Bajaj: ಇತ್ತೀಚೆಗೆ ಬಿಡುಗಡೆಯಾಗಿರುವ ಬಜಾಜ್ ಪಲ್ಸರ್ 150 ವಿಶೇಷತೆಗಳು
ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಬಜಾಜ್ (Bajaj), ಇತ್ತೀಚೆಗೆ ತನ್ನ ಪಲ್ಸರ್ 150 ಅನ್ನು ಹೊಸ ನವೀಕರಣಗಳೊಂದಿಗೆ ಬಿಡುಗಡೆ ಮಾಡಿದೆ. ನವೀಕರಿಸಿದ ಹೊಸ ಪಲ್ಸರ್ 150 ಶ್ರೇಣಿಯನ್ನು ರೂ. 1,08,772 ರಿಂದ ಪ್ರಾರಂಭವಾಗುವ ಎಕ್ಸ್-ಶೋರೂಂ ಬೆಲೆಯಲ್ಲಿ ನೀಡಲಾಗುತ್ತಿದೆ. ಹೊಸ ಎಲ್‌ಇಡಿ ಲೈಟ್ ಸೆಟಪ್, ಆಕರ್ಷಕ ಫೀಚರ್ ಅಪ್‌ಡೇಟ್ ಸೇರಿದಂತೆ ಕೆಲವೊಂದು ಸಣ್ಣ ಬದಲಾವಣೆಗಳನ್ನು ಮಾಡಿದೆ. ಏನೆಲ್ಲಾ ವಿಶೇಷತೆಗಳನ್ನು ಪಡೆದಿದೆ ಎಂಬುದರ ಬಗ್ಗೆ ವಿವರವಾಗಿ ನೋಡೋಣ.
ಈ ಬೈಕ್ ತನ್ನ ಎದುರಾಳಿಗಳಿಗಿಂತ ತುಸು ಹಿಂದುಳಿದಿದೆ ಎಂಬ ಕಾರಣಕ್ಕೆ ಈ ಬಾರಿ ರಗಡ್ ಗ್ರಾಫಿಕ್ ಲುಕ್‌ನೊಂದಿಗೆ ಪರಿಚಯಿಸಲಾಗಿದೆ. ಹೊಸ ಬಜಾಜ್ ಪಲ್ಸರ್ 150 ಮೋಟಾರ್‌ಸೈಕಲ್ ಹೊಸ ಗ್ರಾಫಿಕ್ಸ್ ಒಳಗೊಂಡಿದೆ. ಸ್ಪಾರ್ಕ್ಲಿ ಬ್ಲ್ಯಾಕ್ ರೆಡ್, ಸ್ಪಾರ್ಕ್ಲಿ ಬ್ಲ್ಯಾಕ್ ಬ್ಲೂ ಹಾಗೂ ಸ್ಪಾರ್ಕ್ಲಿ ಬ್ಲ್ಯಾಕ್ ಸಿಲ್ವರ್ ಎಂಬ 3 ಅತ್ಯುತ್ತಮವಾದ ಬಣ್ಣಗಳೊಂದಿಗೂ ಸಿಗುತ್ತದೆ.

17-ಇಂಚಿನ ಅಲಾಯ್ ವೀಲ್‌ಗಳು ಮತ್ತು ಟ್ಯೂಬ್‌ಲೆಸ್ ಟೈರ್‌ಗಳನ್ನು ಪಡೆದಿದೆ. ಆಕರ್ಷಕ ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಟರ್ನ್ ಇಂಡಿಕೇಟರ್‌ಗಳು ಹಾಗೂ ಎಲ್‌ಇಡಿ ಟೈಲ್ ಲ್ಯಾಂಪ್‌ನ್ನು ಹೊಂದಿದೆ. ಇಷ್ಟೆಲ್ಲಾ ಮಾಡಿದ ಮೇಲೆ ಬೆಲೆ ಕೂಡ ತುಸು ಬದಲಾಗಿದ್ದು, ಬೈಕ್ ಈಗ ಆಕರ್ಷಕ ಬೆಲೆಯಲ್ಲಿ ಹಲವು ನವೀಕರಣಗಳೊಂದಿಗೆ ಖರೀದಿಗೆ ಲಭ್ಯವಿದೆ.
ದೈನಂದಿನ ಸವಾರರಿಗೆ ಖರೀದಿಸಬಹುದಾದ ಪರ್ಫಾಮೆನ್ಸ್ ಬೈಕ್ ಆಗಿರುವ ಪಲ್ಸರ್, ಗ್ರಾಹಕರಿಗೆ ಅದೇ ಭರವಸೆಯನ್ನು ಮುಂದುವರೆಸಿದೆ. ಎಲ್ಲಾ ವೇರಿಯೆಂಟ್‌ಗಳ ಬೆಲೆ ವಿಷಯಕ್ಕೆ ಬಂದರೆ ಪಲ್ಸರ್ 150 SD ಬೆಲೆ ರೂ.1,08,772, ಪಲ್ಸರ್ 150 SD UG ಬೆಲೆ ರೂ.1,11,669 ಮತ್ತು ಪಲ್ಸರ್ 150 TD UG ಬೆಲೆ ರೂ.1,15,481 ಇದೆ.

ಆಕ್ರಮಣಕಾರಿ ವಿನ್ಯಾಸ ಮತ್ತು ತೀಕ್ಷ್ಣವಾದ ಡೈನಾಮಿಕ್ಸ್‌ನೊಂದಿಗೆ ನೇಕೆಡ್ ಸ್ಪೋರ್ಟಿ ಲುಕ್ ಯುವ ಸವಾರರನ್ನು ಸೆಳೆಯುವಂತೆ ಮಾಡಲಾಗಿದೆ. ಹೊಸ ಎಲ್‌ಇಡಿ ಹೆಡ್‌ಲ್ಯಾಂಪ್ ಮತ್ತು ಎಲ್‌ಇಡಿ ಬ್ಲಿಂಕರ್‌ಗಳ ಜೊತೆಗೆ ಪಲ್ಸರ್ 150 ಅನ್ನು ಭಾರತೀಯ ರಸ್ತೆಗಳಲ್ಲಿ ಶಾಶ್ವತ ಐಕಾನ್ ಆಗಿ ಮಾಡಲು ಈ ಡಿಸೈನ್ ತರಲಾಗಿದೆ ಎಂದು ಬಜಾಜ್ ಹೇಳಿಕೊಂಡಿದೆ.
ಪಲ್ಸರ್ 150 ಗೆ ಇತ್ತೀಚಿನ ನವೀಕರಣವು ಸವಾರರು ನಂಬುವ ಕ್ಲಾಸಿಕ್ ರೂಪವನ್ನು ಸಂರಕ್ಷಿಸುವ ಪರಂಪರೆಯನ್ನು ಮುಂದಕ್ಕೆ ಸಾಗಿಸುತ್ತದೆ. ಈಗ ಪಲ್ಸರ್ 150 ಬೈಕ್‌ಗೆ ಅದರ ಕ್ಲಾಸಿಕ್ ಮಸ್ಕುಲರ್ ಲುಕ್ ಉಳಿಸಿಕೊಂಡು ಹೊಸ ಬಣ್ಣ ಆಯ್ಕೆಗಳು ಮತ್ತು ರಿಫ್ರೆಶ್ಡ್ ಗ್ರಾಫಿಕ್ಸ್‌ನೊಂದಿಗೆ ರೂಪವನ್ನು ಬದಲಾಯಿಸದೆ ಸಮಕಾಲೀನ ಆಕರ್ಷಣೆಯನ್ನು ಸೇರಿಸಲಾಗಿದೆ. ಇಂದಿನ ಸವಾರಿ ಅಗತ್ಯಗಳನ್ನು ಪೂರೈಸಲು ಆಧುನಿಕ ಎಲ್‌ಇಡಿ ಲೈಟ್ ಸೆಟಪ್ ನೀಡಿ ಹೊಸ ಪೀಳಿಗೆಯ ಆದ್ಯತೆಗಳನ್ನು ಪೂರೈಸಲಾಗಿದೆ.

ಬದಲಾವಣೆಗಳಿಗೆ ಕಾರಣ: ಪ್ರಮುಖ ಅಪ್‌ಡೇಟ್‌ಗಳಿಲ್ಲದೆ ಆಧುನೀಕರಿಸುವ ಮೂಲಕ ಅದರ ಮಸ್ಕುಲರ್ ಲುಕ್ ಜೊತೆಗೆ ಹೊಸ ನವೀಕರಣಗಳನ್ನು ಪರಿಚಯಿಸಲಾಗಿದೆ. ಇದರ ಬದಲು ಡಿಸೈನ್ ಪೂರ್ಣ ಬದಲಿಸಬಹಿದಿತ್ತಾದರೂ, ಕಂಪನಿ ತಪ್ಪು ಕೆಲಸಕ್ಕೆ ಮುಂದಾಗಲಿಲ್ಲ. ಏಕೆಂದರೆ ಈ ಹಿಂದೆಯೂ ಬಜಾಜ್ ಪಲ್ಸರ್ 220F ಅನ್ನು ಸಂಪೂರ್ಣ ಬದಲಾಯಿಸಿ ಬಿಡುಗಡೆ ಮಾಡಲಾಯಿತು.
ಆದರೆ ಹಳೆಯ ಮಾಡಲ್‌ಗೆ ಇದ್ದ ಕ್ರೇಜ್ ಹೊಸ ಮಾಡಲ್‌ಗೆ ಸಿಗದ ಕಾರಣ ಫ್ಲಾಪ್ ಆಯಿತು. ಇತ್ತೀಚಿನ 150ಸಿಸಿ ಮಾಡಲ್‌ಗಳ ಮುಂದೆ ಬಜಾಜ್ ವಯಸ್ಸಾದ ಬೈಕ್‌ನಂತೆ ಕಾಣುತ್ತದೆ. ಅದರ ಡಿಸೈನ್ ಆಕರ್ಷಕವಾಗಿದ್ದರೂ, ಸುಮಾರು ವರ್ಷಗಳಿಂದ ಇದರಲ್ಲೆ ಮುಂದುವರಿಯುತ್ತಿದೆ. ಹಾಗೆಯೇ ಪಲ್ಸರ್ 150ಗೂ ಕೂಡ ತನ್ನದೇ ಆದ ಅಭಿಮಾನಿಗಳಿದ್ದಾರೆ, ಪೂರ್ಣ ಬದಲಾವಣೆ ಮಾಡಿದರೆ ಬೈಕ್ ಹಿಟ್ ಆಗುವ ಸಾಧ್ಯತೆಗಳು ಕಡಿಮೆ ಎಂದು ಕಂಪನಿ ಭಾವಿಸಿರಬಹುದು.


Click it and Unblock the Notifications








