ವಾಹನ ಸವಾರರಿಗೆ ಶಾಕ್; ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳಲ್ಲಿ ಗಣನೀಯವಾದ ಏರಿಕೆ ಕಂಡುಬಂದಿದೆ.
ಕೇಂದ್ರ ಸರಕಾರವು ವಾಹನ ಸವಾರರಿಗೆ ಮಗದೊಂದು ಶಾಕ್ ನೀಡಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೊಳಿಸಿದೆ. ಪೆಟ್ರೋಲ್ ಬೆಲೆ ಲೀಟರ್ ಗೆ 2.21 ರು. ಮತ್ತು ಡೀಸೆಲ್ ಬೆಲೆ ಲೀಟರ್ ಗೆ 1.79 ರು. ಏರಿಕೆಗೊಳಿಸಲಾಗಿದೆ.

ಪರಿಷ್ಕೃತ ಇಂಧನ ಬೆಲೆಗಳು ಶುಕ್ರವಾರ ಮಧ್ಯ ರಾತ್ರಿಯಿಂದಲೇ ಜಾರಿಗೆ ಬರಲಿದ್ದು, ಸ್ಥಳೀಯ ತೆರಿಗೆಯನ್ನು ಹೊರತುಪಡಿಸಿರಲಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಳವಾಗಿರುವುದರಿಂದ ಇಂಧನ ಬೆಲೆ ಏರಿಕೆ ಅನಿವಾರ್ಯವೆನಿಸಿದೆ ಎಂದು ತೈಲೋದ್ಯಮ ಸಂಸ್ಥೆಗಳು ತಿಳಿಸಿದೆ.

ಜಾಗತಿ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಳಿತ ಆಧರಿಸಿ ಪ್ರತಿ 15 ದಿನಗಳಿಗೊಮ್ಮೆ ಇಂಧನ ಬೆಲೆಯನ್ನು ಪರಿಷ್ಕರಿಸಲಾಗುತ್ತಿದೆ.

ಹೊಸ ದರದಂತೆ ರಾಷ್ಟ್ರ ರಾಜಧಾನಿಯಲ್ಲಿ 66.10 ರು.ಗಳಿಷ್ಟಿದ್ದ ಪೆಟ್ರೋಲ್ ಬೆಲೆಯೀಗ 68.94 ರುಪಾಯಿಗಳಿಗೆ ಏರಿಕೆಯಾಗಿದೆ. ಹಾಗೆಯೇ ಡೀಸೆಲ್ ಬೆಲೆಯು 54.57 ರು.ಗಳಿಂದ 56.68 ರು.ಗಳಿಗೆ ಹೆಚ್ಚಳಗೊಂಡಿದೆ.

ಅಂತರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಪೆಟ್ರೋಲ್ ಬೆಲೆಯು ಪ್ರತಿ ಬ್ಯಾರೆಲ್ ಗೆ 57.43 ಅಮೆರಿಕನ್ ಡಾಲರ್ ಗಳಿಂದ 62.82 ಅಮೆರಿಕನ್ ಡಾಲರ್ ಗಳಿಗೆ ಏರಿಕೆಯಾಗಿತ್ತು.

ಇದಕ್ಕೂ ಮೊದಲು ಡಿಸೆಂಬರ್ 01ರಂದು ಪೆಟ್ರೋಲ್ ಬೆಲೆ 13 ಪೈಸೆ ಹಾಗೂ ಡೀಸೆಲ್ ಬೆಲೆ ಪ್ರತಿ ಲೀಟರ್ 12 ಪೈಸೆ ಏರಿಕೆಗೊಳಿಸಲಾಗಿತ್ತು.

ಇನ್ನು ನವೆಂಬರ್ 16ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಪ್ರತಿ ಲೀಟರ್ ಗೆ ಅನುಕ್ರಮವಾಗಿ 1.46 ರು. ಮತ್ತು 1.53 ರು.ಗಳಷ್ಟು ಏರಿಕೆಯಾಗಿತ್ತು.


Click it and Unblock the Notifications








