2014 ಇಂಡಿಯನ್ ಗ್ರ್ಯಾನ್ ಪ್ರಿ ರದ್ದಾಗುವ ಸಾಧ್ಯತೆ?
2011ರಲ್ಲಿ ಗ್ರೇಟರ್ ನೋಯ್ಡಾದ ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಭರ್ಜರಿ ಎಂಟ್ರಿ ಕೊಟ್ಟಿದ್ದ ಇಂಡಿಯನ್ ಗ್ರ್ಯಾನ್ ಪ್ರಿ ಫಾರ್ಮುಲಾ ಒನ್ ರೇಸಿಗೆ ಸದ್ಯ ಶನಿಯ ವಕ್ರದೃಷ್ಟಿ ಬಿದ್ದಿದೆ. ಬಲ್ಲ ಮೂಲಗಳ ಪ್ರಕಾರ 2014ನೇ ಸಾಲಿನಲ್ಲಿ ನಡೆಯಬೇಕಾಗಿರುವ ಎಫ್1 ರೇಸ್ ರದ್ದಾಗುವ ಸಾಧ್ಯತೆಗಳು ಹೆಚ್ಚಿವೆ.
ಫಾರ್ಮುಲಾ ಒನ್ ಕ್ಯಾಲೆಂಡರ್ ವರ್ಷದಲ್ಲಿ ರಷ್ಯಾ ಪಾದರ್ಪಣೆ ಮಾಡಲಿರುವುದರಿಂದ ಇಂಡಿಯನ್ ಗ್ರ್ಯಾನ್ ಪ್ರಿ ಹಿನ್ನಡೆಗೆ ಕಾರಣವಾಗಲಿದೆ ಎಂದು ವಾಣಿಜ್ಯ ಮುಖಂಡ ಬೆರ್ನಿ ಎಕ್ಲೆಸ್ಟೋನ್ ತಿಳಿಸಿದ್ದಾರೆ.

ಹಂಗೇರಿ ಗ್ರ್ಯಾನ್ ಪ್ರಿ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಬೆರ್ನಿ, ''ಮುಂದಿನ ವರ್ಷ ಇಂಡಿಯನ್ ಗ್ರ್ಯಾನ್ ಪ್ರಿ ಆಯೋಜನೆಯಾಗುವ ಸಂಭವ ಇದೆಯೇ? ಬಹುಶಃ ಇಲ್ಲ" ಎಂದಿದ್ದಾರೆ. ಮತ್ತೊಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಈ 82 ವರ್ಷದ ಬ್ರಿಟನ್ ಕೋಟಿಧೇಶ್ವರ, ಇಂಡಿಯನ್ ಗ್ರ್ಯಾನ್ ಎಂಬುದು 'ಅತಿಯಾದ ರಾಜಕೀಯ' ಎಂದು ಆರೋಪ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಈ ನಡುವೆ ಪ್ರತಿಕ್ರಿಯಿಸಿರುವ ಮೋಟಾರ್ ಸ್ಪೋರ್ಟ್ಸ್ ಕ್ಲಬ್ಸ್ ಆಫ್ ಇಂಡಿಯಾ ಮುಖ್ಯಸ್ಥ ವಿವೇಕ್ ಚಂದೋಕ್, ಮುಂದಿನ ವರ್ಷದ ರೇಸ್ ಇನ್ನು ನಿಗದಿಯಾಗದಿರಬಹುದು. ಆದರೆ ಭವಿಷ್ಯದಲ್ಲಂತೂ ರೇಸ್ ಆಯೋಜನೆ ಖಂಡಿತ ನಡೆಯಲಿದೆ ಎಂದಿದ್ದಾರೆ.
ಇಂಡಿಯನ್ ಗ್ರ್ಯಾನ್ ಪ್ರಿ ಪ್ರಧಾನ ಪ್ರಾಯೋಜಕರಾದ ಜೆಪಿ ಸ್ಪೋರ್ಟ್ಸ್ ಇಂಟರ್ ನ್ಯಾಷನಲ್ ಹಾಗೂ ಎಕ್ಲೆಸ್ಟೋನ್ ಈ ಬಗ್ಗೆ ಮಾತುಕತೆಯಲ್ಲಿ ತೊಡಗಿದ್ದು, ರೇಸ್ ಮುಂದಿನ ವರ್ಷಾಂತ್ಯದಲ್ಲಿ ಅಥವಾ 2015ರ ಆರಂಭದಲ್ಲಿ ನಡೆಸುವ ಕುರಿತು ಚಿಂತನೆಗಳಿವೆ.
ಸಾಮಾನ್ಯವಾಗಿ ದಶಕಗಳಿಂದ ಫಾರ್ಮುಲಾ ಒನ್ ಕ್ಯಾಲೆಂಡರ್ ರಚಿಸುವ ಎಕ್ಲೆಸ್ಟೋನ್, ಅದನ್ನು ಇಂಟರ್ ನ್ಯಾಷನಲ್ ಆಟೋಮೊಬೈಲ್ ಫೇಡರೇಷನ್‌ಗೆ ಸಲ್ಲಿಸುತ್ತಾರೆ. ಈ ಪೈಕಿ 22 ಪ್ರಮುಖ ಎಫ್1 ರೇಸ್‌ಗಳು ಆತಿಥ್ಯ ಸ್ಪರ್ಧೆಯಲ್ಲಿರುತ್ತದೆ. ಹಾಗೆಯೇ ತಂಡಗಳು ಗರಿಷ್ಠ 20 ರೇಸ್‌ಗಳಲ್ಲಿ ಭಾಗವಹಿಸಲು ಆದ್ಯತೆ ನೀಡುತ್ತದೆ.
ಈ ನಡುವೆ ರೇಸ್ ಜಗತ್ತಿಗೆ ಪಾದರ್ಪಣೆ ಮಾಡಲು ರಷ್ಯಾ ಒಲವು ತೋರಿದ್ದು, ನ್ಯೂ ಜೆರ್ಸಿ ಎಫ್1 ಕೂಡಾ ನಿಗದಿಯಾಗಿದೆ. ಅಲ್ಲದೆ ಆಸ್ಟ್ರೀಯಾ ಕೂಡಾ 11 ವರ್ಷಗಳ ಅಂತರಾಳದ ಬಳಿಕ ಎಫ್1 ಜಗತ್ತಿಗೆ ಪುನರಾಗಮನ ಮಾಡುತ್ತಿದೆ.


Click it and Unblock the Notifications








