ಅಂಬರೀಷ್ ಕಾರು: ಟೊಯೊಟಾದ ದುಬಾರಿ ಪ್ರಡೊ
ರೆಬಲ್ ಸ್ಟಾರ್ ಅಂಬರೀಷ್ ವಾಹನಲೋಕ ಈಗಾಗಲೇ ಈ ಹಿಂದಿನ ಲೇಖನದಲ್ಲಿ ನೋಡಿರುವಿರಿ. ಅವರಲ್ಲಿರುವ ಕಾರುಗಳಲ್ಲಿ ಪ್ರಡೊ ಎಂಬ ಹೆಸರು ಅಷ್ಟಾಗಿ ನಿಮ್ಮ ಕಿವಿಗೆ ಬೀಳದೇ ಇದ್ದಿರಬಹುದು. ಯಾಕೆಂದರೆ ಇದು ರಸ್ತೆಯಲ್ಲಿ ಬೆರಳೆಣಿಕೆಯ ಸಂಖ್ಯೆಯಲ್ಲಿರುವ ಟೊಯೊಟಾ ಕಂಪನಿಯ ದುಬಾರಿ ಕಾರು. ಅಂಬಿ ಹುಟ್ಟುಹಬ್ಬದ ನೆಪದಲ್ಲಿ ದುಬಾರಿ ಪ್ರಡೊ ಕಾರಿನ ಕೊಂಚ ಮಾಹಿತಿ ತಿಳಿದುಕೊಳ್ಳೋಣ.
ಟೊಯೊಟಾ ಕಂಪನಿಯ ಪ್ರೀಮಿಯಂ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಪ್ರಡೊ 5 ಡೋರ್ ಮತ್ತು ಮೂರು ಡೋರಿನ ಆಯ್ಕೆಗಳಲ್ಲಿ ದೊರಕುತ್ತದೆ. ಈ ಎರಡೂ ವರ್ಷನ್‌ಗಳಲ್ಲೂ ಚಾಲಕ, ಪ್ರಯಾಣಿಕ ಮತ್ತು ಲಗೇಜ್ ಸ್ಥಳಾವಕಾಶ ಸಾಕಷ್ಟಿದೆ. ಸೀಟನ್ನು ಬೇಕಾದಂತೆ ಹೊಂದಾಣಿಕೆ ಮಾಡಿಕೊಂಡು ಕಾರ್ಗೊ ಸ್ಥಳಾವಕಾಶ ಹೆಚ್ಚಿಸಿಕೊಳ್ಳಬಹುದು ಅಥವಾ ಕಡಿಮೆ ಮಾಡಿಕೊಳ್ಳಬಹುದು.

ಮೂರು ಡೋರಿನ ಪ್ರಡೊ ಕಾರುಗಳು ಎಸ್ಎಕ್ಸ್ ಮತ್ತು ಝಡ್ಆರ್ ಎಂಬೆರಡು ಆವೃತ್ತಿಗಳಲ್ಲಿ ದೊರಕುತ್ತದೆ. ಇದರಲ್ಲಿ ಎಸ್ಎಕ್ಸ್ ಆವೃತ್ತಿಯು 3.0 ಲೀಟರಿನ ಟರ್ಬೊ ಡೀಸೆಲ್ ಎಂಜಿನ್ ಹೊಂದಿದೆ. ಡ್ಯೂಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ಕ್ರೂಷ್ ಕಂಟ್ರೋಲ್, ಕಾರು ರಿವರ್ಸ್ ಮಾಡುವಾಗಿನ ಕ್ಯಾಮರಾ, ಬ್ಲೂಟೂಥ್ ಇತ್ಯಾದಿ ಫೀಚರುಗಳನ್ನು ಹೊಂದಿದೆ.
ಟೊಯೊಟಾ ಪ್ರಡೊ ಝಡ್ಆರ್ ಆವೃತ್ತಿ ಸಹ 3.0 ಲೀಟರಿನ ಟರ್ಬೊ ಡೀಸೆಲ್ ಎಂಜಿನ್ ಹೊಂದಿದೆ. ಇದರಲ್ಲಿ ದುಬಾರಿಯಾದ 12 ಸ್ಪೀಕರ್ ಆಡಿಯೋ ಸಿಸ್ಟಮ್ ಇದೆ. ಐಪ್ಯಾಡ್ ಇತ್ಯಾದಿಗಳಿಗೆ ಸಂಪರ್ಕ ಕಲ್ಪಿಸಲು ಯುಎಸ್‌ಬಿ, ಆಡಿಯೋ ಜಾಕ್ ಇತ್ಯಾದಿ ಫೀಚರುಗಳಿವೆ. ಜೊತೆಗೆ ಸ್ಮಾರ್ಟ್ ಎಂಟ್ರಿ ಮತ್ತು ಸ್ಟಾರ್ಟ್, ಕೂಲರ್ ಬಾಕ್ಸ್, ಸ್ಯಾಟಲೈಟ್ ನ್ಯಾವಿಗೇಷನ್ ಸಿಸ್ಟಮ್, ರೇಡರ್ ಕ್ರೂಷರ್ ಕಂಟ್ರೋಲ್ ಇತ್ಯಾದಿಗಳಿವೆ.
ಐದು ಡೋರಿನ ಟೊಯೊಟಾ ಪ್ರಡೊ ಕಾರು ಜಿಎಕ್ಸ್, ಜಿಎಕ್ಸ್ಎಲ್, ವಿಎಕ್ಸ್ ಮತ್ತು ಕಾಕಾಡು ಎಂಬ ಆವೃತ್ತಿಗಳಲ್ಲಿ ದೊರಕುತ್ತದೆ. ಜೊತೆಗೆ ಆಲ್ಟಿಟ್ಯೂಡ್ ಸ್ಪೆಷಲ್ ಅಡಿಷನ್ ಪ್ರಡೊ ಕಾರು ಸಹ ಲಭ್ಯವಿದೆ. ಇದ್ರಲ್ಲಿ ಜಿಎಕ್ಸ್ ಆವೃತ್ತಿಯು 3.0 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಹೊಂದಿದೆ. 17 ಇಂಚಿನ ಅಲಾಯ್ ವೀಲ್, ಬ್ಲೂಟೂಥ್, ಕ್ರೂಷ್ ಕಂಟ್ರೋಲ್, ಸ್ಮಾರ್ಟ್ ಎಂಟ್ರಿ ಮತ್ತು ಸ್ಟಾರ್ಟ್ ಇತ್ಯಾದಿ ಫೀಚರುಗಳಿವೆ.
ಪ್ರಡೊ ಐದು ಡೋರಿನ ಜಿಎಕ್ಸ್ಎಲ್ ಮತ್ತು ವಿಎಕ್ಸ್ ಡೀಸೆಲ್ ಆವೃತ್ತಿಯು 4.0 ಲೀಟರಿನ ಪೆಟ್ರೋಲ್ ವಿ6 ಎಂಜಿನ್ ಹೊಂದಿದೆ. ಇದು 3.0 ಎಲ್ ಡೀಸೆಲ್ ಎಂಜಿನ್ ಆಯ್ಕೆಯಲ್ಲೂ ದೊರಕುತ್ತದೆ. 3 ಝೋನ್ ಕ್ಲೈಮೇಟ್ ಕಂಟ್ರೋಲ್ ಎಸಿ, ಕ್ರೂಷ್ ಕಂಟ್ರೋಲ್, ರಿವರ್ಸ್ ಕ್ಯಾಮರಾ, ಬ್ಲೂಟೂಥ್ ಇತ್ಯಾದಿ ಫೀಚರುಗಳು ಇದರಲ್ಲಿವೆ. ಟೊಯೊಟಾ ಪ್ರಡೊ ಕಾಕಾಡು ಮತ್ತು ಆಲ್ಟಿಟ್ಯೂಡ್ ಆವೃತ್ತಿಗಳು ಕೂಡ 4.0 ಲೀಟರ್ ವಿ6 ಎಂಜಿನ್ ಹೊಂದಿವೆ. ಈ ಆವೃತ್ತಿಗಳಲ್ಲಿ ಸುರಕ್ಷತೆಯ ಮತ್ತು ಅತ್ತಾಧುನಿಕ ಫೀಚರುಗಳು ಹೆಚ್ಚಿವೆ.
ಆರಂಭದಲ್ಲಿಯೇ ಹೇಳಿರುವಂತೆ ಪ್ರಡೊ ಕಾರುಗಳು ಟೊಯೊಟಾ ಕಂಪನಿಯ ದುಬಾರಿ ಆವೃತ್ತಿಗಳು. ಬೆಂಗಳೂರು ಎಕ್ಸ್ ಶೋರೂಂನಲ್ಲಿ ಟೊಯೊಟಾ ಪ್ರಡೊ ಆರಂಭಿಕ ದರ ಸುಮಾರು 62 ಲಕ್ಷ ರುಪಾಯಿ ಇದೆ. ಅಂದ ಹಾಗೆ ಅಂಬರೀಷ್ ಬಳಿಯಿರುವ ಟೊಯೊಟಾ ಪ್ರಡೊ ಕಾರಿನ ರಿಜಿಸ್ಟ್ರೇಷನ್ ಸಂಖ್ಯೆ ಒಂಬತ್ತು. ಪ್ರಡೊ ಮಾತ್ರವಲ್ಲದೇ ಅಂಬಿ ಉಳಿದ ಕಾರುಗಳ ನಂಬರ್ ಪ್ಲೇಟ್ ಸಂಖ್ಯೆ ಕೂಡ ಒಂಬತ್ತು.


Click it and Unblock the Notifications








