ಗಾಡಿಯಲ್ಲಿ ಸುರಕ್ಷಿತವಾಗಿ ಸಂಚರಿಸಿ - ಅಪಘಾತ ಪರೀಕ್ಷೆ ಕಡ್ಡಾಯ
ಇದೀಗ ಎಲ್ಲವೂ ಅಂತಿಮವಾಗಿದ್ದು, ನೀವಿನ್ನು ಕೆಲವೇ ವರ್ಷಗಳಲ್ಲಿ ನಿಮ್ಮ ಗಾಡಿಯಲ್ಲಿ ಇನ್ನು ಹೆಚ್ಚು ಸುರಕ್ಷಿತವಾಗಿ ಪಯಣಿಸಬಹುದಾಗಿದೆ. ಯಾಕೆಂದರೆ 2017ನೇ ಇಸವಿಯಿಂದ ದೇಶದಲ್ಲಿ ಅಪಘಾತ ಪರೀಕ್ಷೆ (ಢಿಕ್ಕಿ ಪರೀಕ್ಷೆ) ಕಡ್ಡಾಯವಾಗಲಿದೆ.
ಈಗಾಗಲೇ ಯುರೋಪ್ ಖಂಡದಲ್ಲಿ ಅಪಘಾತ ಪರೀಕ್ಷೆ ಕಡ್ಡಾಯವಾಗಿದ್ದು ಪ್ರತಿಯೊಂದು ನೂತನ ಮಾದರಿಯು ಅಪಘಾತ ಪರೀಕ್ಷೆಗೆ ಒಳಗಾಗಬೇಕಾಗಿದೆ. ಇದೀಗ ತುಸು ವಿಳಂಬವಾದರೂ ಸರಿ ಭಾರತದಲ್ಲೂ ಇಂತಹದೊಂದು ನಿಯಮ 2017 ಅಕ್ಟೋಬರ್ ನಲ್ಲಿ ಜಾರಿಗೆ ಬರಲಿದೆ.

2017 ಅಕ್ಟೋಬರ್ ತಿಂಗಳಿಂದ ಪ್ರತಿಯೊಂದು ಹೊಸ ಕಾರಿಗೂ ಅಪಘಾತ ಪರೀಕ್ಷೆ ಕಡ್ಡಾಯವಾಗಲಿದೆ. ಅದೇ ಹೊತ್ತಿಗೆ ಈಗಿರುವ ಮಾದರಿಗಳ ಅಪ್ ಗ್ರೇಡ್ ಮಾದರಿಗಳಿಗೆ 2018 ಅಕ್ಟೋಬರ್ ವರೆಗೆ ಗಡುವು ನೀಡಲಾಗಿದೆ.

ನೂತನ ಅಪಘಾತ ಪರೀಕ್ಷೆ ನಿಯಮದಂತೆ ಕನಿಷ್ಠ ಸುರಕ್ಷಾ ಮಾನದಂಡಗಳನ್ನು ಪ್ರತಿಯೊಂದು ಕಾರು ಕಾಪಾಡಿಕೊಳ್ಳಬೇಕಾಗಿದೆ. ಇದರಲ್ಲಿ ಮುಂಭಾಗದಿಂದ ಗಂಟೆಗೆ 56 ಕೀ.ಮೀ. ಹಾಗೂ ಬದಿಯಿಂದ ಗಂಟೆಗೆ 50 ಕೀ.ಮೀ. ವೇಗದಲ್ಲಿ ಢಿಕ್ಕಿ ಪರೀಕ್ಷೆ ಇರಲಿದೆ.

ಅಂತರಾಷ್ಟ್ರೀಯ ದರ್ಜೆಯ ಸುರಕ್ಷತೆಯನ್ನು ಭಾರತಕ್ಕೂ ತರಲಾಗುತ್ತಿದ್ದು, ಸವಾರ ಸೇರಿದಂತೆ ಚಾಲಕರು ಹೆಚ್ಚು ಸುರಕ್ಷಿತವೆನಿಸಿಕೊಳ್ಳಲಿದ್ದಾರೆ. ಇನ್ನು ಹೊಸ ಕಾರುಗಳಲ್ಲಿ ಏರ್ ಬ್ಯಾಗ್ ಸ್ಟ್ರ್ಯಾಂಡರ್ಡ್ ಆಗಿ ಕಂಡುಬರಲಿದೆ.

ಇತರ ಮುಂದುವರಿದ ದೇಶದಲ್ಲಿರುವ ನ್ಯೂ ಕಾರ್ ಅಸ್ಸೆಸ್ಮೆಂಟ್ ಪ್ರೋಗ್ರೋ (ಎನ್ ಸಿಎಪಿ) ತರಹನೇ ಹೊಸ ಕಾರುಗಳಿಗೆ ಅಂತರಾಷ್ಟ್ರೀಯ ದರ್ಜೆಯ ಭಾರತ್ ನ್ಯೂ ವೆಹಿಕಲ್ ಸೇಫ್ಟಿ ಅಸ್ಸೆಸ್ಮೆಂಟ್ ಪ್ರೋಗ್ರಾಂ (ಬಿಎನ್‌ವಿಎಸ್‌ಎಪಿ) ಜಾರಿಗೆ ತರಲಾಗುವುದು. ಇದು ಯುರೋಪ್ ಸೇರಿದಂತೆ ಜಪಾನ್ ಹಾಗೂ ಅಮೆರಿಕ ದೇಶಗಳ ಮಿಶ್ರಣವಾಗಿರಲಿದೆ.

ರಾಷ್ಟ್ರೀಯ ಆಟೋಮೋಟಿವ್ ಟೆಸ್ಟಿಂಗ್ ಮತ್ತು ಆರ್ ಆ್ಯಂಡ್ ಡಿ ಮೂಲಸೌಕರ್ಯ ಯೋಜನಾ (ಎನ್‌ಎಟಿಆರ್‌ಐಪಿ) ಮತ್ತು ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದು ಹಂತ ಹಂತವಾಗಿ ಯೋಜನೆ ಜಾರಿಗೆ ತರಲಾಗುವುದು. ಅಗತ್ಯ ಮೂಲಸೌಕರ್ಯದ ಬಳಿಕ ಮಾನೇಸರ್‌ನ ಐಕ್ಯಾಟ್‌ನಲ್ಲಿ (iCAT)ಟೆಸ್ಟಿಂಗ್ ಪ್ರಕ್ರಿಯೆಯನ್ನು ಆರಂಭಿಸಲಿದೆ.

ವಾಹನ ವಿಶ್ಲೇಷಕರ ಪ್ರಕಾರ ಈ ಎಲ್ಲ ಬೆಳವಣಿಗೆಗಳು ವಾಹನಗಳಿಗೆ ಸುರಕ್ಷತೆಯನ್ನು ಒದಗಿಸುವುದಾದರೂ ಈ ಎಲ್ಲ ಸುರಕ್ಷಾ ಮಾನದಂಡಗಳನ್ನು ಅನುಷ್ಠಾನಗೊಳಿಸುವುದರಿಂದ ವಾಹನಗಳ ಬೆಲೆಯಲ್ಲಿ ಏರಿಕೆ ಕಂಡುಬರಲಿದೆ. ಯಾಕೆಂದರೆ ವಾಹನಗಳಿಗೆ ರಚನಾತ್ಮಕ ಬದಲಾವಣೆಗಳನ್ನು ತರಬೇಕಾದ ಅಗತ್ಯವಿದೆ ಎಂದಿದ್ದಾರೆ.


Click it and Unblock the Notifications








