ಟಿಂಟೆಡ್ ಗ್ಲಾಸ್ ತೆಗೆಯುವಲ್ಲೂ ಗೋಲ್ ಮಾಲ್
ಈ ಕಾನೂನನ್ನು ದೆಹಲಿ, ಮುಂಬೈನಲ್ಲಿ ಈಗಾಗಲೇ ಅನುಷ್ಠಾನಕ್ಕೆ ತರಲಾಗಿದೆ. ಬೆಂಗಳೂರು ಟ್ರಾಫಿಕ್ ಪೊಲೀಸರು ಕಾರು ಮಾಲೀಕರಿಗೆ ಅಥವಾ ಚಾಲಕರಿಗೆ ಮೇ 19ರ ತನಕ ಗಡುವು ನೀಡಿದ್ದಾರೆ. ವಿಶೇಷವೆಂದರೆ ಬೆಂಗಳೂರು ಟ್ರಾಫಿಕ್ ಪೊಲೀಸರೇ ವಿವಿಧೆಡೆ ಟಿಂಟೆಡ್ ಗ್ಲಾಸ್ ತೆಗೆಯುವ ಕ್ಯಾಂಪ್ ತೆರೆದಿದ್ದಾರೆ.
ಆದರೆ ಎಲ್ಲಾ ಕಾರು ಮಾಲೀಕರು ಇಂತಹ ಕೇಂದ್ರಗಳಿಗೆ ಹೋಗುತ್ತಿಲ್ಲ. ಅವರೆಲ್ಲ ಖಾಸಗಿ ವೃತ್ತಿಪರರ ಮೂಲಕ ಟಿಂಟೆಡ್ ಗ್ಲಾಸ್ ತೆಗೆಸುತ್ತಾರೆ. ಟಿಂಟೆಡ್ ಗ್ಲಾಸ್ ತೆಗೆಯುವ ಟ್ರೆಂಡನ್ನು ಇಂತಹ ವೆಂಡರುಗಳು ಸದುಪಯೋಗ ಅಥವಾ ದುರುಪಯೋಗ ಮಾಡಿಕೊಳ್ಳುತ್ತಾರೆ.
ಹೆಚ್ಚಿನವರಿಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ಈ ಸೇವೆಯನ್ನು ಉಚಿತವಾಗಿ ಮಾಡುತ್ತಾರೆ ಎಂಬ ಅರಿವಿಲ್ಲ. ಇದರ ಲಾಭ ಪಡೆಯುವ ಇಂತಹ ವೆಂಡರುಗಳು ಶೀಘ್ರದಲ್ಲಿ ಟಿಂಟೆಡ್ ಗ್ಲಾಸ್ ತೆಗೆಯುವುದಾಗಿ ಹೇಳುತ್ತ 500 ರು.ನಿಂದ 800ರವರೆಗೆ ದರ ಪಡೆಯುತ್ತಾರೆ.
ಖಾಸಗಿ ವೆಂಡರುಗಳು ಕಾರಿನ ಗಾತ್ರಕ್ಕೆ ಅನುಗುಣವಾಗಿ ಶುಲ್ಕ ವಿಧಿಸುತ್ತಾರೆ. ಅಂದ್ರೆ ಹ್ಯಾಚ್ ಬ್ಯಾಕಿನಂತಹ ಸಣ್ಣಕಾರುಗಳಿಗೆ 500 ರುಪಾಯಿ, ದೊಡ್ಡದಾದ ಸೆಡಾನ್ ಕಾರುಗಳಿಗೆ 600 ರುಪಾಯಿ, ಟೊಯೊಟಾ ಇನ್ನೋವಾ, ಮಹೀಂದ್ರ ಕ್ಷೈಲೊ ಮುಂತಾದ ಮಲ್ಟಿ ಪರ್ಪೊಸ್ ವೆಹಿಕಲುಗಳಿಗೆ ಸುಮಾರು 800 ರುಪಾಯಿ ವಿಧಿಸಲಾಗುತ್ತಿದೆ.
ಈ ವೆಂಡರುಗಳು ಮತ್ತು ಪೊಲೀಸರು ಸ್ವೇಚ್ಛಾನುಸಾರ, ಮನಬಂದಂತೆ ಟಿಂಟೆಡ್ ಗ್ಲಾಸ್ ತೆಗೆಯುತ್ತಾರೆ. ಟಿಂಟೆಡ್ ಗ್ಲಾಸ್ ಪಾರದರ್ಶಕತೆಯ ಪ್ರಮಾಣ ಪರೀಕ್ಷಿಸಲು ಯಾವುದೇ ಸಾಧನವನ್ನು ಹೆಚ್ಚಿನವರು ಬಳಸುತ್ತಿಲ್ಲ. ಯಾವ ರೀತಿಯ ಸನ್ ಗ್ಲಾಸ್ ತೆಗೆಯಬೇಕೆಂದು ಸ್ಪಷ್ಟವಾಗಿರದ ಕಾರಣ ನಾವು ಎಲ್ಲಾ ಬಗೆಯ ಫಿಲ್ಮ್ ಗ್ಲಾಸ್ ತೆಗೆಯುತ್ತಿರುವುದಾಗಿ ನಮಗೆ ಟ್ರಾಫಿಕ್ ಪೊಲೀಸರೊಬ್ಬರು ತಿಳಿಸಿದ್ದಾರೆ.
ಟ್ರಾಫಿಕ್ ಪೊಲೀಸರು ಆಯೋಜಿಸಿದ ಕೆಲವು ಕ್ಯಾಂಪ್ ಗಳಿಗೆ ನಾವೂ ಹೋಗಿದ್ದೇವು. ಅಲ್ಲಿ ಹೆಚ್ಚಿನ ವಾಹನ ಮಾಲೀಕರ ಮುಖದಲ್ಲಿ ಅಸಮಧಾನ ಹೊಗೆಯಾಡುತ್ತಿತ್ತು. ಕೇರ್ ಲೆಸ್ಸಾಗಿ ಗ್ಲಾಸ್ ತೆಗೆಯುತ್ತಾರೆ ಎಂದು ವಾಹನ ಮಾಲೀಕರೊಬ್ಬರು ನಮ್ಮಲ್ಲಿ ಅವಲತ್ತುಕೊಂಡರು. ಕೆಲವು ಕಡೆ ಬ್ಲೇಡ್ ಮೂಲಕ ಟಿಂಟೆಡ್ ಗ್ಲಾಸ್ ತೆಗೆಯಲಾಗುತ್ತಿತ್ತು. ಕಾರಿನ ಕಿಟಕಿಗೆ ಗೀರು ಬಿದ್ದರೆ ಕೇಳುವಂತಿಲ್ಲ. ವಾರಾಂತ್ಯವಾದ ಕಾರಣ ಹೆಚ್ಚು ಹೆಚ್ಚು ಜನರು ಆಗಮಿಸುವುದೂ ಕೂಡ ಇಂತಹ ಸಮಸ್ಯೆಗೆ ಪ್ರಮುಖ ಕಾರಣ.
ಇದರ ಲಾಭ ಪಡೆಯಲು ಕೆಲವು ಖಾಸಗಿ ವೆಂಡರುಗಳು ಗೋಲ್ ಮಾಲ್ ಮಾಡುತ್ತಿದ್ದಾರೆ.


Click it and Unblock the Notifications









