ಮಹೀಂದ್ರ XUV500: ಈ ತಿಂಗಳು ಬುಕ್ಕಿಂಗ್ ಪುನಾರಂಭ

ಕಂಪನಿಯು ನೂತನ XUV500 ಪರಿಚಯಿಸಿದ ಒಂದು ವಾರದಲ್ಲಿ 8 ಸಾವಿರಕ್ಕೂ ಹೆಚ್ಚು ಜನರು ಬುಕ್ಕಿಂಗ್ ಮಾಡಿದ್ದರು. ಕಂಪನಿಯು ಈ ಕಾರನ್ನು ದೇಶದ ಐದು ರಾಜ್ಯಗಳಲ್ಲಿ ಹೊರತಂದಿತ್ತು. ಹೆಚ್ಚು ಜನರು ಈ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಬುಕ್ಕಿಂಗ್ ಮಾಡಿದ ಕಾರಣ ಕಂಪನಿಯು ತಕ್ಷಣ ಬುಕ್ಕಿಂಗ್ ಸ್ಥಗಿತಗೊಳಿಸಿತು.
ಇದೀಗ 2012ರ ಜನವರಿ 25ರಿಂದ ಮತ್ತೆ ಬುಕ್ಕಿಂಗ್ ಪುನಾರಂಭಿಸುವುದಾಗಿ ಕಂಪನಿ ತಿಳಿಸಿದೆ. ಆದರೆ ಕಂಪನಿಯು ಕೇವಲ ಹತ್ತು ದಿನಗಳ ಕಾಲ ಮಾತ್ರ ಬುಕ್ಕಿಂಗ್ ಮಾಡಲು ಅವಕಾಶ ನೀಡಲಿದೆ. ಫೆಬ್ರವರಿ ಐದರಿಂದ ಬುಕ್ಕಿಂಗ್ ನಿಲ್ಲಿಸುವ ನಿರೀಕ್ಷೆಯಿದೆ. ಇದೀಗ ದೇಶದ 19 ನಗರಗಳಲ್ಲಿ ಬುಕ್ಕಿಂಗ್ ಆರಂಭಿಸಲಿದೆ.
ಸುಮಾರು 19 ನಗರಗಳಲ್ಲಿ ಬುಕ್ಕಿಂಗ್ ಆರಂಭವಾಗುವ ಕಾರಣ ಹೆಚ್ಚು ಜನರು ಮುಗಿಬೀಳುವುದು ಗ್ಯಾರಂಟಿ. ಇದಕ್ಕಾಗಿ ಕಂಪನಿಯು ಲಕ್ಕಿ ಡ್ರಾ ಕೂಪನ್ ಆರಂಭಿಸಲಿದೆಯಂತೆ. ಅಂದರೆ ಬುಕ್ಕಿಂಗ್ ಮಾಡಿದವರಲ್ಲಿ ಅದೃಷ್ಟವಂತರಿಗೆ ಎಕ್ಸ್ ಯುವಿ ಕಾರನ್ನು ಖರೀದಿಸುವ ಅವಕಾಶ ದೊರಕಲಿದೆ.
ಮಹೀಂದ್ರ ಕಂಪನಿಯು ಚಕನ್ ಘಟಕದಲ್ಲಿ ಉತ್ಪಾದನೆ ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಇದೀಗ ಪ್ರತಿತಿಂಗಳು 2,750 XUV500 ಉತ್ಪಾದಿಸುತ್ತಿದೆ. ಏಪ್ರಿಲ್ ತಿಂಗಳ ನಂತರ ಈ ಸಂಖ್ಯೆಯನ್ನು ಪ್ರತಿತಿಂಗಳಿಗೆ 4 ಸಾವಿರ ಯುನಿಟ್ ಗೆ ಹೆಚ್ಚಿಸಲು ಕಂಪನಿ ನಿರ್ಧರಿಸಿದೆ. ಇದರೊಂದಿಗೆ ಕಂಪನಿಯು ಮುಂದಿನ ವರ್ಷದಿಂದ ಈ ಸ್ಪೋರ್ಟ್ ಯುಟಿಲಿಟಿ ವೆಹಿಕಲನ್ನು ಯುರೋಪ್ ದೇಶಗಳಿಗೆ ರಫ್ತು ಮಾಡುವ ಯೋಜನೆಯನ್ನೂ ಹೊಂದಿದೆ.
ಮಹೀಂದ್ರ XUV500 ಎಸ್ ಯುವಿ 2.2 ಲೀಟರಿನ ಟರ್ಬೊ ಡೀಸೆಲ್ ಎಂಜಿನ್ ಹೊಂದಿದ್ದು 140 ಅಶ್ವಶಕ್ತಿ ನೀಡುತ್ತದೆ. ಇದು ಈಗ W6 2WD, W8 2WD ಮತ್ತು W8 AWD ಆವೃತ್ತಿಗಳಲ್ಲಿ ದೊರಕುತ್ತಿದೆ. ನೂತನ XUV500 ಟಾಪ್ ಎಂಡ್ ಆವೃತ್ತಿ ದರವನ್ನು ಇತ್ತೀಚೆಗೆ ಕಂಪನಿಯು ಸುಮಾರು 55 ಸಾವಿರ ರು.ನಷ್ಟು ಹೆಚ್ಚಿಸಿತ್ತು.


Click it and Unblock the Notifications








