ಟೊಯೊಟಾ ಎಟಿಯೋಸ್ ತಳಹದಿಯ ಸೆಡಾನ್ ಭಾರತಕ್ಕೆ; ಮಾರುತಿಗೆ ಟಕ್ಕರ್
ಜಪಾನ್ ಮೂಲದ ಪ್ರಖ್ಯಾತ ಕಾರು ಸಂಸ್ಥೆ ಟೊಯೊಟಾ, ಭಾರತದಲ್ಲಿ ಎಟಿಯೋಸ್ ತಳಹದಿಯಲ್ಲಿ ನೂತನ ಮಧ್ಯಮ ಗಾತ್ರದ ಸೆಡಾನ್ ಕಾರನ್ನು ಬಿಡುಗಡೆ ಮಾಡಲಿದೆ. ಇದು ಪ್ರಮುಖವಾಗಿಯೂ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿರುವ ಮಾರುತಿ ಸುಜುಕಿ ಸಿಯಾಝ್ ಮತ್ತು ಹೋಂಡಾ ಸಿಟಿ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.
ಇದಕ್ಕೂ ಮೊದಲು ಟೊಯೊಟಾ ವೈಯೊಸ್ ದೇಶದಲ್ಲಿ ಬಿಡುಗಡೆಯಾಗುವ ಬಗ್ಗೆ ವರದಿಗಳಿದ್ದರೂ ನಿರ್ಮಾಣ ವೆಚ್ಚ ಜಾಸ್ತಿಯಾಗಲಿರುವುದರಿಂದ ಈಗಿರುವ ಎಟಿಯೋಸ್ ತಳಹದಿಯಲ್ಲೇ ಹೊಚ್ಚ ಹೊಸ ಸೆಡಾನ್ ಕಾರು ಪರಿಚಯಿಸುವ ಯೋಜನೆಯನ್ನು ಹೊಂದಿದೆ.

ಬಲ್ಲ ಮೂಲಗಳ ಪ್ರಕಾರ ಟೊಯೊಟಾ ಸಂಸ್ಥೆಯು ಜನಪ್ರಿಯ ಎಟಿಯೋಸ್ ತಳಹದಿಯಲ್ಲಿ ಮಧ್ಯಮ ಗಾತ್ರದ ಸೆಡಾನ್ ಕಾರನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಮೊದಲು ಬ್ರೆಜಿಲ್ ಮಾರುಕಟ್ಟೆಯನ್ನು ತಲುಪಲಿದೆ.

ತದಾ ಬಳಿಕ 2017ನೇ ಸಾಲಿನಲ್ಲಿ ಭಾರತದಕ್ಕೂ ಪ್ರವೇಶಿಸುವ ಸಾಧ್ಯತೆಯಿದೆ. ಇದು ದೇಶದಲ್ಲಿ ಮಾರುತಿ ಸಿಯಾಝ್, ಹೋಂಡಾ ಸಿಟಿ ಜೊತೆಗೆ ಫೋಕ್ಸ್ ವ್ಯಾಗನ್ ವೆಂಟೊ ಮಾದರಿಗಳಿಗೆ ಪ್ರತಿಸ್ಪರ್ಧಿಯನ್ನು ಒಡ್ಡಲಿದೆ.

ಎಟಿಯೋಸ್ ಸಿ ಎಂದು ಕೋಡ್ ಪಡೆದಿರುವ ನೂತನ ಕಾರು, ಹೆಚ್ಚು ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿರುವ ವೈಯೊಸ್ ನಿಂದ ವಿನ್ಯಾಸ ಸ್ಪೂರ್ತಿಯನ್ನು ಪಡೆಯಲಿದೆ.

ಸ್ಪರ್ಧಾತ್ಮಕ ಬೆಲೆಗಳಲ್ಲಿ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಭಾರತ ಹಾಗೂ ಬ್ರೆಜಿಲ್ ನಲ್ಲಿ ಸ್ಥಳೀಯವಾಗಿ ನಿರ್ಮಿಸುವ ಯೋಜನೆಯನ್ನು ಸಂಸ್ಥೆಯು ಹೊಂದಿದೆ. ಇದು ಬ್ರೆಜಿಲ್ ನಲ್ಲಿ 'ಯಾರಿಸ್' ಎಂಬ ಹೆಸರಿನಿಂದ ಮಾರಾಟವಾಗಲಿದೆ.

ಇನ್ನೊಂದೆಡೆ ಬಿ ಫ್ಲ್ಯಾಟ್ ಫಾರ್ಮ್ ನಲ್ಲಿ ನಿರ್ಮಾಣವಾಗುವ ಟೊಯೊಟಾ ವೈಯೊಸ್ ಅನೇಕ ಬಾರಿ ಭಾರತೀಯ ರಸ್ತೆಗಳಲ್ಲಿ ಪರೀಕ್ಷಾರ್ಥ ಸಂಚಾರ ವೇಳೆ ಸೆರೆ ಸಿಕ್ಕಿವೆ. ಆದರೂ ಇದು ಭಾರತದಲ್ಲಿ ನಿರ್ಮಾಣವಾಗುವುದಿಲ್ಲ.

ಇದರಿಂದ ತಿಳಿದು ಬರುವುದೇನೆಂದರೆ ಹೊಸ ಕಾರಿನ ನಿರ್ಮಾಣಕ್ಕೆ ಹೂಡಿಕೆ ಮಾಡಲು ಟೊಯೊಟಾ ಸಿದ್ಧವಾಗುವ ಸಾಧ್ಯತೆ ಕಡಿಮೆಯಾಗಿದೆ. ಹಾಗಾಗಿರುವಾಗ ಎಟಿಯೋಸ್ ತಳಹದಿಯಲ್ಲಿ ನೂತನ ಸೆಡಾನ್ ಕಾರು ದೇಶಕ್ಕೆ ಪ್ರವೇಶಿಸಲಿದೆ.


Click it and Unblock the Notifications








