ಕಾರು ಖರೀದಿಸಿ; ಇಎಂಐ ಕಟ್ಟುವ ಚಿಂತೆ ಬಿಟ್ಟುಬಿಡಿ!
ಅನೇಕ ಗ್ರಾಹಕರಿಗೆ ನೂತನ ಕಾರು ಖರೀದಿ ವೇಳೆ ಡೌನ್ ಪೇಮೆಂಟ್‌ಗಿಂತಲೂ ಸಮಾನ ಮಾಸಿಕ ಕಂತು (ಇಎಂಐ) ಪಾವತಿಸುವುದೇ ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ.
ಹಾಗಿದ್ದರೆ ಇನ್ನು ಮುಂದೆ ಅಂತಹ ಯಾವುದೇ ಚಿಂತೆ ಬೇಡ ಬಿಡಿ. ಡ್ರೀಮರ್ಸ್ ಮೀಡಿಯಾ ಆಂಡ್ ಅಡ್ವೆರ್ಟೈಸಿಂಗ್ (ಜಾಹೀರಾತು) ಹೊಸ ಯೋಜನೆಯೊಂದಿಗೆ ಮುಂದೆ ಬಂದಿದ್ದು, ಗ್ರಾಹಕರು ಇಎಂಐ ಕಟ್ಟುವ ಚಿಂತೆಯನ್ನು ಬಿಟ್ಟುಬಿಡಬಹುದು.
ನೀವೇನು ಮಾಡಬೇಕು?
ನೀವು ನೂತನ ಕಾರು ಖರೀದಿಸಲು ಬಯಸಿದ್ದೇ ಆದ್ದಲ್ಲಿ ಡ್ರೀಮ್ ಮೀಡಿಯಾ ನಿಮ್ಮ ನೆರವಿಗೆ ಬರಲಿದೆ. ಅಂದರೆ ಗರಿಷ್ಠ ಆರು ಲಕ್ಷ ರು. ಬಜೆಟ್‌ನೊಳಗೆ (ಆನ್ ರೋಡ್ ದರ) ಕಾರು ಖರೀದಿ ವೇಳೆ ಆರಂಭದಲ್ಲಿ ಶೇಕಡಾ 25ರಷ್ಟು ಮೊತ್ತವನ್ನು ಡೌನ್ ಪೇಮೆಂಟ್ ಮಾಡಬೇಕಾಗುತ್ತದೆ.
ನಿಮಗೇನು ಲಾಭ?
ಉಳಿದ ಮೊತ್ತವನ್ನು ಐದು ವರ್ಷಗಳ ಅವಧಿಯಲ್ಲಿ ಇಎಂಐ ಮೂಲಕ ಪಾವತಿಸಿದರೆ ಸಾಕು. ಆದರೆ ಇಲ್ಲಿ ಆಸಕ್ತಿದಾಯಕ ವಿಚಾರ ಏನೆಂದರೆ ಮೊದಲ ಮೂರು ವರ್ಷಗಳ ಅವಧಿಯ ಇಎಂಐ ಡ್ರೀಮ್ ಮೀಡಿಯಾ ಕಂಪನಿ ಭರಿಸಲಿದೆ. ಅಂದರೆ ಮೂರು ವರ್ಷಗಳಿಗೆ ಇಎಂಐ ಚಿಂತೆಯನ್ನು ಸಂಪೂರ್ಣವಾಗಿ ಬಿಟ್ಟುಬಿಡಬಹುದು.
ನಿಮಗೇನು ನಷ್ಟ?
ಸುಮ್ ಸುಮ್ನೆ ಕಂಪನಿ ಇಎಂಐ ಭರಿಸಲು ಮುಂದಾಗುತ್ತಿಲ್ಲ. ಬದಲಾಗಿ ಕಾರಿನ ಹೊರಭಾಗದ ಶೇಕಡಾ 40ರಿಂದ 60ರಷ್ಟು (ಚಿತ್ರದಲ್ಲಿ ತೋರಿಸಿರುವಂತೆಯೇ) ಭಾಗವನ್ನು ಜಾಹೀರಾತಿಗಾಗಿ ಬಳಸಿಕೊಳ್ಳಲಿದೆ. ಕಂಪನಿಯು ಮತ್ತೊಂದು ಷರತ್ತು ಕೂಡಾ ಮುಂದಿರಿಸುತ್ತಿದ್ದು, ಕಾರು ಖರೀದಿ ಮಾಡುವ ಗ್ರಾಹಕ ಪ್ರತಿ ತಿಂಗಳು ಕನಿಷ್ಠ 1500 ಕೀ.ಮೀ. ದೂರ ಸಂಚರಿಸಬೇಕಾಗುತ್ತದೆ.
ಒಟ್ಟಾರೆಯಾಗಿ ನಾವು ಟ್ಯಾಕ್ಸಿಗಳಲ್ಲಿ ನೋಡಿರುವಂತೆಯೇ ಕಾರಿನಲ್ಲಿ ಜಾಹೀರಾತು ಕಾಣಿಸಿಕೊಳ್ಳಲಿದೆ. ಇದು ಡ್ರೀಮರ್ಸ್ ಮೀಡಿಯಾಗೆ ಹೆಚ್ಚು ಲಾಭ ಗಿಟ್ಟಿಸಿಕೊಳ್ಳಲು ನೆರವಾಗಲಿದೆ. ಆದರೆ ಪ್ರಾಯೋಗಿಕವಾಗಿ ಈ ಸ್ಕೀಮ್ ಹೇಗೆ ಕೆಲಸ ಮಾಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ನೀವೇನಂತೀರಾ..?


Click it and Unblock the Notifications









