ಮಾರುತಿ ಸೆಲೆರಿಯೊ ನಿರ್ಮಾಣ ಸಾಮರ್ಥ್ಯ ಹೆಚ್ಚಳ
ಭಾರತ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿ ಬೇಡಿಕೆ ಗಿಟ್ಟಿಸಿಕೊಂಡಿರುವ ಇತ್ತೀಚೆಗಷ್ಟೇ ಲಾಂಚ್ ಆಗಿರುವ ಜನಪ್ರಿಯ ಸೆಲೆರಿಯೊ ಆವೃತ್ತಿಯ ನಿರ್ಮಾಣ ಸಾಮರ್ಥ್ಯ ಹೆಚ್ಚಿಸಲು ದೇಶದ ನಂ.1 ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ ನಿರ್ಧರಿಸಿದೆ.
ಬೇಡಿಕೆ ಹೆಚ್ಚಿರುವ ಹಿನ್ನಲೆಯಲ್ಲಿ ಸೆಲೆರಿಯೊ ವಿತರಣೆ ಪ್ರಕ್ರಿಯೆಯು ತುಂಬಾನೇ ವಿಳಂಬವಾಗುತ್ತಿದೆ. ಇದರಿಂದಾಗಿ ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ. ಇದನ್ನು ಮನಗಂಡಿರುವ ಮಾರುತಿ, ಸೆಲೆರಿಯಾ ನಿರ್ಮಾಣ ಸಾಮರ್ಥ್ಯ ಹೆಚ್ಚಿಸಲು ನಿರ್ಧರಿಸಿದೆ.

ಮಾರುತಿ ಸುಜುಕಿ ಪ್ರಕಾರ, ಕಳೆದ ಮೂರು ತಿಂಗಳಲ್ಲಿ 58,000ಕ್ಕೂ ಹೆಚ್ಚು ಬುಕ್ಕಿಂಗ್ ದಾಖಲಾಗಿವೆ. ಇದರಂತೆ 28,000 ಯುನಿಟ್‌ಗಳನ್ನು ಗ್ರಾಹಕರಿಗೆ ಹಸ್ತಾಂತರಿಸಲಾಗಿದೆ. ಹಾಗಿದ್ದರೂ 30,000ದಷ್ಟು ಗ್ರಾಹಕರು ಇನ್ನು ತಮ್ಮ ನೆಚ್ಚಿನ ಕಾರಿಗಾಗಿ ಕಾಯುತ್ತಿದ್ದಾರೆ.
ಮಾರುತಿ ಸೆಲೆರಿಯೊ ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ವರ್ಷನ್‌ಗೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ವರದಿಯ ಪ್ರಕಾರ ಎಎಂಟಿ ವೆರಿಯಂಟ್‌ಗಾಗಿ ಆರರಿಂದ ಎಂಟು ತಿಂಗಳ ವರೆಗೆ ಕಾಯಬೇಕಾಗಿದೆ.
ಇದರಂತೆ ತಿಂಗಳಿಗೆ 6,000ದಷ್ಟಿದ್ದ ಸೆಲೆರಿಯೊ ಉತ್ಪನ್ನವನ್ನು 7,000ಕ್ಕೆ ಹೆಚ್ಚಿಸಲು ಸಂಸ್ಥೆ ನಿರ್ಧರಿಸಿದೆ. ಈ ಮೂಲಕ ಕಾಯುವಿಕೆ ಅವಧಿ ಗಣನೀಯವಾಗಿ ಕುಸಿಯುವ ನಿರೀಕ್ಷೆಯಲ್ಲಿದೆ.
ಇನ್ನೊಂದೆಡೆ ಆಟೋಮ್ಯಾಟಿಕ್ ವೆರಿಯಂಟ್ ಗಮನವನ್ನು ಬೇರೆಡೆಗೆ ಸ್ಥಳಾಂತರಿಸಲು ಮುಂದಾಗಿರುವ ಮಾರುತಿ, ಸೆಲೆರಿಯೊ ಡೀಸೆಲ್ ವೆರಿಯಂಟ್ ಬಿಡುಗಡೆ ಮಾಡುವ ಇರಾದೆಯಲ್ಲಿದೆ. ಸಂಸ್ಥೆಯು ಈಗಾಗಲೇ ಸಿಎನ್‌ಜಿ ವೆರಿಯಂಟ್ ಪರಿಚಯಿಸಿದೆ.
ಇದೇ ಸಂದರ್ಭದಲ್ಲಿ ಮಾರುತಿ ಸುಜುಕಿ ಸಂಸ್ಥೆಯು ವರ್ಷಕ್ಕೊಂದು ಮಾದರಿ ಎಂಬ ನೀತಿ ಅನುಸರಿಸುವ ಯೋಜನೆಯಲ್ಲಿದೆ. ಈ ನಡುವೆ ಕೆಲವೊಂದು ಫೇಸ್‌ಲಿಫ್ಟ್ ಮಾದರಿಗಳು ಪರಿಚಯವಾಗಲಿದೆ. ಸಂಸ್ಥೆಯು ಈಗಾಗಲೇ ಸ್ವಿಫ್ಟ್ ಫೇಸ್‌ಲಿಫ್ಟ್ ಬಿಡುಗಡೆ ಮಾಡುವ ತಯಾರಿಯಲ್ಲಿದ್ದು, ಡಿಜೈರ್ ಸ್ಪೆಷಲ್ ಎಡಿಷನ್ ಸಹ ಆಗಮನವಾಗಲಿದೆ.


Click it and Unblock the Notifications








