ಬೆಂಗ್ಳೂರಿನಲ್ಲಿ ಉಚಿತ ಟಿಂಟೆಡ್ ಗ್ಲಾಸ್ ಸ್ವಚ್ಛತಾ ಕ್ಯಾಂಪ್
ಬೆಂಗಳೂರಿನಲ್ಲಿ ಈ ಕಾನೂನು ಅನುಷ್ಠಾನಕ್ಕೆ ಕೆಲವು ದಿನಗಳ ಗಡುವು ನೀಡಲಾಗಿದೆ. ಮೇ 19ರ ನಂತರ ಯಾವುದೇ ಕಾರುಗಳು ಟಿಂಟೆಡ್ ಗ್ಲಾಸ್ ಬಳಕೆ ಮಾಡಿದ್ದರೆ ಅವರಿಗೆ ದಂಡ ವಿಧಿಸಲಾಗುವುದು ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.
ಆದರೆ ಹೆಚ್ಚಿನವರಿಗೆ ಈ ಟಿಂಟೆಡ್ ಗ್ಲಾಸ್ ತೆಗೆಯುವುದು ದೊಡ್ಡ ಸಮಸ್ಯೆಯಾಗಬಹುದು. ತಾವೇ ತೆಗೆದರೆ ಅದರಲ್ಲಿ ಕಲೆಗಳು ಉಳಿದುಕೊಳ್ಳಬಹುದು ಎನ್ನುವ ಭಯವೂ ಇದೆ. ಹೀಗಾಗಿ ಹೆಚ್ಚಿನವರು ವಾಹನ ಬಿಡಿಭಾಗ ಮಾರಾಟಗಾರರನ್ನು ಸಂಪರ್ಕಿಸುತ್ತಿದ್ದಾರೆ. ಆದರೆ ಬೆಂಗಳೂರಿನಲ್ಲಿ ಒಂದು ದಿನದ ಟಿಂಟೆಡ್ ಗ್ಲಾಸ್ ಸ್ವಚ್ಛತಾ ಕ್ಯಾಂಪನ್ನು ಬೆಂಗಳೂರು ಟ್ರಾಫಿಕ್ ಪೊಲೀಸರು ಆಯೋಜಿಸಿದ್ದಾರೆ. ಈ ಸೌಲಭ್ಯ ಮೇ 10ರಂದು ಮಾತ್ರ.
ಬೆಂಗಳೂರು ಟ್ರಾಫಿಕ್ ಪೊಲೀಸ್ ಪುಟದಲ್ಲಿ ಅಡಕ ಮಾಡಿರುವ ನೂತನ ಸುತ್ತೋಲೆಯಲ್ಲಿ ಟಿಂಟೆಡ್ ಗ್ಲಾಸ್ ಕ್ಲೀನ್ ಮಾಡುವ ಸೌಲಭ್ಯದ ಮಾಹಿತಿಯೂ ಇದೆ. ವಾಹನಗಳ ಮಾಲೀಕರು ಅಥವಾ ಚಾಲಕರುಗಳಿಗೆ ತಮ್ಮ ವಾಹನದ ಗಾಜುಗಳ ಮೇಲೆ ಲಗ್ಗತ್ತಿಸಿರುವ ಬೆಳಕು ನಿರ್ಬಂಧಕ ಫಿಲ್ಮ್ ಗಳನ್ನು ತೆಗೆಯಲು ಅನುಕೂಲವಾಗುವಂತೆ ಬೆಂಗಳೂರಿನ ಕೆಲವು ಕಡೆ ಕೇಂದ್ರಗಳನ್ನು ತೆರೆಯಲಾಗಿದೆ.
ಎಲ್ಲೆಲ್ಲಿ ಟಿಂಟೆಡ್ ಗ್ಲಾಸ್ ತೆಗೆಯುವ ಸೌಲಭ್ಯವಿದೆ?
* ಶಿವಾಜಿನಗರದ ಬಿಆರ್ ವಿ ಮೈದಾನ
* ಆಡುಗೋಡಿಯ ನಗರ ಸಶಸ್ತ್ರ ಮೀಸಲು ಪಡೆ(ದಕ್ಷಿಣ) ಮೈದಾನ
* ಮೈಸೂರು ರಸ್ತೆಯಲ್ಲಿರುವ ನಗರ ಸಶಸ್ತ್ರ ಮೀಸಲು ಪಡೆ(ಕೇಂದ್ರಸ್ಥಾನ) ಮೈದಾನ
* ಮಲ್ಲೇಶ್ವರಂ ಮೈದಾನ
* ಜಯನಗರದ ಮಾಧವನ್ ಪಾರ್ಕ್
* ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಟೋಲ್ ಪ್ಲಾಜಾ
* ಯಲಹಂಕ ಪೊಲೀಸ್ ಠಾಣೆ
* ಇಂದಿರನಗರದ ಬಿಡಿಎ ಕಾಂಪ್ಲೆಕ್ಸ್
* ಫ್ರೇಜರ್ ಟೌನಿನ ಎಂಎಂ ರಸ್ತೆಯಲ್ಲಿರುವ ಈಸ್ಟ್ ಪುಟ್ಬಾಲ್ ಮೈದಾನ
* ಕಂಠಿರವ ಕ್ರೀಡಾಂಗಣ
ಇದು ಸಂಪೂರ್ಣ ಉಚಿತ. ಸಾರ್ವಜನಿಕರು ಈ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಬೆಂಗಳೂರು ಟ್ರಾಫಿಕ್ ಪೊಲೀಸರು ಪ್ರಕಟಿಸಿರುವ ಸುತ್ತೋಲೆ ತಿಳಿಸಿದೆ.


Click it and Unblock the Notifications









