ಮರ್ಸಿಡಿಸ್ ಕಾರ್ ಖರೀದಿಸಿ, ಮೈಕಲ್ ಶೂಮಾಕರ್ ಭೇಟಿಯಾಗಿ
ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ತನ್ನ ಗ್ರಾಹಕರಿಗೆ ಹೊಸ ಹಬ್ಬದ ಕೊಡುಗೆಗಳನ್ನು ಪ್ರಕಟಿಸಿದೆ. ಮರ್ಸಿಡಿಸ್ ಬೆಂಝ್ ಕಾರು ಖರೀದಿಸುವರಿಗೆ ಫಾರ್ಮುಲಾ ಒನ್ ರೇಸ್‌ನಲ್ಲಿ ಅತ್ಯಧಿಕ ಚಾಂಪಿಯನ್‌ಷಿಪ್ ಗಳಿಸಿದ ಮೈಕಲ್ ಶೂಮಾಕರ್ ಭೇಟಿಯಾಗುವ ಅವಕಾಶವನ್ನು ನೀಡಿದೆ.
ಇಷ್ಟು ಮಾತ್ರವಲ್ಲದೇ ಆ ಗ್ರಾಹಕರಿಗೆ ಫಾರ್ಮುಲಾ ಒನ್ ರೇಸ್ ನೋಡಲು ಅವಕಾಶ ನೀಡಲಿದೆ. ಫಾರ್ಮುಲಾ ಒನ್ ರೇಸ್ ವೀಕ್ಷಣೆಗೆ ಗ್ರಾಹಕರಿಗೆ ತಗಲುವ ಪ್ರಯಾಣ ವೆಚ್ಚ ಸೇರಿದಂತೆ ಇತರೆ ವೆಚ್ಚಗಳನ್ನು ಕಂಪನಿ ಭರಿಸಲಿದೆ.
ಜೊತೆಗೆ ಮರ್ಸಿಡಿಸ್ ಬೆಂಝ್ ಶೋರೂಂಗೆ ಭೇಟಿ ನೀಡಿ ಕಾರೊಂದನ್ನು ಟೆಸ್ಟ್ ಡ್ರೈವ್ ಮಾಡುವ ಸುಮಾರು 100 ಗ್ರಾಹಕರಿಗೆ 2012 ಏರ್‌ಟೆಲ್ ಇಂಡಿಯಾ ಗ್ರಾಂಡ್ ಪ್ರಿಕ್ಸ್‌ನ ಗ್ರಾಂಡ್ ಸ್ಟಾಂಡ್ ಟಿಕೇಟ್ ಉಡುಗೊರೆ ದೊರಕಲಿದೆ.
ಮರ್ಸಿಡಿಸ್ ಬೆಂಝ್ ಇಂಡಿಯಾದ ನೂತನ ಹಬ್ಬದ ಆಫರ್ ಸೆಪ್ಟೆಂಬರ್ ಒಂದರಿಂದ ಆರಂಭವಾಗಿದ್ದು, ಅಕ್ಟೋಬರ್ 15ರವರೆಗೆ ಇರಲಿದೆ. ಈ ಸಮಯದಲ್ಲಿ ಕಾರು ಖರೀದಿಸಿದ ಮತ್ತು ಟೆಸ್ಟ್ ಡ್ರೈವ್ ಮಾಡಿದ ಗ್ರಾಹಕರಿಗೆ ಈ ಆಫರ್ ಅನ್ವಯವಾಗಲಿದೆ.
"ಕಾರು ಮತ್ತು ರೇಸ್ ಅಭಿಮಾನಿಗಳಿಗೆ ಇಷ್ಟವಾಗುವಂತಹ ಆಕರ್ಷಕ ಉಡುಗೊರೆಯನ್ನು ಈ ಹಬ್ಬದ ಅವಧಿಯಲ್ಲಿ ನೀಡಲಿದ್ದೇವೆ. ಕಾರು ರೇಸಿನ ದಂತಕಥೆ ಮೈಕಲ್ ಶೂಮಾಕರ್ ಭೇಟಿಯಾಗುವ ವಿರಳ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ" ಎಂದು ಕಂಪನಿಯ ಮಾರಾಟ ಮತ್ತು ಮಾರುಟಕ್ಟೆ ವಿಭಾಗದ ನಿರ್ದೇಶಕರು ಹೇಳಿದ್ದಾರೆ.
ನೂತನ ಆಫರ್ ಮರ್ಸಿಡಿಸ್ ಬೆಂಝ್ ಇಂಡಿಯಾದ ದೇಶದ ಎಲ್ಲಾ 31 ಶೋರೂಂಗಳಲ್ಲಿ ಲಭ್ಯವಿರಲಿದೆ. ಮರ್ಸಿಡಿಸ್ ಬೆಂಝ್ ಕಂಪನಿಯು ಇತ್ತೀಚೆಗೆ ಎಂ ಕ್ಲಾಸ್, ಆರ್350 ಡೀಸೆಲ್ ಸೇರಿದಂತೆ ಹಲವು ಐಷಾರಾಮಿ ಕಾರುಗಳನ್ನು ಪರಿಚಯಿಸಿತ್ತು.


Click it and Unblock the Notifications
