ಮಹೀಂದ್ರ ಹೊಸ ಬೊಲೆರೊ: ದರ 6.33 ಲಕ್ಷ ರು.

ನೂತನ ಬೊಲೆರೊ ಕಾರು ಎರಡು ಆವೃತ್ತಿಗಳಲ್ಲಿ ದೊರಕುತ್ತಿದೆ. ಎಸ್ಎಲ್ಇ ಆವೃತ್ತಿ ದರ 6.33 ಲಕ್ಷ ರು. ಮತ್ತು ಝಡ್ಎಲ್ಎಕ್ಸ್ ಬಿಎಸ್4 ಆವೃತ್ತಿ ದರ 6.96 ಲಕ್ಷ ರು. ಆಗಿದೆ. ಇವೆಲ್ಲ ದೆಹಲಿ ಎಕ್ಸ್ ಶೋರೂಂ ದರಗಳಾಗಿವೆ.
ಮಹೀಂದ್ರ ಕಂಪನಿಯ ಬೊಲೆರೊ ಕಾರು ಭಾರತದ ರಸ್ತೆಗಳಲ್ಲಿ ಕಳೆದ 8 ವರ್ಷಗಳಿಂದ ಸವಾರಿ ಮಾಡುತ್ತಿದೆ. ಹೊಸ ಆವೃತ್ತಿ ಕೇವಲ ಹೊಸತು ಮಾತ್ರವಲ್ಲ ಸಾಕಷ್ಟು ಶಕ್ತಿಶಾಲಿ ಮತ್ತು ದಕ್ಷತೆಯೊಂದಿಗೆ ಬಂದಿದೆ. ಕೇವಲ ಪ್ರಸಾಧನ ಬದಲಾವಣೆ ಮಾಡದೇ ಬೊಲೆರೊಗೆ ಹೊಸ ಲುಕ್, ಪವರ್ ನೀಡಲಾಗಿದೆ.
ಹೊಸ ಬೊಲೆರೊ ನೂತನ ಮತ್ತು ದಕ್ಷತೆಯ ಡೀಸೆಲ್ ಎಂಜಿನ್ ಹೊಂದಿದೆ. ಇಂಟಿರಿಯರ್ ಲುಕ್ ಮತ್ತಷ್ಟು ಆಕರ್ಷಕವಾಗಿದೆ. ಗ್ರಾಹಕ ಸ್ನೇಹಿ ಫೀಚರುಗಳಿಂದ ಇಷ್ಟವಾಗುತ್ತದೆ.
ಹೊಸ ಬೊಲೆರೊ 2.5 ಲೀಟರ್ ಎಂ2ಡಿಐಸಿಆರ್ ಡೀಸೆಲ್ ಎಂಜಿನ್ ಹೊಂದಿದೆ. ಇದು 193 ಎನ್ಎಂ ಟಾರ್ಕ್ ಪವರಿಗೆ 63 ಹಾರ್ಸ್ ಪವರ್ ನೀಡುತ್ತದೆ. ಮೈಕ್ರೊ ಹೈಬ್ರಿಡ್ ಸಿಸ್ಟಮ್ ಹೊಂದಿರುವ ಹೊಸ ಬೊಲೆರೊ ಪ್ರತಿಲೀಟರ್ ಗೆ 16 ಕಿ.ಮೀ. ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ.
ಬೊಲೆರೊ ಕಾರು ಭಾರತದ ಅತ್ಯಧಿಕ ಮಾರಾಟದ ಸ್ಪೋರ್ಟ್ಸ್ ಯುಟಿಲಿಟಿ ಕಾರಾಗಿದೆ. ಹೊಸ ಬೊಲೆರೊ ಕಾರಲ್ಲಿ ಯಾವೆಲ್ಲ ಹೊಸ ಫೀಚರುಗಳಿವೆ ಎನ್ನುವುದನ್ನು ನೋಡೋಣ. ಮುಂಭಾಗದಲ್ಲಿ ಹೊಸ ಬಂಪರ್, ಹೊಸ ಹೆಡ್ ಲೈಟ್ಸ್, ಟರ್ನ್ ಇಂಡಿಕೇಟರ್, ಹೊಸ ಗ್ರಿಲ್ ವಿನ್ಯಾಸ ಇಷ್ಟವಾಗುತ್ತದೆ. ಇವೆಲ್ಲ ಹೊಸ ಫೀಚರುಗಳು ಬೊಲೆರೊ ಸೌಂದರ್ಯ ಹೆಚ್ಚಿಸಿವೆ.
ಇಂಟಿರಿಯರ್ ಒಳಗಡೆ ಇಣುಕಿದಾಗಲೂ ಸಾಕಷ್ಟು ಹೊಸ ಫೀಚರುಗಳು ಕಾಣುತ್ತವೆ. ಡ್ಯೂಯಲ್ ಟೋನ್ ಸೀಟ್, ಅತ್ಯುತ್ತಮ ಫಿನಿಷಿಂಗ್, ಡ್ಯೂಯಲ್ ಟೋನ್ ಡ್ಯಾಷ್ ಬೋರ್ಡ್, ಹೊಸ ಏರ್ ಕಂಡಿಷನ್ ವೆಂಟ್ ಗಳು, ನೂತನ ಡಿಜಿಟಲ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್ ನೂತನ ಬೊಲೆರೊ ಘನತೆ ಹೆಚ್ಚಿಸಿವೆ.
ಗ್ರಾಹಕರ ದೂರುಗಳನ್ನು ಮಹೀಂದ್ರ ಗಂಭೀರವಾಗಿ ಪರಿಗಣಿಸಿ ಹೊಸ ಬೊಲೆರೊ ಹೊರತಂದಿದೆ. ಹಳೆಯ ಬೊಲೆರೊ ನಗರ ರಸ್ತೆಗಳಲ್ಲಿ ಕೊಂಚ ಸದ್ದು ಮಾಡುತ್ತಿತ್ತು. ಹೊಸ ಬೊಲೆರೊದಲ್ಲಿ ಇಂತಹ ಹಲವು ಸಮಸ್ಯೆಗಳಿಗೆ ಅಂತ್ಯ ಹಾಡಲಾಗಿದೆ. ಬೊಲೆರೊ ಡ್ರೈವಿಂಗ್ ಹೆಚ್ಚು ಅಹ್ಲಾದಕರವಾಗಿದೆ.


Click it and Unblock the Notifications








