ಜಿಎಸ್‌ಟಿ ಪರಿಷ್ಕರಣೆ: Suzuki ಗುಡ್‌ನ್ಯೂಸ್.. Access ಸೇರಿ ವಿವಿಧ ಟೂ-ವೀಲರ್‌ಗಳ ಬೆಲೆ ರೂ.18,000 ವರೆಗೆ ಇಳಿಕೆ!
ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ (Suzuki Motorcycle India), ತನ್ನ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಕೇಂದ್ರ ಸರ್ಕಾರ ದ್ವಿಚಕ್ರ ವಾಹನಗಳ (ಸ್ಕೂಟರ್ & ಬೈಕ್‌ಗಳು) ಖರೀದಿ ಮೇಲಿನ 'ಜಿಎಸ್‌ಟಿ' ಪರಿಷ್ಕರಣೆ ಮಾಡಿದೆ. ಅದರ ಸಂಪೂರ್ಣ ಲಾಭ ಗ್ರಾಹಕರಿಗೆ ವರ್ಗಾಯಿಸಲು ಕಂಪನಿಯು ತೀರ್ಮಾನ ಮಾಡಿದೆ. ಇದರಿಂದ ನಗರ ಹಾಗೂ ಗ್ರಾಮೀಣ ಪ್ರದೇಶದ ಖರೀದಿದಾರರಿಗೆ ದೊಡ್ಡ ಮಟ್ಟದಲ್ಲಿ ಅನುಕೂಲವಾಗಲಿದೆ.
ನೂತನ ತೆರಿಗೆ ದರಗಳು ಸೆ.22 ರಿಂದ ಜಾರಿಗೆ ಬರಲಿದೆ. 'ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ'ದ ಎಲ್ಲ ದ್ವಿಚಕ್ರ ವಾಹನಗಳಿಗೆ ಜಿಎಸ್‌ಟಿ ಕಡಿತದ ಪ್ರಯೋಜನಗಳು ಲಭ್ಯವಾಗಲಿದೆ. ವಿಶೇಷವಾಗಿ ಆಕ್ಸೆಸ್, ಅವೆನಿಸ್, ಬರ್ಗ್‌ಮನ್ ಸ್ಟ್ರೀಟ್, ಬರ್ಗ್‌ಮನ್ ಸ್ಟ್ರೀಟ್ ಇಎಕ್ಸ್, ಜಿಕ್ಸರ್, ಜಿಕ್ಸರ್ ಎಸ್‌ಎಫ್, ಜಿಕ್ಸರ್ 250, ಜಿಕ್ಸರ್ ಎಸ್‌ಎಫ್ 25 ಹಾಗೂ ವಿ-ಸ್ಟ್ರೋಮ್ ಎಸ್‌ಎಕ್ಸ್ ಮಾಡೆಲ್‌ಗಳ ಬೆಲೆಯೂ ರೂ.18,024 ವರೆಗೆ ಇಳಿಕೆಯಾಗಿದೆ.

ಸುಜುಕಿ ಸ್ಕೂಟರ್‌ಗಳ ಹೊಸ ಎಕ್ಸ್-ಶೋರೂಂ ದರವೆಷ್ಟು?
ಆಕ್ಸೆಸ್ - ರೂ.93,877 (ರೂ.8,523 ಇಳಿಕೆ)
ಅವೆನಿಸ್ - ರೂ.86,177 (ರೂ.7,823 ಕಡಿಮೆ)
ಬರ್ಗ್‌ಮನ್ ಸ್ಟ್ರೀಟ್ - ರೂ.92,227 (ರೂ.8,373 ಇಳಿಕೆ)
ಬರ್ಗ್‌ಮನ್ ಸ್ಟ್ರೀಟ್ ಇಎಕ್ಸ್ - ರೂ.1,07,902 (ರೂ.9,798 ಕಡಿಮೆ)
ಸುಜುಕಿ ಬೈಕ್‌ಗಳ ನೂತನ ಎಕ್ಸ್-ಶೋರೂಂ ಬೆಲೆಯೆಷ್ಟು?
ಜಿಕ್ಸರ್ - ರೂ.1,26,881 (ರೂ.11,520 ಇಳಿಕೆ)
ಜಿಕ್ಸರ್ ಎಸ್‌ಎಫ್ - ರೂ.1,35,590 (ರೂ.12,311 ಕಡಿಮೆ)
ಜಿಕ್ಸರ್ 250 - ರೂ.1,81,976 (ರೂ.16,525 ಇಳಿಕೆ)
ಜಿಕ್ಸರ್ ಎಸ್‌ಎಫ್ 250 - ರೂ.1,98,476 (ರೂ.18,024 ಕಡಿಮೆ)
ವಿ-ಸ್ಟ್ರೋಮ್ ಎಸ್‌ಎಕ್ಸ್ - ರೂ.1,98,018 (ರೂ.17,982 ಇಳಿಕೆ)

ಜಿಎಸ್‌ಟಿ ಪರಿಷ್ಕರಣೆ ಏನು, ಎತ್ತ:
ಕೇಂದ್ರ ಸರ್ಕಾರವು 350 ಸಿಸಿ ವರೆಗಿನ ಎಂಜಿನ್ ಹೊಂದಿರುವ ಸಾಮಾನ್ಯ ದ್ವಿಚಕ್ರ ವಾಹನಗಳ (ಸ್ಕೂಟರ್ & ಬೈಕ್‌ಗಳು) ಖರೀದಿ ಮೇಲೆ ಜಿಎಸ್‌ಟಿ ಪ್ರಮಾಣವನ್ನು ಶೇಕಡ 28% ರಿಂದ 18%ಗೆ ಇಳಿಸಿದೆ. ಹೀಗಾಗಿ, ಬೆಲೆಯೂ ಕಡಿಮೆಯಾಗಿದೆ. ಆದರೆ, 350 ಸಿಸಿಗಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯವಿರುವ ಐಷಾರಾಮಿ ದ್ವಿಚಕ್ರ ವಾಹನಗಳ ಮೇಲೆ 'ಜಿಎಸ್‌ಟಿ'ಯನ್ನು ಶೇಕಡ 40%ಗೆ ಹೆಚ್ಚಿಸಲಾಗಿದೆ. ಈವರೆಗೆ ಶೇಕಡ 28% ಜಿಎಸ್‌ಟಿ ಹಾಗೂ 3% ಸೆಸ್ ಸೇರಿದಂತೆ ಒಟ್ಟಾರೆ ಶೇಕಡ 31% ತೆರಿಗೆ ಇತ್ತು.
ಸುಜುಕಿ ಇಂಡಿಯಾದ ಮಾರಾಟ ಅಂಕಿಅಂಶವು ಹೇಗಿದೆ:
ಕಳೆದ ತಿಂಗಳು (ಆಗಸ್ಟ್ - 2025) 'ಸುಜುಕಿ' ಕಂಪನಿಯ ದ್ವಿಚಕ್ರ ವಾಹನಗಳು ಉತ್ತಮ ಸಂಖ್ಯೆಯಲ್ಲಿ ಮಾರಾಟಗೊಂಡಿವೆ. ಒಟ್ಟು 1,13,936 ಯುನಿಟ್‌ಗಳನ್ನು ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 1,04,800 ಯುನಿಟ್‌ಗಳನ್ನು ಮಾರಲಾಗಿತ್ತು. ಅಂಕಿಸಂಖ್ಯೆಯನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 9% ಬೆಳವಣಿಯಾಗಿದೆ.
ಸುಜುಕಿ ಇ ಆಕ್ಸೆಸ್ (Suzuki e Access) ಕೂಡ ಮಾರಾಟಕ್ಕೆ ಬರಲಿದೆ:
ಈ ಎಲೆಕ್ಟ್ರಿಕ್ ಸ್ಕೂಟರ್ ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ರೂ.1.10 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿರುವ ನಿರೀಕ್ಷೆಯಿದೆ. ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಮೆಟಾಲಿಕ್ ಮ್ಯಾಟ್ ಬೋರ್ಡೆಕ್ಸ್ ರೆಡ್, ಪರ್ಲ್ ಗ್ರೇಸ್ ವೈಟ್, ಮೆಟಾಲಿಕ್ ಮ್ಯಾಟ್ ಫೈಬ್ರಾಯಿನ್ ಗ್ರೇ, ಪರ್ಲ್ ಜೇಡ್ ಗ್ರೀನ್ ಮತ್ತು ಮೆಟಾಲಿಕ್ ಮ್ಯಾಟ್ ಫೈಬ್ರಾಯಿನ್ ಗ್ರೇ ಎಂಬ ಬಣ್ಣಗಳ ಆಯ್ಕೆಯನ್ನು ಹೊಂದಿದೆ.
ಇದು 3.07 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 95 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. 71 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. 4.2 ಇಂಚಿನ ಟಿಎಫ್‌ಟಿ ಡಿಸ್‌ಪ್ಲೇ, ಸುಜುಕಿ ರೈಡ್ ಕನೆಕ್ಟ್ ಅಪ್ಲಿಕೇಶನ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಮತ್ತು ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ . ಡಿಸ್ಕ್ ಬ್ರೇಕ್‌ಗಳನ್ನು ತನ್ನದಾಗಿಸಿಕೊಂಡಿದೆ.


Click it and Unblock the Notifications








