೆದಿದೆ. ಹೆಚ್ಚು ಅತ್ಯಾಧುನಿಕವಾದ ಎಲ್ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್‌ಗಳು & ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಹೊಂದಿದೆ. ಮೆಟಾಲಿಕ್ ಮ್ಯಾಟ್ ಬ್ಲ್ಯಾಕ್, ಪರ್ಲ್ ಗ್ರೇಸ್ ವೈಟ್ ಹಾಗೂ ಪರ್ಲ್ ಶೈನಿ ಬೀಜ್ ಒಳಗೊಂಡಂತೆ ಹಲವು ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 160 ಎಂಎಂ ಗ್ರೌಂಡ್ ಕ್ಲಿಯರೆನ್ ಮತ್ತು 1,260 ಎಂಎಂ ವೀಲ್‌ಬೇಸ್‌ನ್ನು ತನ್ನದಾಗಿಸಿಕೊಂಡಿದೆ.

ನೂತನ ಸುಜುಕಿ ಆಕ್ಸೆಸ್ ಸ್ಕೂಟರ್ 124 ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 47 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 90 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. 4.2 ಇಂಚಿನ ಟಿಎಫ್‌ಟಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಸವಾರರ ರಕ್ಷಣೆಗಾಗಿ ಡಿಸ್ಕ್/ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ.
ಸುಜುಕಿ ಅವೆನಿಸ್ (Suzuki Avenis) ಕೂಡ ಖರೀದಿಗೆ ಲಭ್ಯ:
ಇದು ರೂ.83,793 ರಿಂದ ರೂ.86,177 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 124.3 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 55 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. 90 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಫುಲ್ ಡಿಜಿಟಲ್ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.
ಅತಿ ಶೀಘ್ರದಲ್ಲಿ ಸುಜುಕಿ ಇ ಆಕ್ಸೆಸ್ (Suzuki e Access) ಬಿಡುಗಡೆ:
ಈ ಎಲೆಕ್ಟ್ರಿಕ್ ಸ್ಕೂಟರ್ ರೂ.1.10 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಪಡೆದುಕೊಂಡಿರುವ ಎಲ್ಲ ಸಾಧ್ಯತೆಗಳಿದೆ. 3.07 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಸಂಪೂರ್ಣ ಚಾರ್ಜ್‌ನಲ್ಲಿ 95 ಕಿಲೋಮೀಟರ್ ರೇಂಜ್ (ಮೈಲೇಜ್) ಕೊಡುತ್ತದೆ. 4.2 ಇಂಚಿನ ಟಿಎಫ್‌ಟಿ ಡಿಸ್‌ಪ್ಲೇ, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಹಾಗೂ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.


Click it and Unblock the Notifications








