ಗುಜರಾತ್ ನಲ್ಲಿ ಮತ್ತೊಂದು ನ್ಯಾನೊ ಬೆಂಕಿಗಾಹುತಿ

ಘಟನೆ ನಡೆದದ್ದು ಗುಜರಾತಿನ ಆನಂದ್ ಎಂಬಲ್ಲಿ. ಕಾರನ್ನು ವಿಮಾ ಉದ್ಯೋಗಿ ಹಪ್ಸಾ ಮೊಹಮ್ಮದ್ ಇಕ್ಬಾಲ್ ಹೆಸರಿನಲ್ಲಿ ರಿಜಿಸ್ಟ್ರೇಶನ್ ಮಾಡಲಾಗಿದೆ. ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಾಗ ಆಕೆ ಚಾಲನೆ ಮಾಡುತ್ತಿರಲಿಲ್ಲ. ಆಕೆಯ ಪತಿ ಡ್ರೈವ್ ಮಾಡುತ್ತಿದ್ದ. ಕಾರಿನಲ್ಲಿ ಒಟ್ಟು 5 ಜನರು ಪ್ರಯಾಣಿಸುತ್ತಿದ್ದರು.
ಕೃಷ್ಣಾ ರಸ್ತೆಯಲ್ಲಿ ನ್ಯಾನೊ ಚಾಲನೆ ಮಾಡುತ್ತಿದ್ದಾಗ ಕಾರಿನೊಳಗೆ ಏನೋ ಸುಟ್ಟ ವಾಸನೆ ಬಂದಿದೆ. ಅನುಮಾನ ಬಂದು ತಕ್ಷಣ ಕಾರನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಲಾಗಿದೆ. ಕೆಲವೇ ನಿಮಿಷಗಳಲ್ಲಿ ಎಂಜಿನ್ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತು. ನೋಡುನೋಡುತ್ತಿದ್ದಂತೆ ನ್ಯಾನೊಗ್ನಿ ಕಾರನ್ನು ಪೂರ್ತಿ ಸುಟ್ಟುಹಾಕಿತ್ತು.
ನ್ಯಾನೊ ಕಾರಿನಲ್ಲಿ ಹಲವು ಬಾರಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದ ನಂತರ ಕಂಪನಿಯು ಸುರಕ್ಷಿತ ಫೀಚರುಗಳನ್ನು ಹೆಚ್ಚಿಸಿತ್ತು. ಆದರೆ ಮತ್ತೆ ಪುನಃ ಇಂತಹ ಘಟನೆ ನಡೆದಿರುವುದು ನ್ಯಾನೊ ಮಾರಾಟಕ್ಕೆ ಹಿನ್ನಡೆಯಾಗಲಿದೆ. ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಕಂಪನಿ ಯಾವುದೇ ಸ್ಪಷ್ಟನೆ ನೀಡಿಲ್ಲ.
ಕಳೆದ ವರ್ಷದ ಏಪ್ರಿಲ್ ನಲ್ಲಿ ಮೊದಲ ಬಾರಿಗೆ ನ್ಯಾನೊ ಕಾರ್ ಬೆಂಕಿಗಾಹುತಿಯಾಗಿತ್ತು. ನಂತರ ಸುಮಾರು 7 ಕಾರ್ ಗಳಲ್ಲಿ ಬೆಂಕಿ ಕಾಣಿಸಿಕೊಂಡು ಸುದ್ದಿಯಾಗಿತ್ತು. ಅದಕ್ಕಾಗಿ ಕಂಪನಿಯು 2010ರ ಸೆಪ್ಟಂಬರ್ ನಿಂದ ಅಕ್ಟೋಬರ್ ಅವಧಿಯ ನ್ಯಾನೊ ಕಾರ್ ಗಳನ್ನು ಪರಿಶೀಲಿಸಿ ಸುರಕ್ಷಿತವಾಗಿರುವುದನ್ನು ಖಾತರಿ ಪಡಿಸಿಕೊಂಡಿತ್ತು.
ಬೆಂಕಿ ಕಾಣಿಸಿಕೊಂಡ ಪ್ರಕರಣಗಳ ನಂತರ ನ್ಯಾನೊ ಮಾರಾಟದಲ್ಲಿ ಭಾರೀ ಹಿನ್ನಡೆಯಾಗಿತ್ತು. ನಂತರ ಕಂಪನಿಯು ಮಾರಾಟ ಹೆಚ್ಚಿಸಲು ಹತ್ತುಹಲವು ಪ್ರಯತ್ನಗಳನ್ನು ಮಾಡಿತ್ತು.


Click it and Unblock the Notifications








