ಟಾಟಾ ಮೋಟರ್ಸ್ ನಿರ್ದೇಶಕ ತೆಲಾಂಗ್ ನಿವೃತ್ತಿ
ಟಾಟಾ ಮೋಟರ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಪಿಎಂ ತೆಲಾಂಗ್ ನಿವೃತ್ತಿಯಾಗಿದ್ದಾರೆ. ಉದ್ಯೋಗ ವಯೋಮಿತಿ ದಾಟಿದ ಹಿನ್ನೆಲೆಯಲ್ಲಿ ಎಂಡಿ ಸ್ಥಾನ ಮತ್ತು ಕಂಪನಿಯ ಆಡಳಿತ ಮಂಡಳಿ ಹುದ್ದೆಯಿಂದ ಇವರು ಕೆಳಗಿಳಿದಿದ್ದಾರೆ.
ಇದೇ ಸಮಯದಲ್ಲಿ ಟಾಟಾ ಮೋಟರ್ಸ್ ಕಂಪನಿಯು ಇಬ್ಬರು ನೂತನ ಕಾರ್ಯನಿರ್ವಹಣಾ ನಿರ್ದೇಶಕರನ್ನು ನೇಮಿಸಿಕೊಂಡಿದೆ.
ಟಾಟಾ ಮೋಟರ್ಸ್ ಕಂಪನಿಯ ವಾಣಿಜ್ಯ ವಾಹನ ವ್ಯವಹಾರ ವಿಭಾಗದ ಅಧ್ಯಕ್ಷರಾಗಿದ್ದ ರವೀಂದ್ರ ಪಿಸ್ರೋಡಿ ಕಂಪನಿಯ ವಾಣಿಜ್ಯ ವಾಹನ ವಿಭಾಗದ ಕಾರ್ಯನಿರ್ವಹಕ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಇವರು ಐಐಟಿ ಮತ್ತು ಐಐಎಂ ಮಾಜಿ ವಿದ್ಯಾರ್ಥಿಯಾಗಿದ್ದು, ಕಳೆದ 30 ವರ್ಷಗಳಿಂದ ಮಾರಾಟ, ಮಾರುಕಟ್ಟೆ ಮತ್ತು ವ್ಯವಹಾರ ಅಭಿವೃದ್ಧಿ ವಿಭಾಗದಲ್ಲಿ ಅನುಭವ ಹೊಂದಿದ್ದಾರೆ ಎಂದು ಕಂಪನಿಯು ತಿಳಿಸಿದೆ.
ವಾಣಿಜ್ಯ ವಾಹನ ಅಭಿವೃದ್ಧಿ ವಿಭಾಗದ ಉಪಾಧ್ಯಕ್ಷರಾಗಿದ್ದ ಸತೀಶ್ ಬೊರ್ವಾಣ್ಕರನ್ನು ಕಂಪನಿಯ ಗುಣಮಟ್ಟ, ವೆಂಡರ್ ಅಭಿವೃದ್ಧಿ ಮತ್ತು ಕಾರ್ಯತಂತ್ರ ವಿಭಾಗದ ವ್ಯವಸ್ಥಾಪಕರಾಗಿ ನೇಮಕ ಮಾಡಿದೆ. ಇವರು ಕೂಡ ಕಾನ್ಪುರ ಐಐಟಿ ಹಳೆ ವಿದ್ಯಾರ್ಥಿಯಾಗಿದ್ದು, 1974ರಿಂದ ಟಾಟಾ ಮೋಟರ್ಸ್ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


Click it and Unblock the Notifications









