ಶೀಘ್ರದಲ್ಲಿ ಪೆಟ್ರೋಲ್ ದರ ಇಳಿಕೆ: ಪ್ರಣಬ್ ಭವಿಷ್ಯ

Posted By:
ಶೀಘ್ರದಲ್ಲಿ ಪೆಟ್ರೋಲ್ ದರ ಅಗ್ಗವಾಗುವ ಸೂಚನೆಯನ್ನು ದೇಶದ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ನೀಡಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆ ಕಾಣುವ ನಿರೀಕ್ಷೆಯನ್ನು ವಿಶ್ಲೇಷಕರು ವ್ಯಕ್ತಪಡಿಸಿದ್ದು, ಇದರಿಂದ ದೇಶದ ತೈಲ ಕಂಪನಿಗಳು ಪೆಟ್ರೋಲ್ ದರ ತಗ್ಗಿಸುವ ಒತ್ತಡಕ್ಕೆ ಸಿಲುಕಲಿವೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ.

ಇತ್ತೀಚೆಗೆ ಪೆಟ್ರೋಲ್ ದರ ದುಬಾರಿ ಮಾಡಿದ ಸರಕಾರದ ವಿರುದ್ಧ ರಾಜಕೀಯ ಪಕ್ಷಗಳು ಮಾತ್ರವಲ್ಲದೇ ಜನಸಾಮಾನ್ಯರಿಂದಲೂ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಭಾರತ ಬಂದ್, ಹಲವು ಪ್ರತಿಭಟನೆಗಳ ನಂತರ ಸರಕಾರವು ಪೆಟ್ರೋಲ್ ದರವನ್ನು 2 ರು.ನಷ್ಟು ತಗ್ಗಿಸಿ ಕೈತೊಳೆದುಕೊಂಡಿತು.

ದೇಶದ ಕೆಲವು ನಗರಗಳಲ್ಲಿ ಈಗ ಪೆಟ್ರೋಲ್ ದರ ಲೀಟರಿಗೆ 81 ರು. ಆಸುಪಾಸಿನಲ್ಲಿದೆ. ಇತ್ತೀಚೆಗೆ ಸರಕಾರವು ಪೆಟ್ರೋಲ್ ದರವನ್ನು 2 ರುಪಾಯಿಯಷ್ಟು ಇಳಿಕೆ ಮಾಡಿತ್ತು. ಆದರೂ ಪೆಟ್ರೋಲ್ ದರ ಗ್ರಾಹಕರ ಪಾಲಿಗೆ ಬಿಸಿತುಪ್ಟವಾಗಿದೆ.

ಪೆಟ್ರೋಲ್ ದರ ಕಡಿಮೆಯಾಗುವ ಕುರಿತು ಹಣಕಾಸು ಸಚಿವರ ಹೇಳಿಕೆಯಿಂದ ಗ್ರಾಹಕರು ಮತ್ತು ಕಾರು ಕಂಪನಿಗಳು ತುಸು ನಿರಾಳವಾಗಬಹುದು. ಮಾರುತಿ ಸುಜುಕಿ ಮತ್ತು ಹ್ಯುಂಡೈನಂತಹ ಬೃಹತ್ ಕಾರು ಕಂಪನಿಗಳು ಪೆಟ್ರೋಲ್ ಕಾರುಗಳ ಉತ್ಪಾದನೆ ತಗ್ಗಿಸುವ ಅನಿವಾರ್ಯ ಪರಿಸ್ಥಿತಿಗೆ ಸಿಲುಕಿವೆ.

ಇದೇ ಸಮಯದಲ್ಲಿ ಡೀಸೆಲ್ ಕಾರುಗಳಿಗೆ ಬೇಡಿಕೆಯು ಅವ್ಯಾಹತವಾಗಿ ಏರಿಕೆ ಕಾಣುತ್ತಿದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಡೀಸೆಲ್ ಕಾರುಗಳನ್ನು ಪೂರೈಕೆ ಮಾಡಲಾಗದೆ ಕಾರು ಕಂಪನಿಗಳು ಪರದಾಡುತ್ತಿವೆ. ಡೀಸೆಲ್ ಕಾರುಗಳು ಸರಕಾರದ ಕೆಂಗಣ್ಣಿಗೆ ಯಾವಾಗ ಗುರಿಯಾಗಬಹುದು ಎಂದು ಖಚಿತವಾಗಿ ಹೇಳಲಾಗದು. ಒಟ್ಟಾರೆ ಮಾರುಕಟ್ಟೆಯಲ್ಲಿನ ಈ ಏರುಪೇರು ಕಾರು ಕಂಪನಿಗಳನ್ನು ಗೊಂದಲಕ್ಕೆ ನೂಕಿವೆ.

ಎಲ್ಲಾದರೂ ಕೆಲವೇ ವಾರಗಳಲ್ಲಿ ಪೆಟ್ರೋಲ್ ದರ ಇಳಕೆ ಕಂಡರೆ ಪೆಟ್ರೋಲ್ ಕಾರುಗಳಿಗೆ ಬೇಡಿಕೆ ಹೆಚ್ಚಾಗಲಿದೆ. ಪೆಟ್ರೋಲ್ ದರ ಹೆಚ್ಚಾದಷ್ಟು ಡೀಸೆಲ್ ಕಾರುಗಳಿಗೆ ಬೇಡಿಕೆ ಏರಿಕೆ ಕಾಣುತ್ತಿದೆ ಎಂದು ಕಾರು ಕಂಪನಿಗಳು ಹೇಳಿವೆ. ಆದರೆ ಸದ್ಯದ ಉತ್ಪಾದನಾ ಸಾಮರ್ಥ್ಯ ಡೀಸೆಲ್ ಕಾರು ಪೂರೈಕೆಗೆ ಅಡ್ಡಗಾಲು ಹಾಕುತ್ತಿದೆ.

ಕಚ್ಚಾ ತೈಲಕ್ಕೆ ಅತ್ಯಧಿಕ ಬೇಡಿಕೆಯಿರುವ ಜಗತ್ತಿನ ಎರಡು ಬೃಹತ್ ದೇಶಗಳಾದ ಅಮೆರಿಕಾ ಮತ್ತು ಚೀನಾದ ಅರ್ಥವ್ಯವಸ್ಥೆಯ ಏರಿಳಿತವೂ ಕಚ್ಚ ತೈಲ ದರದ ಮೇಲೆ ಪರಿಣಾಮ ಬೀರಿದೆ. ಆದರೆ ಇದು ಶೀಘ್ರದಲ್ಲಿ ತಹಬದಿಗೆ ಬರಲಿದೆ ಎಂದು ವಿಶ್ಲೇಷಕರು ಅಂದಾಜಿಸಿರುವುದರಿಂದ ಕಚ್ಚಾ ತೈಲ ದರ ಇಳಿಕೆ ಕಾಣುವ ಸೂಚನೆಗಳಿವೆ.

English summary
Petrol prices which have seen a massive increase a and a slight drop in recent days might come down further according to union finance minister Pranab Mukherjee. The minister has stated that decreasing crude oil prices in the international market will ease the pressure on Indian oil companies helping them reduce petrol prices.
Story first published: Monday, June 11, 2012, 12:35 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark