ಭಾರತದಲ್ಲಿ ರಸ್ತೆ ಅಪಘಾತಕ್ಕೆ ಪ್ರತಿ ತಾಸಿಗೂ 17 ಬಲಿ
ಆಘಾತಕಾರಿ ವರದಿಯೊಂದರಲ್ಲಿ ಭಾರತೀಯ ರಸ್ತೆಗಳಲ್ಲಿ ನಡೆಯುತ್ತಿರುವ ರಸ್ತೆ ಅಪಘಾತಕ್ಕೆ ಪ್ರತಿ ತಾಸಿನಲ್ಲೂ 17 ಮಂದಿ ಬಲಿಯಾಗುತ್ತಿರುವುದಾಗಿ ಕಂಡುಬಂದಿದೆ. ಇನ್ನು ಬೆಚ್ಚಿ ಬೀಳಿಸುವ ವಿಷಯ ಏನೆಂದರೆ 2015ನೇ ಸಾಲಿನಲ್ಲಿ ಭಾರತದಲ್ಲಿ ಒಟ್ಟಾರೆ ಐದು ಲಕ್ಷಕ್ಕೂ ಹೆಚ್ಚು ಅಪಘಾತ ಪ್ರಸಂಗಗಳು ಘಟಿಸಿ ಹೋಗಿದೆ.
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಎಲ್ಲ ಅಂಶಗಳು ಬಯಲಾಗಿದ್ದು, ಕಳೆದೊಂದು ವರ್ಷದಲ್ಲಿ 1.46 ಅಮಾಯಕರು ರಸ್ತೆ ಅಪಘಾತದಿಂದಾಗಿ ತಮ್ಮ ಜೀವವನ್ನೇ ತೆರುವಂತಾಗಿದೆ.

ದೇಶದಲ್ಲಿ ನಡೆಯುತ್ತಿರುವ ರಸ್ತೆ ಅಪಘಾತಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ನಿತಿನ್ ಗಡ್ಕರಿ, ಎರಡು ವರ್ಷಗಳ ಅರ್ಪಣಾ ಮನೋಭಾವದ ಪರಿಶ್ರಮದ ಬಳಿಕವೂ ಅಪಘಾತ ಪ್ರಮಾಣದಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ ಎಂದಿದ್ದಾರೆ.

ಅನೇಕ ಮಂದಿ ನಮ್ಮನ್ನು ಲೇವಡಿ ಮಾಡುತ್ತಿದ್ದಾರೆ. ಆದರೂ ಈ ವರದಿಯನ್ನು ಸಾರ್ವಜನಿಕರ ಮುಂದಿಡಲು ನಾನು ಬಯಸುತ್ತಿದ್ದೇನೆ. ನಮ್ಮ ಹೃದಯ ಅಪಾರ ನೋವಿನಿಂದ ತುಂಬಿಕೊಂಡಿದ್ದು, ಸಂಪೂರ್ಣ ಸನ್ನಿವೇಶವನ್ನು ಬದಲಾಯಿಸಲು ಬದ್ಧವಾಗಿದ್ದೇನೆ ಎಂದಿದ್ದಾರೆ.

2015ನೇ ವರ್ಷದಲ್ಲಿ ಒಟ್ಟು 501,423ರಷ್ಟು ರಸ್ತೆ ಅಪಘಾತಗಳು ಸಂಭವಿಸಿದೆ. ಇದನ್ನು ಮತ್ತಷ್ಟು ವಿವರವಾಗಿ ಹೇಳುವುದಾದ್ದಲ್ಲಿ ದೈನಂದಿನ 1374ರಷ್ಟು ಅಪಘಾತಗಳು ನಡೆಯುತ್ತಿದೆ.

2015ನೇ ಸಾಲಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಒಟ್ಟು 146133 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ 500279 ಮಂದಿ ಗಾಯಗೊಂಡಿರುವ ವಿಚಾರವನ್ನು ವರದಿಯು ತಿಳಿಸುತ್ತದೆ.

ದೈನಂದಿನ ನಡೆಯುತ್ತಿರುವ 1374 ರಸ್ತೆ ಅಪಘಾತದಲ್ಲಿ 400 ಮಂದಿ ಮೃತಪಡುತ್ತಿದ್ದಾರೆ. ಅಂದರೆ ಪ್ರತಿ ತಾಸಿಗೂ 17 ಮಂದಿ ಬಲಿಯಾಗುತ್ತಿದ್ದಾರೆ.

ಕರ್ನಾಟಕ ಸೇರಿದಂತೆ ತಮಿಳುನಾಡು, ಮಹಾರಾಷ್ಟ್ರ, ಮಧ್ಯ ಪ್ರದೇಶ, ಕರ್ನಾಟಕ, ಉತ್ತರ ಪ್ರದೇಶದಲ್ಲಿ ಶೇಕಡಾ 80ರಷ್ಟು ರಸ್ತೆ ಅಪಘಾತಗಳು ಒಟ್ಟು ಸೇರಿಸಿದರೆ ಒಟ್ಟು ಸಾವಿನ ಸಂಖ್ಯೆಯ ಶೇಕಡಾ 80ರಷ್ಟಾಗುತ್ತದೆ.

10ರಲ್ಲಿ ಎಂಟು ಅಪಘಾತಗಳು ಚಾಲಕರ ತಪ್ಪಿನಿಂದಾಗಿ ಸಂಭವಿಸುತ್ತಿದೆ ಎಂಬ ಆಘಾತಕಾರಿ ವಿಚಾರವನ್ನು ಬಹಿರಂಗಪಡಿಸಲಾಗಿದೆ. ಅಂದರೆ ಇದರ ಪ್ರಮಾಣವು ಶೇಕಡಾ 77.1
ರಷ್ಟಾಗಿದೆ.

ನಿಮಗಿದು ಗೊತ್ತೇನು? ಸ್ವೀಡನ್ ನಲ್ಲಿ ವರ್ಷಂಪ್ರತಿ ಬರಿ ಒಂದು ಅಪಘಾತವಷ್ಟೇ ನಡೆಯುತ್ತಿದೆ. ಇನ್ನೊಂದೆಡೆ ಭಾರತವು ಅತ್ಯಂತ ಅಪಾಯಕಾರಿ ಎನಿಸುತ್ತಿದ್ದು, ಯುವಕರ ಅಸಭ್ಯ ಚಾಲನೆಯು ಇದರ ಹಿಂದಿರುವ ಪ್ರಮುಖ ಕಾರಣವಾಗಿದೆ.

ಒಟ್ಟು ಅಪಘಾತದ ಶೇಕಡಾ 54.1ರಷ್ಟು 15ರಿಂದ 34 ವರೆಗಿನ ಪ್ರಾಯ ಪರಿಧಿಯ ಚಾಲಕರಿಂದಾಗಿ ಘಟಿಸುತ್ತಿದೆ. ಇದರಿಂದಲೇ ರಸ್ತೆ ನಿಯಮದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯದ ಬಗ್ಗೆ ತಿಳಿದು ಬರುತ್ತದೆ.


Click it and Unblock the Notifications








