ದೇಶಕ್ಕೆ ನಾವೇ ಪ್ರಥಮ; ಬೆಂಗ್ಳೂರಿಗೆ ಅಪ್ಪಳಿಸಲಿದೆ ಹೈಬ್ರಿಡ್ ಬಸ್ಸು
ಹೌದು, ಭಾರತೀಯ ವಾಹನ ಇತಿಹಾಸದಲ್ಲೇ ಇದೇ ಮೊದಲ ಬಾರಿಯೆಂಬಂತೆ ಉದ್ಯಾನಗರಿ ಬೆಂಗಳೂರಿನಲ್ಲಿ ಹೈಬ್ರಿಡ್ ಬಸ್ಸುಗಳ ಪರಿಚಯವಾಗಲಿದೆ. ಈ ಮಹತ್ತರ ಯೋಜನೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಕೈಹಾಕಿದೆ.
ಏನಿದು ಹೈಬ್ರಿಡ್ ಬಸ್ಸು...?
ವಾಹನಗಳನ್ನು ಚಾಲನೆ ಮಾಡಲು ಒಂದು ಅಥವಾ ಒಂದಕ್ಕಿಂತ ಹೆಚ್ಚು ಭಿನ್ನ ಶಕ್ತಿಯ ಮೂಲಗಳನ್ನು ಬಳಸುವ ವಾಹನಗಳನ್ನು ಹೈಬ್ರಿಡ್ ವಾಹನಗಳು ಎಂದು ಕರೆಯುತ್ತೇವೆ. ಬಹು ಸಾಮಾನ್ಯವಾಗಿ ಬಳಸಲ್ಪಡುವ ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳು ಒಂದು ಅಂತರ್ ದಹನ ಯಂತ್ರ ಹಾಗೂ ಒಂದು ಅಥವಾ ಒಂದಕ್ಕಿಂತ ಹೆಚ್ಚು ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಒಳಗೊಂಡಿರುತ್ತದೆ. ಇದು ಹೆಚ್ಚು ಪರಿಸರ ಸ್ನೇಹಿ, ಕಡಿಮೆ ಪಯಣ ವೆಚ್ಚ ಹಾಗೂ ಗರಿಷ್ಠ ಇಂಧನ ಕ್ಷಮತೆಯನ್ನು ನೀಡಲಿದೆ. (ವಿ.ಸೂ: ಕೆಳಗಡೆ ಸಾಂದರ್ಭಿಕ ಚಿತ್ರಗಳ ಬಳಕೆ)
ಇವನ್ನೂ ಓದಿ: ವೋಲ್ವೋ ಬಸ್ ಪಯಣ ಸುರಕ್ಷಿತವೇ..?

ಪ್ರಯೋಗಾರ್ಥವಾಗಿ ಜಾರಿಗೆ
ಆರಂಭದಲ್ಲಿ ಪ್ರಯೋಗಾರ್ಥವಾಗಿ 50ರಷ್ಟು ಹೈಬ್ರಿಡ್ ಬಸ್ಸುಗಳು ಬೆಂಗಳೂರು ರಸ್ತೆಗಳಲ್ಲಿ ಓಡಾಡಲಿದೆ. ಈ ಮೂಲಕ ಇಡೀ ದೇಶದಲ್ಲೇ ಪ್ರಪ್ರಥಮ ಬಾರಿಗೆ ಹೈಬ್ರಿಡ್ ಬಸ್ಸುಗಳನ್ನು ಪರಿಚಯಿಸಿದ ಹಿರಿಮೆಗೆ ಬಿಎಂಟಿಸಿ ಪಾತ್ರವಾಗಲಿದೆ.

ಪರಿಸರ ಸ್ನೇಹಿ, ಡೀಸೆಲ್ ಉಳಿತಾಯ, ಹೆಚ್ಚು ಇಂಧನ ಕ್ಷಮತೆ
ಮೂಲಗಳ ಪ್ರಕಾರ ಈ ಹೈಬ್ರಿಡ್ ಬಸ್ಸುಗಳು ಶೇಕಡಾ 30ರಷ್ಟು ಡೀಸೆಲ್ ಉಳಿಸಲು ನೆರವಾಗುವುದಲ್ಲದೇ ಹೆಚ್ಚು ಪರಿಸರ ಸ್ನೇಹಿ ಎನಿಸಿಕೊಳ್ಳಲಿದೆ. ಹಾಗೆಯೇ ಇಂಧನ ಕ್ಷಮತೆ ಹೆಚ್ಚಿಸಲು ನೆರವಾಗಲಿದೆ.

ಹೇಗೆ ಕಾರ್ಯನಿರ್ವಹಿಸುತ್ತದೆ?
ಪ್ರಸ್ತುತ ಬಸ್ಸುಗಳು ಶೇ. 70ರಷ್ಟು ಡೀಸೆಲ್ ಹಾಗೂ ಶೇಕಡಾ 30ರಷ್ಟು ಬ್ಯಾಟರಿಯಿಂದ ಓಡಾಡಲಿದೆ. ಡೀಸೆಲ್‌ನಿಂದ ಓಡಲಿರುವ ಬಸ್ಸು ಚಾಲನೆ ವೇಳೆಯಲ್ಲಿ ಬ್ಯಾಟರಿಗೆ ಚೈತನ್ಯ ತುಂಬಲಿದೆ. ಬ್ಯಾಟರಿ ಸಂಪೂರ್ಣ ಚಾರ್ಜ್ ಆದ ಬಳಿಕ ಸ್ವಯಂಚಾಲಿತವಾಗಿ ಬ್ಯಾಟರಿ ಮೋಡ್‌ಗೆ ವರ್ಗಾವಣೆಯಾಗಲಿದೆ. ಬ್ಯಾಟರಿ ಚಾರ್ಜ್ ಕಡಿಮೆಯಾದ ವೇಳೆ ಮತ್ತೆ ಮೊದಲಿನ ಹಾಗೆ ಡೀಸೆಲ್ ಮೋಡ್‌ಗೆ ಬದಲಾಗಲಿದೆ. ಇದರಿಂದ ಹೆಚ್ಚೆಚ್ಚು ಡೀಸೆಲ್ ಉಳಿತಾಯ ಮಾಡಲು ನೆರವಾಗಲಿದೆ.

ಎಷ್ಟು ದೂರ ಸಾಗಬಲ್ಲದು?
ಸಂಪೂರ್ಣ ಚಾರ್ಜ್ ಮಾಡಿಸಿದ ಬ್ಯಾಟರಿಯಲ್ಲಿ ಬಸ್ಸು ಆರರಿಂದ ಎಂಟು ತಾಸುಗಳಷ್ಟು ಕಾಲ ಅಂದರೆ 280 ಕೀ.ಮೀ. ದೂರದ ವರೆಗೆ ಸರಾಗವಾಗಿ ಸಾಗಬಲ್ಲದು. ಅಂದರೆ ಬೆಂಗಳೂರು ನಗರದ ದೃಷ್ಟಿಕೋನದಲ್ಲಿ ಇದು ಸಾಕಾಷ್ಟಗಿದೆ.

ಜೆ ನರ್ಮ್ ಯೋಜನೆ
ಜವಹರಲಾಲ್ ನೆಹರು ರಾಷ್ಟ್ರೀಯ ನಗರ ಪುರುಜ್ಜೀವನ ಮಿಷನ್ ( JnNURM ) ಯೋಜನೆಯಡಿಯಲ್ಲಿ ಈ ಎಲ್ಲ ಬಸ್ಸುಗಳನ್ನು ಕೇಂದ್ರ ಸರಕಾರ ರಾಜ್ಯಕ್ಕೆ ಒದಗಿಸುತ್ತಿದೆ.

ಎಸಿ ಸೌಲಭ್ಯ, ವೋಲ್ವೋಬಸ್
ಈ ಹೈಬ್ರಿಡ್ ವೋಲ್ವೋ ಬಸ್ಸುಗಳು ಸಂಪೂರ್ಣ ಹವಾ ನಿಯಂತ್ರಿತವಾಗಿರಲಿದ್ದು, 34 ಆಸನಗಳನ್ನು ಹೊಂದಿರಲಿದೆ. ಹಾಗೆಯೇ ಇದರ ದರ 1.2ರಿಂದ 1.3 ಕೋಟಿ ರು.ಗಳಷ್ಟು ದುಬಾರಿಯಾಗಿರಲಿದೆ. ಪ್ರಸ್ತುತ ಬಸ್ ಪ್ರತಿ ಗಂಟೆಗೆ 90 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಇಂಧನ ಉಳಿತಾಯ
ಭಾರತ ಶೇಕಡಾ 80ರಷ್ಟು ಇಂಧನವನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದೆ. ಈ ಪೈಕಿ ಸಾರಿಗೆ ವ್ಯವಸ್ಥೆಗಾಗಿ ಶೇಕಡಾ 50ರಷ್ಟು ಡೀಸೆಲ್ ವ್ಯಯವಾಗುತ್ತಿದೆ. ಇನ್ನು ಕರ್ನಾಟಕವನ್ನು ಪರಿಗಣಿಸಿದಾಗ ವರ್ಷಂಪ್ರತಿ ಸರ್ಕಾರಿ ಬಸ್ಸುಗಳಿಗಾಗಿ 54 ಕೋಟಿ ಲೀಟರ್ ವಿನಿಯೋಗಿಸಲಾಗುತ್ತಿದ್ದು, ಬರೋಬ್ಬರಿ 3,161 ಕೋಟಿ ರು.ಗಳನ್ನು ಖರ್ಚು ಮಾಡುತ್ತಿದೆ. ಇಂತಹ ಬಸ್ಸುಗಳ ಸರಾಸರಿ ಮೈಲೇಜ್ ಪ್ರತಿ ಲೀಟರ್‌ಗೆ 4.42 ಕೀ.ಮೀ. ಆಗಿದೆ. ಹಾಗಾಗಿ ನೂತನ ಹೈಬ್ರಿಡ್ ಬಸ್ಸುಗಳು ತುಂಬಾನೇ ಸಹಕಾರಿಯಾಗಿರಲಿದೆ.


Click it and Unblock the Notifications