ಭಾರತದಲ್ಲೂ ಮೋಡಿ ಮಾಡಿತೇ ದಟ್ಸನ್ ಗೊ, ಗೊ ಪ್ಲಸ್ ವಿಶೇಷ ಆವೃತ್ತಿ?
ಜಪಾನ್ ಮೂಲದ ಪ್ರಖ್ಯಾತ ವಾಹನ ಸಂಸ್ಥೆ ನಿಸ್ಸಾನ್‌ನ ಬಜೆಟ್ ಬ್ರಾಂಡ್ ಆಗಿರುವ ದಟ್ಸನ್, ತನ್ನ ಜನಪ್ರಿಯ ಮಾದರಿಗಳಾಗಿರುವ ಗೊ ಹ್ಯಾಚ್ ಬ್ಯಾಕ್ ಮತ್ತು ಗೊ ಪ್ಲಸ್ ಬಹು ಬಳಕೆಯ ವಾಹನಗಳ (ಎಂಪಿವಿ) ವಿಶೇಷ ಆವೃತ್ತಿಗಳನ್ನು ನೆರೆಯ ಇಂಡೋನೇಷ್ಯಾದಲ್ಲಿ ಬಿಡುಗಡೆಗೊಳಿಸಿದೆ.
ಭಾರತದಲ್ಲೂ ಕಳಪೆ ಮಾರಾಟದ ಸಮಸ್ಯೆ ಎದುರಿಸುತ್ತಿರುವ ದಟ್ಸನ್, ಗೊ ಮತ್ತು ಗೊ ಪ್ಲಸ್ ವಿಶೇಷ ಆವೃತ್ತಿಗಳ ಮಾದರಿಯನ್ನು ದೇಶದಲ್ಲೂ ಬಿಡುಗಡೆ ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ನಿಮ್ಮ ಮಾಹಿತಿಗಾಗಿ ದಟ್ಸನ್ ಇತ್ತೀಚೆಗಷ್ಟೇ ಕ್ರಾಸೋವರ್ ಶೈಲಿಯ ರೆಡಿ ಗೊ ಹ್ಯಾಚ್ ಬ್ಯಾಕ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಇದು ಸಣ್ಣ ಕಾರು ವಿಭಾಗದಲ್ಲಿ ಮಾರುತಿ ಸುಜುಕಿ ಆಲ್ಟೊಗೆ ಪ್ರಬಲ ಪ್ರತಿಸ್ಪರ್ಧಿಯಾಗಲಿದೆ.

ಇಂಡೋನೇಷ್ಯಾದಲ್ಲಿ ಈಗ ಬಿಡುಗಡೆಯಾಗಿರುವ ದಟ್ಸನ್ ಗೊ ಪ್ಲಸ್ ಪಂನ್ಕ ವಿಶೇಷ ಆವೃತ್ತಿಯು ಕೇವಲ ಸೀಮಿತ 500 ಯುನಿಟ್ ಗಳಷ್ಟೇ ಮಾರಾಟವಾಗಲಿದೆ. ಇದು ಸಾಮಾನ್ಯ ಆವೃತ್ತಿಗಿಂತಲೂ ವಿಶಿಷ್ಟವಾದ ವೈಶಿಷ್ಟ್ಯಗಳನ್ನು ಪಡೆಯಲಿದೆ.

ದಟ್ಸನ್ ಗೊ ಹಾಗೂ ಗೊ ಪ್ಲಸ್ ವಿಶೇಷ ಆವೃತ್ತಿಯು 1.2 ಲೀಟರ್ ತ್ರಿ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 104 ಎನ್ ಎಂ ತಿರುಗುಬಲದಲ್ಲಿ 68 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಐದು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಲೆಥರ್ ಹೋದಿಕೆ, ಹಿಂದುಗಡೆ ಪಾರ್ಕಿಂಗ್ ಕ್ಯಾಮೆರಾ, 1 ಡಿನ್ ಹೆಡ್ ಯುನಿಟ್ ಜೊತೆ ಕಲರ್ ಪರದೆಯ ಇನ್ಪೋಟೈನ್ಮೆಂಟ್ ಸಿಸ್ಟಂ ಮುಂತಾದವುಗಳು ನೂತನ ಕಾರಿನ ಪ್ರಮುಖ ಆಕರ್ಷಣೆಯಾಗಲಿದೆ.

ವಿಶೇಷ ಬಾಡಿ ಕಿಟ್ ನೊಂದಿಗೂ ಲಭ್ಯವಾಗಲಿರುವ ದಟ್ಸನ್ ಗೊ ಪ್ಲಸ್ ಹಿಂದುಗಡೆ ಬಂಪರ್ ನಲ್ಲೂ ಕ್ರೋಮ್ ಸ್ಪರ್ಶವನ್ನು ಪಡೆಯಲಿದೆ. ಫೈಬರ್ ರೂಫ್ ಸ್ಪಾಯ್ಲರ್ ಮತ್ತು ಕ್ರೋಮ್ ಎಕ್ಸಾಸ್ಟ್ ಕೊಳವೆಗಳು ಇದರಲ್ಲಿರಲಿದೆ.

ಇಂಡೋನೇಷ್ಯಾದಲ್ಲಿ ಭಾರತೀಯ ರುಪಾಯಿ ಪ್ರಕಾರ ದಟ್ಸನ್ ಗೊ ವಿಶೇಷ ಆವೃತ್ತಿಯು 6.34 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಇನ್ನೊಂದೆಡೆ ದಟ್ಸನ್ ಗೊ ಪಂನ್ಕ ವಿಶೇಷ ಆವೃತ್ತಿಯು ಭಾರತೀಯ ರುಪಾಯಿಗಳ ಪ್ರಕಾರ 5.70 ಲಕ್ಷ ರು.ಗಳಷ್ಟು ದುಬಾರಿಯಾಗಿರಲಿದೆ. ಇವೆರಡು ಭಾರತದಲ್ಲಿ ಮತ್ತಷ್ಟು ಸ್ಪರ್ಧಾತ್ಮಕ ಬೆಲೆಗಳಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications