ಧೋನಿ ಸಾನಿಧ್ಯದಲ್ಲಿ ಬೈಕ್ ಫೆಸ್ಟಿವಲ್ ಆಫ್ ಇಂಡಿಯಾಗೆ ರೋಚಕ ತೆರೆ
ಸದಾ ಕ್ರಿಕೆಟ್ ಚಟುವಟಿಕೆಗಳಲ್ಲಿ ತಲ್ಲೀನರಾಗಿರುವ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಬಿಡುವಿನ ಸಮಯ ಕಂಡುಕೊಳ್ಳುವುದು ತುಂಬಾನೇ ಕಷ್ಟ. ಇದೀಗಷ್ಟೇ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಚಾಂಪಿಯನ್ಸ್ ಲೀಗ್ ಟ್ವೆಂಟಿ20 ಕ್ರಿಕೆಟ್ ಚಾಂಪಿಯನ್‌ಶಿಪ್ ಮುಕುಟ ಧರಿಸಿ ಕೊಟ್ಟಿರುವ ಈ ಕಾಪ್ಟನ್ ಕೂಲ್ ಮಗದೊಂದು ಸರಣಿಯಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ತಾಯ್ನಾಡಿನ ಪರ ಆಡಲು ಸಜ್ಜಾಗಬೇಕಿದೆ.
ಈ ನಡುವೆ ತಮ್ಮ ಬೈಕ್ ಪ್ರೇಮವನ್ನು ಮಗದೊಮ್ಮೆ ತೋರ್ಪಡಿಸಿರುವ ಈ ರಾಂಚಿ ಬಾಯ್, ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ (ಬಿಐಸಿ) 'ಬೈಕ್ ಫೆಸ್ಟಿವಲ್ ಆಫ್ ಇಂಡಿಯಾ' ಸಮಾರೋಪ ಸಮಾರಂಭದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಾರ್ಯಕ್ರಮಕ್ಕೆ ರೋಚಕ ತೆರೆ ಎಳೆದಿದ್ದಾರೆ.

ಬುದ್ಧ ಅಂತರಾಷ್ಟ್ರೀಯ ರೇಸ್ ಟ್ರ್ಯಾಕ್‌ನಲ್ಲಿ ಯಮಹಾ ಆರ್15 ಬೈಕ್ ಚಾಲನೆ ಮಾಡಿದ ಧೋನಿ ವಾಹನ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದರು. ಇದೇ ಸಂದರ್ಭದಲ್ಲಿ ಧೋನಿ ಬಳಿಯಿರುವ ಅತಿ ವಿರಳವಾಗಿ ಕಾಣಸಿಗುವ ಹೆಲ್‌ಕ್ಯಾಟ್ ಎಕ್ಸ್132 ಕಾನ್ಫೇಡೇರೇಟ್ ಸೇರಿದಂತೆ 12 ಬೈಕ್‌ಗಳನ್ನು ಆಯೋಜಕರು ಪ್ರದರ್ಶನಕ್ಕಿಟ್ಟಿದ್ದರು.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಬೈಕ್ ಫೇಸ್ಟಿವಲ್ ಆಫ್ ಇಂಡಿಯಾ ರಾಯಭಾರಿ ಕೂಡಾ ಆಗಿರುವ ಧೋನಿ, "ಇಂದೊಂದು ಉತ್ತಮವಾದ ಕಾರ್ಯಕ್ರಮವಾಗಿದ್ದು, ಬೈಕ್ ಪ್ರೇಮಿಗಳನ್ನು ಒಂದುಗೂಡಿಸುವ ಕೆಲಸದ ಜೊತೆಗೆ ಸುರಕ್ಷಿತ ಚಾಲನೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಇಂತಹ ಸ್ಮರಣೀಯ ಕೂಟ ಹಮ್ಮಿಕೂಂಡಿರುವ ಆಯೋಜಕರಿಗೆ ಧನ್ಯವಾದ ಸಮರ್ಪಿಸಲು ಇಚ್ಛಿಸುತ್ತಿದ್ದೇನೆ" ಎಂದಿದ್ದಾರೆ.

ಬೈಕ್ ಫೆಸ್ಟಿವಲ್ ಆಫ್ ಇಂಡಿಯಾದ ಅಂತಿಮ ದಿನದಲ್ಲಿ ನುರಿತ ಪ್ರತಿಭೆಗಳಿಂದ ಬೈಕ್ ಸ್ಟಂಟ್ ಸ್ಪರ್ಧೆ ಏರ್ಪಡಿಸಲಾಗಿತ್ತು. ಇಲ್ಲಿ ವಿಜೇತರು 2015 ಎಕ್ಸ್‌ಡಿಎಲ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲಿದ್ದಾರೆ.

ಇದಕ್ಕೂ ಮೊದಲು ಒಂದು ತಿಂಗಳ ಪರ್ಯಂತ ನ್ಯಾಷನಲ್ ಸೇಫ್ಟಿ ಚಾಲನೆಯನ್ನು ಆಯೋಜನೆ ಮಾಡಲಾಗಿತ್ತು. ಈ ಮೂಲಕ ದೇಶದ್ಯಾಂತ ಒಟ್ಟು 8170 ಕೀ.ಮೀ. ದೂರವನ್ನು ಕ್ರಮಿಸಲಾಗಿತ್ತು.


Click it and Unblock the Notifications








