ಫೋರ್ಡ್ ಫಿಯೆಸ್ಟಾ ಕಾರಿಗೆ 75 ಸಾವಿರ ರು. ಡಿಸ್ಕೌಂಟ್

ನೂತನ ಫಿಯೆಸ್ಟಾ ಪೆಟ್ರೋಲ್ ಆವೃತ್ತಿ ಸುಮಾರು 8.23 ಲಕ್ಷ ರು. ಮತ್ತು ಡೀಸೆಲ್ ಆವೃತ್ತಿ ದರ 9.27 ಲಕ್ಷ ರು. ಇದೆ. ಇದರ ಪ್ರತಿಸ್ಪರ್ಧಿ ಕಾರುಗಳಿಗೆ ಹೋಲಿಸಿದರೆ ಇದು ದುಬಾರಿ.
ಇಷ್ಟೇ ದರಕ್ಕೆ ಡೀಸೆಲ್ ಕಾರುಗಳು ಮಾರುಕಟ್ಟೆಯಲ್ಲಿ ದೊರಕುತ್ತಿವೆ. ಹೀಗಾಗಿ ನೂತನ ಫಿಯೆಸ್ಟಾ ಪೆಟ್ರೋಲ್ ಆವೃತ್ತಿಗೆ ಬೇಡಿಕೆ ಕಡಿಮೆಯಾಗಿತ್ತು. ಸದ್ಯ ಇಂಧನ ದರಗಳು ಗಗನಕ್ಕೆ ಏರುತ್ತಿರುವ ಹಿನ್ನಲೆಯಲ್ಲಿ ಹೆಚ್ಚು ಜನರು ಡೀಸೆಲ್ ಕಾರುಗಳತ್ತ ಮುಖ ಮಾಡುತ್ತಿದ್ದಾರೆ.
ಜನರು ಅಗ್ಗದ ಪೆಟ್ರೋಲ್ ಕಾರುಗಳಿಗಿಂತ ದುಬಾರಿ ಡೀಸೆಲ್ ಕಾರುಗಳನ್ನು ಖರೀದಿಸಲು ಸಿದ್ಧರಿದ್ದಾರೆ. ಆದರೆ ಕೇವಲ ಪೆಟ್ರೋಲ್ ಎಂಜಿನ್ ಹೊಂದಿರುವ ಕಾರು ಕಂಪನಿಗಳಿಗೆ ಗ್ರಾಹಕರ ಡೀಸೆಲ್ ಕಾರು ಬೇಡಿಕೆಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ.
ಇಂತಹ ಸಮಯದಲ್ಲಿ ಪೆಟ್ರೋಲ್ ಕಾರು ಕಂಪನಿಗಳಿಗೆ ಇರುವ ಆಯ್ಕೆಯೆಂದರೆ ದರ ತಗ್ಗಿಸುವುದು. ಇದೇ ಕಾರಣಕ್ಕೆ ಫೋರ್ಡ್ ಕಂಪನಿಯು ನೂತನ ಫಿಯೆಸ್ಟಾ ದರ ಕಳೆದ ಎರಡು ತಿಂಗಳಲ್ಲಿ 75 ಸಾವಿರ ರು.ನಷ್ಟು ಕಡಿಮೆಯಾಗಿದೆ.
ಇದಕ್ಕೂ ಮೊದಲು ಅಕ್ಟೋಬರ್ ತಿಂಗಳಲ್ಲಿ ಫಿಯೆಸ್ಟಾ ದರವನ್ನು 50 ಸಾವಿರ ರು. ಇಳಿಕೆ ಮಾಡಿತ್ತು. ಇದೀಗ 25 ಸಾವಿರ ರು.ನಷ್ಟು ಇಳಿಕೆ ಮಾಡಿದೆ. ಈಗ ಫಿಯೆಸ್ಟಾ ಕಾರು ಕೊಳ್ಳುವರಿಗೆ ಒಟ್ಟಾರೆ 75 ಸಾವಿರ ರು. ಕಡಿಮೆ ದರಕ್ಕೆ ಹೊಸ ಫಿಯೆಸ್ಟಾ ಕಾರು ದೊರಕಲಿದೆ.


Click it and Unblock the Notifications