ಸ್ವಯಂಚಾಲಿತ ಕಾರುಗಳಿಗೆ ಹಾರ್ನ್ ಹೊಡೆಯಲು ಕಲಿಸುತ್ತಿರುವ ಗೂಗಲ್
ಸರ್ಚ್ ಎಂಜಿನ್ ದೈತ್ಯ ಗೂಗಲ್ ಕಳೆದ ಕೆಲವು ವರ್ಷಗಳಿಂದ ಸ್ವಯಂಚಾಲಿತ ಕಾರುಗಳ ಅಭಿವೃದ್ಧಿಯಲ್ಲಿ ತೊಡಗಿರುವುದು ನಿಮಗೆಲ್ಲರಿಗೂ ತಿಳಿದ ವಿಚಾರ. ಈಗ ಸ್ವಯಂಚಾಲಿತ ಕಾರುಗಳ ಬಗ್ಗೆ ಬಿಡುಗಡೆ ಮಾಡಿರುವ ತಾಜಾ ಮಾಸಿಕ ವರದಿಯಲ್ಲಿ, ಸೆಲ್ಪ್ ಡ್ರೈವ್ ಕಾರುಗಳಲ್ಲಿ ಹಾರ್ನ್ ಆಳವಡಿಸಿ ಪರೀಕ್ಷೆ ನಡೆಸಲಾಗುತ್ತಿದೆ ಎಂಬುದನ್ನು ಬಹಿರಂಗಪಡಿಸಿದೆ.
ಗೂಗಲ್ ಸ್ವಯಂಚಾಲಿತ ಕಾರುಗಳಲ್ಲಿ ವಿಶೇಷ ಹಾರ್ನ್ ಗಣನ ವಿಧಾನ (Honk algorithms) ಆಳವಡಿಸಲಾಗುತ್ತಿದ್ದು, ಇತರೆ ಚಾಲಕರಿಗೆ ಯಾವುದೇ ರೀತಿಯ ಗೊಂದಲವನ್ನುಂಟು ಮಾಡದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸ್ವಯಂಚಾಲಿತ ಕಾರುಗಳ ಅಭಿವೃದ್ಧಿಯಲ್ಲಿ ಇದೊಂದು ಅತಿ ಮುಖ್ಯವಾದ ಹಂತವಾಗಿದೆ. ಯಾವ ಸಂದರ್ಭದಲ್ಲಿ ಕಾರಿನ ಹಾರ್ನ್ ಬಳಕೆಯಾಗಬೇಕು ಎಂಬುದು ಮುಖ್ಯವೆನಿಸುತ್ತದೆ.

ಮಾನವರ ನಡುವೆ ರೋಬೋಟ್ ಕಾರುಗಳ ಚಾಲನೆ ಮಾಡಲು ನಿರ್ದಿಷ್ಟ ನಿಯಮಗಳಷ್ಟೇ ಸಾಲದು. ನೈಜ ಪರಿಸ್ಥಿತಿಗೆ ಬಂದಾಗ ಸ್ವಯಂಚಾಲಿತ ಕಾರುಗಳು ನಿಜಸ್ಥಿತಿಯನ್ನು ಗ್ರಹಿಸಿಕೊಂಡು ಅದಕ್ಕೆ ತಕ್ಕಂತೆ ಅರ್ಥಗರ್ಭಿತವಾಗಿ ಪ್ರಕ್ರಿಕ್ರಿಯಿಸುವಂತಿರಬೇಕು ಎಂದು ಗೂಗಲ್ ತಿಳಿಸಿದೆ.

ತನ್ನ ಕಾರುಗಳನ್ನು ಸಭ್ಯ, ವಿವೇಚನೆಯುಳ್ಳ ಸ್ವಯಂಚಾಲಿತ ಕಾರುಗಳು ಎಂದು ವಿಶ್ಲೇಷಿಸಿರುವ ಗೂಗಲ್, ಎಲ್ಲರಿಗೂ ಸುರಕ್ಷಿತ ಚಾಲನೆಯನ್ನುಂಟು ಮಾಡಿದ ಬಳಿಕವಷ್ಟೇ ಹಾರ್ನ್ ಹೊಡೆಯಲಿದೆ ಎಂದಿದೆ.

ಗೂಗಲ್ ಸ್ವಯಂಚಾಲಿತ ಕಾರುಗಳು ಎರಡು ವಿಧದ ಹಾರ್ನ್ ವ್ಯವಸ್ಥೆಯನ್ನು ಹೊಂದಿರಲಿದೆ. ಅವುಗಳಲ್ಲಿ ಚಿಕ್ಕದಾದ ಮತ್ತು ದೀರ್ಘವಾದ ಶಬ್ದ ಹೊರ ಬರಲಿದೆ.

ಈ ಪೈಕಿ ಚಿಕ್ಕದಾದ ಹಾರ್ನ್ ಚಾಲಕರ ಗಮನ ಸೆಳೆಯಲು ಮತ್ತು ದೀರ್ಘವಾದ ಹೆಚ್ಚು ಶಬ್ದಯುತವಾದ ಹಾರ್ನ್ ತುರ್ತು ಪರಿಸ್ಥಿತಿಯಲ್ಲಿ ಎಲ್ಲರ ಗಮನವನ್ನು ತನ್ನತ್ತ ಸೆಳೆಯಲಿದೆ.


Click it and Unblock the Notifications








