2018 ದಟ್ಸನ್ ಗೊ ಪ್ಲಸ್ ರಿವ್ಯೂ: ಬಜೆಟ್ ಕಾರಿನಲ್ಲಿ ಪ್ರೀಮಿಯಂ ಡ್ರೈವ್ ಅನುಭವ
ದೇಶಿಯ ಮಾರುಕಟ್ಟೆಯಲ್ಲಿ ಎಂಪಿವಿ(ಮಲ್ಟಿ ಪರ್ಪಸ್ ವೆಹಿಕಲ್) ಕಾರುಗಳಿಗೆ ವಿಶೇಷ ಬೇಡಿಕೆಯಿದ್ದು, ಈ ವಿಭಾಗದಲ್ಲಿ ಕಾರು ಉತ್ಪಾದನಾ ಸಂಸ್ಥೆಗಳು ಹೊಸ ಉತ್ಪನ್ನ ಮೂಲಕ ಗ್ರಾಹಕರನ್ನು ತಮ್ಮತ್ತ ಆಕರ್ಷಿಸುವಲ್ಲಿ ತೀವ್ರ ಪೈಪೋಟಿ ನಡೆಸುತ್ತಿವೆ. ದಟ್ಸನ್ ಇಂಡಿಯಾ ಸಂಸ್ಥೆಯು ಇದೇ ನಿಟ್ಟಿನಲ್ಲಿ ಹೊಸ ಪ್ರಯತ್ನಕ್ಕೆ ಕೈಹಾಕಿದೆ.

ದಟ್ಸನ್ ಇಂಡಿಯಾ ಸಂಸ್ಥೆಯು ಕಳೆದ ವಾರವಷ್ಟೇ ತನ್ನ ಬಹುನೀರಿಕ್ಷಿತ ಗೊ ಮತ್ತು ಗೊ ಪ್ಲಸ್ ಕಾರುಗಳನ್ನು ಹೊಸ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೊಳಿಸಿದ್ದು, ಆಹ್ವಾನ ಮೇರೆಗೆ ಡ್ರೈವ್‌ಸ್ಪಾರ್ಕ್ ತಂಡವು ಹೊಸ ಕಾರುಗಳ ಮೊದಲ ಚಾಲನಾ ವಿಮರ್ಶೆ ಕೈಗೊಳ್ಳುವ ಮೂಲಕ ಎಂಜಿನ್ ಕಾರ್ಯಕ್ಷಮತೆ ಸೇರಿದಂತೆ ವಿವಿಧ ಹಂತದಲ್ಲಿ ಪರೀಕ್ಷೆ ಕೈಗೊಂಡಿತ್ತು. ಈ ವೇಳೆ ಅದ್ಭುತ ಪ್ರದರ್ಶನ ತೊರಿದ ಹೊಸ ಕಾರುಗಳು ಈ ಹಿಂದಿಗಿಂತಲೂ ಉತ್ತಮ ಸೌಲಭ್ಯಗಳನ್ನು ಹೊತ್ತು ಮಾರುಕಟ್ಟೆಗೆ ಪ್ರವೇಶ ಪಡೆದಿರುವುದು ಖಚಿತವಾಯ್ತು.

ಡ್ರೈವ್‌ಸ್ಪಾರ್ಕ್ ತಂಡ ನಡೆಸಿದ ಮೊದಲ ಚಾಲನಾ ವಿಮರ್ಶೆಯಲ್ಲಿ ಹೊಸ ಗೊ ಮತ್ತು ಗೊ ಪ್ಲಸ್ ಕಾರುಗಳು ಸಾಕಷ್ಟು ಬದಲಾವಣೆಗಳನ್ನು ಹೊಂದಿರುವುದಷ್ಟೇ ಅಲ್ಲದೇ, ಎಂಜಿನ್ ಕಾರ್ಯಕ್ಷಮತೆಯಲ್ಲೂ ಉತ್ತಮ ಪ್ರದರ್ಶನ ಮಾಡಿರುವುದು ಹಲವು ಜನಪ್ರಿಯ ಕಾರು ಮಾದರಿಗಳಿಗೆ ಪೈಪೋಟಿಯಾಗುವ ಲಕ್ಷಣಗಳನ್ನು ಖಚಿತಪಡಿಸಿದವು.

ಈ ಲೇಖನದಲ್ಲಿ ನಾವು ಗೊ ಪ್ಲಸ್ ಕಾರು ಮಾದರಿಯನ್ನು ಮಾತ್ರವೇ ಆಯ್ಕೆ ಮಾಡಿಕೊಂಡಿದ್ದು, ಎರಡು ಕಾರುಗಳಿಗೂ ಪ್ರತ್ಯೇಕ ವಿಮರ್ಶೆ ಮಾಡುತ್ತಿದ್ದೇವೆ. ಹೀಗಾಗಿ ಮೊದಲ ನಾವು ಎಂಪಿವಿ ಮಾದರಿಯಾಗಿರುವ ಗೊ ಪ್ಲಸ್ ಕಾರಿನ ಕುರಿತಾದ ವಿಸ್ತೃತ ಮಾಹಿತಿಯನ್ನು ಮಾತ್ರವೇ ಇಲ್ಲಿ ವಿಮರ್ಶೆ ಮಾಡಲಾಗಿದೆ.

ನಮೆಗೆಲ್ಲಾ ಗೊತ್ತಿರುವ ಹಾಗೆ, ಭಾರತದಲ್ಲಿ ಬಹುತೇಕ ಕಾರು ಖರೀದಿದಾರರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ, ಹ್ಯುಂಡೈ, ಟಾಟಾ, ಮಹೀಂದ್ರಾ ಇಲ್ಲವೇ ಫೋರ್ಡ್ ಕಾರುಗಳನ್ನೇ ಹೆಚ್ಚಾಗಿ ಖರೀದಿಸಲು ಒಲವು ತೊರುತ್ತಾರೆ. ಅದಕ್ಕೆ ಕಾರಣ ಜನಪ್ರಿಯತೆ, ಮೋಟಾರ್ ಸಂಸ್ಥೆಗಳ ಸೇವೆಗಳು ಕಾರಣವಾಗಿದೆ. ಆದ್ರೆ ಮೇಲಿನ ಕಾರು ಮಾದರಿಗಳಷ್ಟೇ ದಟ್ಸನ್ ಕೂಡಾ ಇದೀಗ ಗ್ರಾಹಕರ ಆಕರ್ಷಣೆ ಕಾರಣವಾಗಬಲ್ಲ ಹಲವು ಅಂಶಗಳನ್ನು ತನ್ನ ಹೊಸ ಉತ್ಪನ್ನದಲ್ಲಿ ಹೊರತಂದಿದೆ.

ನಿಸ್ಸಾನ್ ಸಂಸ್ಥೆಯ ಅಂಗಸಂಸ್ಥೆಯಾದ ದಟ್ಸನ್ ಇಂಡಿಯಾ ಸಂಸ್ಥೆಯು ತನ್ನ ಬಹುನಿರೀಕ್ಷಿತ ಗೊ ಪ್ಲಸ್ ಕಾರುಗಳನ್ನು ಬಿಡುಗಡೆಗೊಳಿಸುವ ಮೂಲಕ ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಹಳೆಯ ಆವೃತ್ತಿಗಿಂತ ಹೊಸ ಕಾರುಗಳಲ್ಲಿ ನೂರಕ್ಕೂ ಹೆಚ್ಚು ನವೀಕೃತ ವಿನ್ಯಾಸಗಳನ್ನು ಪಡೆದುಕೊಂಡಿವೆ ಅಂದ್ರೆ ನೀವು ನಂಬಲೇಬೇಕು.

ಮೂರು ವರ್ಷಗಳ ಹಿಂದೆ ಭಾರತದಲ್ಲಿ ಮೊದಲ ಬಾರಿಗೆ ಗೊ ಪ್ಲಸ್ ಕಾರು ಮಾದರಿಯನ್ನು ಬಿಡುಗಡೆ ಮಾಡಿದ್ದ ದಟ್ಸನ್ ಸಂಸ್ಥೆಯು ಕಾಲಕ್ಕೆ ತಕ್ಕಂತೆ ಕೆಲವು ಬದಲಾವಣೆ ತಂದಿತ್ತು. ಆದ್ರೆ ನಿಗದಿ ಮಟ್ಟದಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗಿದ್ದ ದಟ್ಸನ್ ತನ್ನ ಕಾರುಗಳ ಉತ್ಪಾದನೆಯಲ್ಲಿ ಮಹತ್ವದ ಬದಲಾವಣೆ ತರುವ ಉದ್ದೇಶದಿಂದ ಬೃಹತ್ ಯೋಜನೆಗೆ ಚಾಲನೆ ನೀಡಿತ್ತು.

ಇದರ ಫಲವಾಗಿ ಇಂದು ಹೊಸ ತಂತ್ರಜ್ಞಾನ ಮತ್ತು ವಿನ್ಯಾಸ ಪ್ರೇರಿತ ಗೊ ಪ್ಲಸ್ ಮತ್ತು ಗೊ ಕಾರುಗಳು ಮಾರುಕಟ್ಟೆ ಪ್ರವೇಶಿಸಿದ್ದು, ಇಷ್ಟು ದಿನಗಳ ಕಾಲ ಸುರಕ್ಷಾ ವಿಚಾರದಲ್ಲಿ ಗ್ರಾಹಕರ ಆಯ್ಕೆಯಿಂದ ದೂರ ಉಳಿದ್ದ ಕಾರುಗಳು ಇಂದು ಜನಪ್ರಿಯ ಕಾರುಗಳಿಗೂ ಪೈಪೋಟಿ ನೀಡುವ ಮಟ್ಟಿಗೆ ಹೊಸ ರೂಪದೊಂದಿಗೆ ಸಿದ್ದಗೊಂಡಿವೆ.

ಕಳೆದ ಮೂರು ತಿಂಗಳ ಹಿಂದಷ್ಟೇ ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಇದೇ ಕಾರುಗಳನ್ನು ಬಿಡುಗಡೆ ಮಾಡಿದ್ದ ದಟ್ಸನ್ ಸಂಸ್ಥೆಯು ಇದೀಗ ಭಾರತದಲ್ಲೂ ಹೊಸ ಗೊ ಮತ್ತು ಗೊ ಪ್ಲಸ್ ಕಾರುಗಳ ಮಾರಾಟಕ್ಕೆ ಚಾಲನೆ ನೀಡಿದ್ದು, ಹೊಸ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 3.29 ಲಕ್ಷಕ್ಕೆ(ಗೊ) ಮತ್ತು ರೂ. 3.83ಲಕ್ಷಕ್ಕೆ(ಗೊ ಪ್ಲಸ್) ದರ ನಿಗದಿ ಮಾಡಿದೆ.

#ExperienceChange ಎನ್ನುವ ಅಭಿಯಾನದೊಂದಿಗೆ ಹೊಸ ಗೊ ಪ್ಲಸ್ ಕಾರುಗಳನ್ನು ಬಿಡುಗಡೆ ಮಾಡಲಾಗಿದ್ದು, ಕಾರು ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುವುದಕ್ಕಾಗಿ ಈ ಬಾರಿ ದಟ್ಸನ್ ವಿನೂತನ ಯೋಜನೆಗಳನ್ನು ಕೈಗೊಂಡಿದೆ.

ಸ್ಟೈಲಿಷ್ ಮತ್ತು ಡಿಸೈನ್
ಡೈನಾಮಿಕ್ ಸ್ಟೈಲಿಷ್ ಹೊಂದಿರುವ ಹೊಸ ಗೊ ಪ್ಲಸ್ ಕಾರು ಮಾದರಿಯು ಈ ಹಿಂದಿಗಿಂತಲೂ ಹೆಚ್ಚು ರೂಪಾಂತರಗೊಂಡಿದ್ದು, ಗ್ರಾಹಕರ ನೀಡುವ ಬೆಲೆಗಳಿಗೆ ಹೊಸ ಕಾರಿನಲ್ಲಿ ನ್ಯಾಯಯುತ ಸೌಲಭ್ಯಗಳನ್ನು ಒದಗಿಸಿರುವುದು ಇಲ್ಲಿ ಮುಖ್ಯವಾದ ಅಂಶವಾಗಿದೆ.

ಹೊಸ ಕಾರುಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವುದಕ್ಕಾಗಿ ಬಾಲಿವುಡ್ ಜನಪ್ರಿಯ ನಟ ಅಮೀರ್ ಖಾನ್ ಅವರನ್ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿರುವ ದಟ್ಸನ್ ಸಂಸ್ಥೆಯು, ಪ್ರೀಮಿಯಂ ವೈಶಿಷ್ಟ್ಯತೆಗಳೊಂದಿಗೆ ವೈಯಕ್ತಿಯ ಕಾರು ಖರೀದಿದಾರರಿಗೆ ಉತ್ತಮ ಸೇವೆ ಒದಗಿಸುವ ಭರವಸೆ ನೀಡಿದೆ.

ಇನ್ನು ವಿಶ್ವದರ್ಜೆ ವಿನ್ಯಾಸಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ಹೊಸ ಗೊ ಪ್ಲಸ್ ಕಾರುಗಳು ಸ್ಪೋರ್ಟಿ ಲುಕ್‌ನೊಂದಿಗೆ ಗುಣಮಟ್ಟ, ಸ್ಟೈಲಿಷ್, ಡೈನಾಮಿಕ್ ವೈಶಿಷ್ಟ್ಯ ಹೊಂದಿದ್ದು, ಮರುವಿನ್ಯಾಸಗೊಳಿಸಿದ ಫ್ರಂಟ್ ಗ್ರೀಲ್, ಹೆಡ್‌ಲ್ಯಾಂಪ್ ಕ್ಲಸ್ಟರ್, ಎಲ್‌ಇಡಿ ಡಿಆರ್‌ಎಲ್ಎಸ್ ಒದಗಿಸಲಾಗಿದೆ.

ವಿಶೇಷ ಅಂದ್ರೆ ಪ್ರತಿ ವೆರಿಯೆಂಟ್‌ಗಳಲ್ಲೂ 7.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಸೌಲಭ್ಯ ನೀಡಲಾಗಿದ್ದು, ಧೀರ್ಘಕಾಲದ ಕಾರು ಚಾಲನೆಗೆ ಇವು ಸಹಕಾರಿಯಾಗಿರಲಿವೆ.

ಎಂಜಿನ್ ಸೌಲಭ್ಯ
ಗೊ ಪ್ಲಸ್ ಕಾರುಗಳು 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 68-ಬಿಎಚ್‌ಪಿ ಮತ್ತು 104-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು. ಜೊತೆಗೆ ಪ್ರತಿ ಕಾರಿನಲ್ಲೂ 5-ಸ್ಪೀಡ್ ಆಟೋ ಮತ್ತು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯಿರಲಿದೆ.

ಮೈಲೇಜ್
ಉತ್ತಮ ಇಂಧನ ದಕ್ಷತೆ ಹೊಂದಿರುವ ದಟ್ಸನ್ ಹೊಸ ಕಾರುಗಳಲ್ಲಿ ಗೊ ಮಾದರಿಯು ಪ್ರತಿ ಲೀಟರ್ ಪೆಟ್ರೋಲ್‌ಗೆ ಗರಿಷ್ಠವಾಗಿ 19.83ಕಿ.ಮಿ ಮೈಲೇಜ್ ಹಿಂದಿರುಗಿಸಿದ್ದಲ್ಲಿ, ಗೊ ಪ್ಲಸ್ ಕಾರುಗಳು ಪ್ರತಿ ಲೀಟರ್ ಪೆಟ್ರೋಲ್‌ಗೆ 15 ಕಿ.ಮಿ ಮೈಲೇಜ್ ನೀಡಬಲ್ಲವು.

ಇದಲ್ಲದೆ ಹೊಸ ಕಾರುಗಳಲ್ಲಿ ಎಲೆಕ್ಟ್ರಾನಿಕ್ ಅಡ್ಜಸ್ಟ್ ಮಿರರ್, ರಿಯರ್ ಪಾರ್ಕಿಂಗ್ ಸೆನ್ಸಾರ್ಸ್, ಪವರ್ ವಿಂಡೋ, ಡ್ರೈವರ್ ಸೀಟ್ ರಿಮೆಂಡರ್, ರಿಯರ್ ವೈಪರ್ಸ್ ವೈಶಿಷ್ಟ್ಯತೆಗಳ ಜೊತೆಗೆ ಪ್ರಯಾಣಿಕರ ಸುರಕ್ಷತೆಗಾಗಿ ಎಬಿಎಸ್ ಮತ್ತು ಡ್ಯುಯಲ್ ಫ್ರಂಟ್ ಏರ್‍ಬ್ಯಾಗ್‍ಗಳನ್ನು ಅಳವಡಿಸಲಾಗಿದೆ.

ಖರೀದಿಗೆ ಲಭ್ಯವಿರುವ ಬಣ್ಣಗಳು ಸದ್ಯ ಖರೀದಿಗೆ ಲಭ್ಯವಿರುವ ಪ್ರಮುಖ ಎರಡು ಬಣ್ಣಗಳ ಜೊತೆಗೆ ಹೆಚ್ಚುವರಿಯಾಗಿ ಆ್ಯಂಬೆರ್ ಆರೇಂಜ್ ಮತ್ತು ಸನ್ ಸ್ಟೋನ್ ಎನ್ನುವ ಬಣ್ಣಗಳಲ್ಲಿ ಲಭ್ಯವಿರಲಿದ್ದು, ಬೆಸ್ಟ್ ಇನ್ ಕ್ಲಾಸ್ ಮಾದರಿಯಲ್ಲಿ ಹೊಸ ಡಿಸೈನ್ ಗ್ರಾಹಕರನ್ನು ಸೆಳೆಯಲಿವೆ.

ಹಾಗೆಯೇ ಗೊ ಪ್ಲಸ್ ಕಾರುಗಳು ಬೆಸ್ಟ್ ಇನ್ ಕ್ಲಾಸ್ 180ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದ್ದು, ಜೊತೆಗೆ ಈ ಹಿಂದೆ ಗೊ ಪ್ಲಸ್ ಕಾರುಗಳಲ್ಲಿ ಚಾಲನೆ ವೇಳೆ ಕಂಡುಬರುತ್ತಿದ್ದ ಎಂಜಿನ್ ಶಬ್ದದ ಸಮಸ್ಯೆ ಇದೀಗ ಇಲ್ಲದಿರವುದನ್ನು ನಾವು ಹೊಸ ಕಾರಿನಲ್ಲಿ ಕಾಣಬಹುದಾದಿದೆ.

ಹೊಸ ಕಾರುಗಳನ್ನು ಜಪಾನ್ ತಂತ್ರಜ್ಞಾನದೊಂದಿಗೆ ಅತ್ಯುತ್ತಮ ಮಾದರಿಯಲ್ಲಿ ಸಿದ್ದಗೊಳಿಸಲಾಗಿದ್ದು, ಭಾರತೀಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸಿದ್ದವಾಗಿರುವ ಈ ಕಾರು ಮುಂಬರುವ ದಿನಗಳಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ ಎನ್ನುವುದು ದಟ್ಸನ್ ಲೆಕ್ಕಾಚಾರ.

ಒಟ್ಟಿನಲ್ಲಿ ಈ ಹಿಂದಿನ ಆವೃತ್ತಿಗಿಂತಲೂ ಹೆಚ್ಚು ಸುಧಾರಿತ ತಂತ್ರಜ್ಞಾನದೊಂದಿಗೆ ಸಿದ್ದವಾಗಿರುವ ಗೊ ಮತ್ತು ಗೊ ಪ್ಲಸ್ ಕಾರುಗಳು ಮುಂಬರುವ ದಿನಗಳಲ್ಲಿ ಹೊಸ ಮುನ್ನಡೆ ಕಾಯ್ದುಕೊಳ್ಳುವ ನೀರಿಕ್ಷೆಯಿದ್ದು, ಬಜೆಟ್ ಕಾರು ಖರೀದಿಸುವ ಗ್ರಾಹಕರಿಗೆ ಇದು ಉತ್ತಮ ಆಯ್ಕೆಯಾಗಲಿದೆ ಎನ್ನಬಹುದು.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಮಾರುಕಟ್ಟೆಯಲ್ಲಿ ಸದ್ಯ ಎಂಪಿವಿ ಕಾರು ಮಾದರಿಗಳಾದ ಟೊಯೊಟಾ ಇನೋವಾ ಕ್ರಿಸ್ಟಾ, ಮಾರುತಿ ಎರ್ಟಿಗಾ, ಮಹೀಂದ್ರಾ ಮರಾಜೊ ಕಾರುಗಳು ಸದ್ಯ ಮುಂಚೂಣಿಯಲ್ಲಿದ್ದು, ಕೈಗೆಟುಕುವ ದರಗಳಲ್ಲಿ ಒಂದು ಉತ್ತಮ ಎಂಟ್ರಿ ಲೆವಲ್ ಪ್ರೀಮಿಯಂ ಕಾರು ಖರೀದಿಸುವವರಿಗೆ ಇದು ಬೆಸ್ಟ್ ಆಯ್ಕೆಯಾಗದೆ ಇರಲಾರದು.


Click it and Unblock the Notifications








