ಟಾಟಾ ನ್ಯಾನೊ ಕಾರಿಗೆ ಬಹುಪರಾಕ್, ಜೈಹೋ

ಗಮನಾರ್ಹ ಸಂಗತಿಯೆಂದರೆ ಏಪ್ರಿಲ್ ನಲ್ಲಿ ಕಂಪನಿಯ ಟಾಟಾ ಇಂಡಿಗೊ ಮತ್ತು ಟಾಟಾ ಇಂಡಿಕಾ ಕಾರುಗಳ ಮಾರಾಟ ನ್ಯಾನೊಗಿಂತ ಕಡಿಮೆಯಾಗಿದೆ. ಕಳೆದ ತಿಂಗಳು 4,250 ಇಂಡಿಕಾ ಕಾರುಗಳು ಮಾರಾಟಗೊಂಡಿದ್ದು, ಕಳೆದ ವರ್ಷದ ಏಪ್ರಿಲ್ ಗಿಂತ ಸುಮಾರು ಶೇ 53ರಷ್ಟು ಇಳಿಕೆ ಕಂಡಿದೆ. ಇದೇ ಅವಧಿಯಲ್ಲಿ ಸುಮಾರು 5,282 ಇಂಡಿಗೊ ಕಾರುಗಳು ಮಾರಾಟಗೊಂಡಿವೆ.
ಟಾಟಾ ಸುಮೊ, ಸಫಾರಿ, ಟಾಟಾ ಆರಿಯಾ ಮತ್ತು ವೆಂಚ್ಯೂರ್ ಕಾರುಗಳ ಮಾರಾಟ 3,843 ಯುನಿಟ್ ತಲುಪಿದ್ದು ಶೇ. 15ರಷ್ಟು ಏರಿಕೆ ಕಂಡಿದೆ. ಇದರೊಂದಿಗೆ ಜಾಗ್ವಾರ್ ಆಂಡ್ ಲ್ಯಾಂಡ್ ರೋವರ್ ಕೂಡ ಮಾರಾಟದಲ್ಲಿ ಏರಿಕೆಯ ಟ್ರೆಂಡ್ ಮುಂದುವರೆಸಿದೆ. ಒಟ್ಟಾರೆ ಏಪ್ರಿಲ್ ತಿಂಗಳಲ್ಲಿ ಟಾಟಾ ಮೋಟರ್ಸ್ ಸುಮಾರು 64,383 ಯುನಿಟ್ ಕಾರು ಮಾರಾಟ ಮಾಡಿತ್ತು.
ಇದೇ ತಿಂಗಳಿನಲ್ಲಿ ಕಂಪನಿಯು 4,258 ಕಾರುಗಳನ್ನು ರಫ್ತು ಮಾಡಿದ್ದು, ಕಳೆದ ವರ್ಷದ ಏಪ್ರಿಲ್ ನ 3,137 ಕಾರು ರಫ್ತಿಗೆ ಹೋಲಿಸಿದರೆ ಶೇಕಡಾ 36ರಷ್ಟು ಏರಿಕೆ ದಾಖಲಿಸಿದೆ. ಪ್ರಸಕ್ತ ವರ್ಷದ ಮಾರ್ಚ್ ನಲ್ಲಿ ಸುಮಾರು 8,707 ನ್ಯಾನೊ ಕಾರುಗಳು ಮಾರಾಟಗೊಂಡಿವೆ. ಕಳೆದ ವರ್ಷದ ನವೆಂಬರ್ ನಲ್ಲಿ ಕೇವಲ 509 ನ್ಯಾನೊ ಕಾರುಗಳು ಮಾರಾಟಗೊಂಡಿದ್ದವು. ನ್ಯಾನೊ ಕಾರುಗಳಲ್ಲಿ ಬೆಂಕಿ ಕಾಣಿಸಿಕೊಂಡ ಪ್ರಕರಣಗಳಿಂದ ಮಾರಾಟ ಗಮನಾರ್ಹ ಇಳಿಕೆ ಕಂಡಿತ್ತು.
ನ್ಯಾನೊ ಖರೀದಿ ಈಗ ಸುಲಭವಾಗಿದೆ. ವ್ಯಾರೆಂಟಿ ಅವಧಿಯನ್ನು ಎರಡು ಪಟ್ಟು ಹೆಚ್ಚಿಸಲಾಗಿದೆ. ಈಗ ನ್ಯಾನೊ ಕಾರುಗಳಿಗೆ 4 ವರ್ಷಗಳ ವ್ಯಾರೆಂಟಿಯಿದೆ. ಸುಲಭವಾಗಿ ಹಣಕಾಸು ಪಾವತಿ ವ್ಯವಸ್ಥೆಯೂ ಮಾರಾಟ ಹೆಚ್ಚಾಗಲು ಕಾರಣವಾಗಿದೆ. ದೇಶದ ಹೆಚ್ಚಿನ ಡೀಲರ್ ಗಳ ಬಳಿ ನ್ಯಾನೊ ಕಾರುಗಳು ದೊರಕುತ್ತಿವೆ. ಕೆಲವು ರಾಜ್ಯಗಳಲ್ಲಿರುವ ಬಿಗ್ ಬಜಾರ್ ಮಳಿಗೆಗಳಲ್ಲೂ ನ್ಯಾನೊ ಬುಕ್ ಮಾಡಿಕೊಳ್ಳಬಹುದು. ಆನ್ ಲೈನ್ ಮೂಲಕವೂ ಸುಲಭವಾಗಿ ಪುಟ್ಟ ಕಾರಿನ ಬುಕ್ಕಿಂಗ್ ಮಾಡಬಹುದಾಗಿದೆ.


Click it and Unblock the Notifications








