ರೋಲ್ಸ್ ರಾಯ್ಸ್ ಘೋಸ್ಟ್ ಖರೀದಿಸಿದ ನಿರ್ದೇಶಕ ಶಂಕರ್
ಈ ಕಾರನ್ನು ಆರ್‌ಟಿಒ ಕಚೇರಿಯಲ್ಲಿ ಎಲ್ಲರೂ ಕುತೂಹಲದಿಂದ ನೋಡುತ್ತಿದ್ದರು. ಆದರೆ ಹೆಚ್ಚಿನವರಿಗೆ ಇದು ಯಾರ ಕಾರೆಂದು ಗೊತ್ತಿರಲಿಲ್ಲ. ಯಾಕೆಂದರೆ ಅಲ್ಲಿಗೆ ಶಂಕರ್ ಬಂದಿರಲಿಲ್ಲ. ಮಕ್ಕಳು, ಯುವಕರು ಮಾತ್ರವಲ್ಲದೇ ಹಿರಿಯ ಅಧಿಕಾರಿಗಳೂ ಕೂಡ ಈ ಕಾರನ್ನು ಟಚ್ ಮಾಡಿ ನೋಡಿ ಖುಷಿಪಡುತ್ತಿದ್ದರು.
ರೋಲ್ಸ್ ರಾಯ್ಸ್ ಘೋಸ್ಟ್ ಕಾರಿನ ದರ 1.25 ಕೋಟಿ ರುಪಾಯಿ. ಆದರೆ ಆಮದು ಸುಂಕ ದುಬಾರಿಯಾಗಿರುವ ಹಿನ್ನಲೆಯಲ್ಲಿ ಇಲ್ಲಿಗೆ ತಲುಪುವಾಗ ಘೋಸ್ಟ್ ದರ ಸುಮಾರು 3.45 ಕೋಟಿ ರು. ಆಗುತ್ತದೆ. ಅಂದರೆ ಶಂಕರ್ ಸುಮಾರು 1.75 ಕೋಟಿ ರುಪಾಯಿ ಆಮದು ಸುಂಕ ಪಾವತಿಸಿದ್ದಾರೆ. ರಿಜಿಸ್ಟ್ರೇಷನ್ ಶುಲ್ಕ 45 ಲಕ್ಷ ರುಪಾಯಿ ಪಾವತಿಸಿದ್ದಾರೆ. ಜೊತೆಗೆ ಕೆಲವು ಲಕ್ಷ ರುಪಾಯಿಯನ್ನು ಫ್ಯಾನ್ಸಿ TN09 BQ 0008 ನಂಬರ್ ಪ್ಲೇಟಿಗಾಗಿ ವ್ಯಯಿಸಿದ್ದಾರೆ.
ಘೋಸ್ಟ್ ಕಾರು ಹೊಂದಿರುವ ಬೆರಳೆಣಿಕೆಯ ಭಾರತೀಯರ ಗುಂಪಿಗೆ ಈ ಮೂಲಕ ಶಂಕರ್ ಸೇರ್ಪಡೆಯಾಗಿದ್ದಾರೆ. ದೇಶದಲ್ಲಿ ಅಮಿತಾಬ್ ಬಚ್ಚನ್, ಅಮಿರ್ ಖಾನ್, ನಿರ್ದೇಶಕ ವಿನೋದ್ ಛೋಪ್ರಾ ಮತ್ತು ಸಂಜಯ್ ದತ್ತ ಮುಂತಾದವರಲ್ಲಿ ಘೋಸ್ಟ್ ಕಾರಿದೆ. ಇತ್ತೀಚೆಗೆ ಮಲ್ಲಿಕಾ ಶೆರಾವತ್ ಈ ಕಾರು ಖರೀದಿಸಲು ಬಯಸಿದ್ದಾಗ ಕಾರು ಕಂಪನಿಯೇ ನಿಮಗೆ ಕೊಡುವುದಿಲ್ಲವೆಂದು ಹೇಳಿ "ಘನತೆ" ಮೆರೆದಿತ್ತು.
ರೋಲ್ಸ್ ರಾಯ್ಸ್ ಕಾರುಗಳನ್ನು ಈ ಹಿಂದೆ ಭಾರತದ ರಾಜಮಹಾರಾಜರುಗಳು ಖರೀದಿಸುತ್ತಿದ್ದರು. ಇದೀಗ ಬ್ರಾಂಡ್ ಇಮೇಜಿಗೆ ಕುತ್ತಾಗದಂತೆ ಪ್ರಮುಖ ಸೆಲೆಬ್ರಿಟಿ ಮತ್ತು ಉದ್ಯಮಿಗಳಿಗೆ ಘೋಸ್ಟ್ ಕಾರುಗಳನ್ನು ಮಾರಾಟ ಮಾಡುತ್ತಿದೆ. ಇದೀಗ ಕಂಪನಿಯು ದೇಶದಲ್ಲಿ ಪಂಟೊಮ್ ಮತ್ತು ಘೋಸ್ಟ್ ಕಾರುಗಳನ್ನು ಮಾತ್ರ ಮಾರಾಟ ಮಾಡುತ್ತಿದೆ.


Click it and Unblock the Notifications









