ಹೊಸ ಮಹೀಂದ್ರ ಕ್ವಾಂಟೊ ಪುನರಾಗಮನಕ್ಕೆ ರೆಡಿ
ದೇಶದ ಮಾರುಕಟ್ಟೆಯಲ್ಲಿ ಸಾಲು ಸಾಲು ಕಾರುಗಳನ್ನು ಬಿಡುಗಡೆ ಮಾಡುವುದರಲ್ಲಿ ಮಗ್ನವಾಗಿರುವ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆ ಮಹೀಂದ್ರ ಆ್ಯಂಡ್ ಮಹೀಂದ್ರ ಸಂಸ್ಥೆಯೀಗ ಪರಿಷ್ಕೃತ ಕ್ವಾಂಟೊ ಕಾರನ್ನು ಲಾಂಚ್ ಮಾಡುವ ತಯಾರಿಯಲ್ಲಿ ತೊಡಗಿದೆ.
ನವದೆಹಲಿಯಲ್ಲಿ ನಡೆಯಲಿರುವ ಪ್ರತಿಷ್ಠಿತ 2016 ಆಟೋ ಎಕ್ಸ್ ಪೋದಲ್ಲಿ ನೂತನ ಕ್ವಾಂಟೊ ಭರ್ಜರಿ ಪ್ರದರ್ಶನಗೊಳ್ಳುವ ನಿರೀಕ್ಷೆಯಿದೆ. ಇದಕ್ಕೂ ಮುಂಚಿತವಾಗಿ ಮಹೀಂದ್ರ ಕ್ವಾಂಟೊ ಟೆಸ್ಟಿಂಗ್ ವೇಳೆ ರಹಸ್ಯ ಚಿತ್ರಗಳು ಹೊರ ಬಿದ್ದಿವೆ.

ನೂತನ ಮಹೀಂದ್ರ ಕಾರು ಕ್ವಾಂಟೊ ಬದಲಾಗಿ ಕ್ಯಾಂಟೊ ಅಥವಾ ಕ್ರೆಸ್ಟೊ ಎಂದು ಹೆಸರಿಸಿಕೊಳ್ಳುವ ಸಾಧ್ಯತೆಯಿದೆ. ಇಲ್ಲೂ ಮಹೀಂದ್ರ ಸಂಸ್ಥೆಯು ಹೆಸರಿನ ಕೊನೆಯಲ್ಲಿ ತನ್ನ ಅದೃಷ್ಟ 'ಒ' ಅಕ್ಷರವನ್ನು ಉಳಿಸಿಕೊಂಡು ಬಂದಿರುವುದು ಗಮನಾರ್ಹ.

ಇಲ್ಲಿ ಬಿತ್ತರಿಸಿರುವ ರಹಸ್ಯ ಚಿತ್ರಗಳನ್ನು ಗಮನಿಸಿದಾಗ ಬೆಳಕಿಗೆ ಬಂದಿರುವ ಅಂಶಗಳೆಂದರೆ ನೂತನ ಕ್ವಾಂಟೊ, ಹೊಸತಾದ ಫ್ರಂಟ್ ಗ್ರಿಲ್, ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಹೊಸ ಬಂಪರ್, ಬೊನೆಟ್ ಹಾಗೂ ಬಾಡಿ ಪ್ಯಾನೆಲ್ ಪಡೆದುಕೊಳ್ಳಲಿದೆ.

ಮಹೀಂದ್ರ ಸಂಸ್ಥೆಯು ಕಳೆದ ವರ್ಷ ಅಂತ್ಯದ ವೇಳೆಯಲ್ಲಿ ಬಿಡುಗಡೆ ಮಾಡಿರುವ ಟಿಯುವಿ300 ಕಾರಿನಲ್ಲಿರುವುದಕ್ಕೆ ಸಮಾನವಾದ ಎಂಹಾಕ್ 80 ತ್ರಿ ಸಿಲಿಂಡರ್ ಡೀಸೆಲ್ ಎಂಜಿನ್ ಇದರಲ್ಲಿ ಬಳಕೆಯಾಗಲಿದೆ. ಇದು 230 ಎನ್‌ಎಂ ತಿರುಗುಬಲದಲ್ಲಿ 83 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ 5 ಸ್ಪೀಡ್ ಮ್ಯಾನುವಲ್ ಜೊತೆಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ಹೊಸ ಎಂಜಿನ್ ಜೊತೆಗೆ ಆಧುನಿಕತೆಗೆ ತಕ್ಕಂತೆ ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಮಹೀಂದ್ರ ಕ್ವಾಂಟೊ ಭರ್ಜರಿ ಪುನರಾಗಮನ ಮಾಡಿಕೊಳ್ಳುವ ಇರಾದೆಯಲ್ಲಿದೆ. ಇದು ಐದು ಹಾಗೂ ಏಳು ಸೀಟುಗಳ ಆಸನ ವ್ಯವಸ್ಥೆಯನ್ನು ಪಡೆಯಲಿದೆ.

ಕಾರಿನೊಳಗೂ ಗಮನಾರ್ಹ ಬದಲಾವಣೆಗಳನ್ನು ನಿರೀಕ್ಷಿಸಲಾಗುತ್ತಿದ್ದು, ಪರಿಷ್ಕೃತ ಡ್ಯಾಶ್ ಬೋರ್ಡ್, ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸೆಂಟ್ರಲ್ ಕನ್ಸೋಲ್ ಹಾಗೂ ಸ್ಟೀರಿಂಗ್ ಹೆಚ್ಚು ಪರಿಣಾಮಕಾರಿಯೆನಿಸಿಕೊಳ್ಳಲಿದೆ.

ಪರಿಷ್ಕೃತ ಕ್ವಾಂಟೊ ಚಿತ್ರಗಳು ಹೊರ ಬಂದಿರುವಂತೆಯೇ ಮುಂಬರುವ ಹಿರಿಯ ಸೋದರ ಕ್ಸೈಲೋ ಹೇಗೆ ಗೋಚರಿಸಲಿದೆ ಎಂಬುದಕ್ಕೆ ಸೂಚನೆ ಲಭಿಸಿದಂತಾಗಿದೆ.

ಒಟ್ಟಿನಲ್ಲಿ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಟಾಟಾವನ್ನು ಹಿಂದಿಕ್ಕಿ ಮೂರನೇ ಜಿಗಿದಿರುವ ಮಹೀಂದ್ರ ಪ್ರಸಕ್ತ ಸಾಲಿನಲ್ಲಿ ಮತ್ತಷ್ಟು ಮಾದರಿಗಳೊಂದಿಗೆ ಮುಂದೆ ಬರಲಿದ್ದು, ಮಿನಿ ಕ್ಸೈಲೋದೊಂದಿಗೆ ಹೆಚ್ಚಿನ ಮಾರಾಟವನ್ನು ಗುರಿಯಾಗಿರಿಸಿಕೊಂಡಿದೆ.
Source : Auto Column and IndianAutosBlog


Click it and Unblock the Notifications








