2016 ಆಟೋ ಎಕ್ಸ್ ಪೋದಲ್ಲಿ ಜೀಪ್ ಪಾದಾರ್ಪಣೆ
ಯಾಕೋ ಏನೋ ಫಿಯೆಟ್‌ನ ಐಕಾನಿಕ್ ಜೀಪ್ ಬ್ರ್ಯಾಂಡ್ ಭಾರತ ಆಗಮನಕ್ಕೆ ಇನ್ನು ಕಾಲ ಕೂಡಿಬಂದತೇ ಕಾಣಿಸುತ್ತಿಲ್ಲ. ಪ್ರತಿ ಬಾರಿಯೂ ಈ ಬಗ್ಗೆ ವರದಿ ಮಾಡಿದಾಗಲೂ ಫಿಯೆಟ್ ತನ್ನ ಯೋಜನೆಯನ್ನು ನಿಗದಿತ ಕಾಲದಿಂದಲೂ ಮುಂದೂಡತ್ತಲೇ ಬಂದಿದೆ.
ಈಗ ಕೊನೆಗೂ ಬಂದಿರುವ ವಿಚಾರವೆಂದರೆ ಫಿಯೆಟ್‌ನ ಐಕಾನಿಕ್ ಗ್ರ್ಯಾಂಡ್ ಕೆರೊಕೆ ಮತ್ತು ವ್ರ್ಯಾಂಗ್ಲರ್ ಮಾದರಿಗಳು ಮುಂದಿನ ವರ್ಷಾರಂಭದಲ್ಲಿ ರಾಷ್ಟ್ರ ರಾಜಧಾನಿ ನವೆದಹಲಿಯಲ್ಲಿ ಆಯೋಜನೆಯಾಗಲಿರುವ 2016 ಆಟೋ ಎಕ್ಸ್ ಪೋದಲ್ಲಿ ಪಾದಾರ್ಪಣೆಗೈಯಲಿದೆ.

ಈ ಬಾರಿಯಾದರೂ ಫಿಯೆಟ್ ತನ್ನ ಮಾತನ್ನು ಪಾಲಿಸಬಹುದೇ ಎಂಬುದನ್ನು ಕಾದು ನೋಡಬೇಕಾಗಿದೆ. ಅಲ್ಲದೆ ತನ್ನ ಯೋಜನೆಯನ್ನು ಕಾರ್ಯಗತಗೊಳಿಸಲು ದೇಶದಲ್ಲಿರುವ ರಂಜನ್‌ಗಾಂವ್ ಘಟಕದಲ್ಲಿ ಸ್ಥಳೀಯವಾಗಿ ಜೋಡಣೆ ಮಾಡುವ ಇರಾದೆಯನ್ನು ಹೊಂದಿದೆ. ಇದಕ್ಕಾಗಿ ಬರೋಬ್ಬರಿ 280 ಮಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲಿದೆ.
ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ಗ್ರ್ಯಾಂಡ್ ಕೆರೊಕೆ ಮತ್ತು ವ್ರ್ಯಾಂಗ್ಲರ್ 2016ನೇ ಸಾಲಿನಲ್ಲಿ ಬಿಡುಗಡೆಯಾಗಲಿದೆ. ಬಳಿಕ ಇದನ್ನು 2017ರಲ್ಲಿ ಜೀಪ್ ರೆನೆಗಡೆ ಹಿಂಬಾಲಿಸಲಿದೆ. ಒಟ್ಟಿನಲ್ಲಿ ಸ್ಥಳೀಯ ನಿರ್ಮಾಣ ಪ್ರಕ್ರಿಯೆ ಮೂಲಕ ಹೆಚ್ಚು ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳುವುದು ಫಿಯೆಟ್ ಇರಾದೆಯಾಗಿದೆ.

ಅಷ್ಟೇ ಯಾಕೆ ಈಗಿರುವ ಫಿಯೆಟ್ ಡೀಲರ್ ಶಿಪ್ ಮುಖಾಂತರ ಜೀಪ್ ಬ್ರ್ಯಾಂಡ್ ಗಳು ಮಾರಾಟಕ್ಕೆ ಲಭ್ಯವಾಗುವುದಿಲ್ಲ. ಗ್ರಾಹಕರಿಗೆ ಗರಿಷ್ಠ ಅನುಭವ ನೀಡುವುದಕ್ಕಾಗಿ ಎಕ್ಸ್ ಕ್ಲೂಸಿವ್ ವಿತರಕ ಜಾಲವನ್ನು ಫಿಯೆಟ್ ತೆರೆದುಕೊಳ್ಳಲಿದೆ.

ಅಂದ ಹಾಗೆ ದೇಶದಲ್ಲಿ ಮರ್ಸಿಡಿಸ್ ಬೆಂಝ್, ಆಡಿ, ಬಿಎಂಡಬ್ಲ್ಯು ಮತ್ತು ವೋಲ್ವೋ ಮಾದರಿಗಳಿಗೆ ಫಿಯೆಟ್ ಜೀಪ್ ಬ್ರ್ಯಾಂಡ್ ಪ್ರತಿಸ್ಪರ್ಧಿಯಾಗಲಿದೆ.


Click it and Unblock the Notifications








